ಸಾರಾಂಶ
ಇದೀಗ ಟ್ರಸ್ಟ್‌ಗಳಿಗೆ ನೂತನ ಸಾರಥಿಗಳು ಬಂದಿದ್ದು, ಅನುದಾನದ ಕೊರತೆ ಮಧ್ಯೆ ಏನಾದರೂ ವಿಧಾಯಕ ಕಾರ್ಯಗಳಾಗುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.
ಧಾರವಾಡ: ಹತ್ತಾರು ವರ್ಷಗಳಿಂದ ಯಾವುದೇ ಬದಲಾವಣೆ ಇಲ್ಲದೇ ಜಿಡ್ಡುಗಟ್ಟಿದ ವಾತಾವರಣದಲ್ಲಿದ್ದ ಜಿಲ್ಲೆಯ ಐದು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗಳಿಗೆ ಇದೀಗ ಹೊಸ ನಾಮಕರಣ ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶಿಸಿದೆ.
ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗೆ ನೂತನ ಅಧ್ಯಕ್ಷರಾಗಿ ಪಂ. ವೆಂಕಟೇಶಕುಮಾರ, ಸದಸ್ಯರಾಗಿ ಸಂಗೀತಗಾರ್ತಿ ಡಾ. ಶಕ್ತಿ ಪಾಟೀಲ, ಉಸ್ತಾದ ಶಫೀಕ ಖಾನ್, ಡಾ. ಪರಶುರಾಮ ಕಟ್ಟಿಸಂಗಾವಿ, ಹುಬ್ಬಳ್ಳಿಯ ಡಾ. ಚಂದ್ರಿಕಾ ಕಾಮತ್, ಬೆಳಗಾವಿಯ ರಾಘವೇಂದ್ರ ಪೂಜಾರ, ಅಕ್ಕಮಹಾದೇವಿ ಆಲೂರ ಹಾಗೂ ಗುರುಪ್ರಸಾದ ಹೆಗಡೆ ಅವರನ್ನು ನೇಮಕ ಮಾಡಲಾಗಿದೆ.ಚಿತ್ರಕಲಾ ಶಿಲ್ಪಿ ಶ್ರೀ ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನೂತನ ಅಧ್ಯಕ್ಷರಾಗಿ ಕಲಾವಿದ ಬಿ. ಮಾರುತಿ ನೇಮಕವಾಗಿದ್ದು, ಸದಸ್ಯರಾಗಿ ಸುರೇಶ ಹಾಲಭಾವಿ, ಎಫ್.ವಿ. ಚಿಕ್ಕಮಠ, ಡಿ.ಎಂ. ಬಡಿಗೇರ, ಗದಗನ ಡಾ. ಬಿ.ಎಚ್. ಚವ್ಹಾಣ, ಡಾ. ಬಿ.ಎಚ್. ಕುರಿಯವರ, ಎಸ್.ಕೆ. ಪತ್ತಾರ, ರೇಣುಕಾ ಮಾರ್ಕಂಡೇಯ ಸದಸ್ಯರಾಗಿ ನೇಮಕವಾಗಿದ್ದಾರೆ.
ಇನ್ನು, ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷರಾಗಿ ಡಾ. ರಂಜಾನ ದರ್ಗಾ, ಸದಸ್ಯರಾಗಿ ಡಾ. ದೀಪಕ ಆಲೂರ, ವಿಶ್ವನಾಥ ಕುಲಕರ್ಣಿ, ಡಾ. ಸಿ.ಯು. ಬೆಳ್ಳಕ್ಕಿ, ಡಾ. ಪ್ರಕಾಶ ಉಡಿಕೇರಿ, ದ್ರೌಪದಿ ವಿಜಾಪೂರ, ಬಸವರಾಜ ಸೂಳಿಬಾವಿ, ಸುನಂದಾ ಕಡಮೆ ನೇಮಕವಾಗಿದ್ದಾರೆ. ಹಾಗೆಯೇ ಸಾಮ್ರಾಟ್ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನೂತನ ಅಧ್ಯಕ್ಷರಾಗಿ ಪಂ. ಕೈವಲ್ಯಕುಮಾರ ಗುರವ, ಸದಸ್ಯರಾಗಿ ಪಂ. ಸಾತಲಿಂಗಪ್ಪ ದೇಸಾಯಿ, ನಿಜಗುಣಿ ರಾಜಗುರು, ಛೋಟೆ ರಹಿಮತ ಖಾನ್, ಡಾ. ಅಶೋಕ ಹುಗ್ಗಣ್ಣವರ, ಡಾ. ಅನಿಲ ಮೇತ್ರಿ, ಅಲ್ಲಮಪ್ರಭು ಕಡಕೋಳ, ಸುಪ್ರಿಯಾ ಭಟ್ ನೇಮಕವಾಗಿದ್ದಾರೆ.ಸಾಧನಕೇರಿಯ ಡಾ. ದ.ರಾ. ಬೇಂದ್ರೆ ಟ್ರಸ್ಟ್‌ಗೆ ಬೆಳಗಾವಿಯ ಹಿರಿಯ ಪತ್ರಕರ್ತ ಡಾ. ಸರಜೂ ಕಾಟಕರ ಅಧ್ಯಕ್ಷರಾಗಿದ್ದು, ಸದಸ್ಯರಾಗಿ ಬೆಳಗಾವಿಯ ಡಾ. ವೈ.ಎಂ. ಯಾಕೊಳ್ಳಿ, ಡಾ. ಅಶೋಕ ಶೆಟ್ಟರ, ಶೀಲಾಧರ ಮುಗಳಿ, ಡಾ. ಶರಣಮ್ಮ ಗೊರೆಬಾಳ, ಪ್ರಭು ಕುಂದರಗಿ ಹಾಗೂ ಪುನರ್ವಸು ಬೇಂದ್ರೆ ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
ಕ್ರೀಯಾಶೀಲ ಆಗಲಿವೆಯೇ ಟ್ರಸ್ಟ್‌ಗಳು?: ಕೆಲವು ಟ್ರಸ್ಟ್ ಹೊರತುಪಡಿಸಿ ಇಷ್ಟು ವರ್ಷಗಳ ಕಾಲ ಬಹುತೇಕ ಈ ಟ್ರಸ್ಟ್‌ಗಳ ಚಟುವಟಿಕೆಗಳು ಅನುದಾನ ಹಾಗೂ ಕ್ರೀಯಾಶೀಲತೆ ಕೊರತೆಯಿಂದಾಗಿ ನಿಂತ ನೀರಾಗಿದ್ದವು. ಅವರವರ ಜನ್ಮದಿನ, ಪುಣ್ಯತಿಥಿ, ರಾಷ್ಟ್ರೀಯ ಪ್ರಶಸ್ತಿ ವಿತರಣೆ ಹೊರತು ಪಡಿಸಿ ಹೇಳಿಕೊಳ್ಳುವ ಕಾರ್ಯಕ್ರಮಗಳು, ವಿಚಾರ ಸಂಕಿರಣ, ರಾಷ್ಟ್ರೀಯ ಸಂಗೀತೋತ್ಸವ ಅಂತಹ ಟ್ರಸ್ಟ್ ಹೆಸರಿನ ಗಣ್ಯರ ಹೆಸರು ರಾಷ್ಟ್ರ ಮಟ್ಟದಲ್ಲಿ ಪ್ರಚಾರ ಆಗುವಂತಹ ಕಾರ್ಯಗಳಾಗಿಲ್ಲ ಎಂಬ ಬೇಸರ ಇತ್ತು. ಇದೀಗ ಟ್ರಸ್ಟ್‌ಗಳಿಗೆ ನೂತನ ಸಾರಥಿಗಳು ಬಂದಿದ್ದು, ಅನುದಾನದ ಕೊರತೆ ಮಧ್ಯೆ ಏನಾದರೂ ವಿಧಾಯಕ ಕಾರ್ಯಗಳಾಗುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.