ಸಾರಾಂಶ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಗುಡ್ಡದರಂಗವ್ವನಹಳ್ಳಿಯ ದಾವಣಗೆರೆ ವಿಶ್ವವಿದ್ಯಾಲಯದ ಜ್ಞಾನಗಂಗೋತ್ರಿ ಸ್ನಾತಕೋತ್ತರ ಕೇಂದ್ರದಲ್ಲಿ ಐಮಂಗಲ ಪೊಲೀಸ್ ತರಬೇತಿ ಶಾಲೆಯಯ ಸಹಯೋಗದಲ್ಲಿ ಸ್ವಚ್ಛತಾ ಕಾರ್ಯಕ್ರಮ, ಹೊಸ ಅಪರಾಧಿಕ ಕಾನೂನುಗಳ ಅರಿವು ಮತ್ತು ಬಸವ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಐಮಂಗಲ ಪೊಲೀಸ್ ತರಬೇತಿ ಶಾಲೆಯ ಉಪ ಪ್ರಾಂಶುಪಾಲ ಹಾಗೂ ಡಿವೈಎಸ್‍ಪಿ ಪರಶುರಾಮ ಪ್ರಾಸ್ತಾವಿಕ ಮಾತನಾಡಿ, ಜುಲೈ-2024ರಿಂದ ಜಾರಿಗೆ ಬರಲಿರುವ ಹೊಸ ಕಾನೂನಿನ ವ್ಯವಸ್ಥೆ ಹಾಗೂ ಅಪರಾಧಗಳಿಗೆ ಶಿಕ್ಷೆಯ ಸ್ವರೂಪ ಗಳ ಕುರಿತು ಅರಿವು ಮೂಡಿಸಿದರು. ಪೊಲೀಸ್ ಇನ್‌ಸ್ಪೆಕ್ಟರ್ ಕೃಷ್ಣನಾಯ್ಕ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿನ ಕಾನೂನಿನ ವ್ಯವಸ್ಥೆ ಮುಂದುವರಿದಿತ್ತು. ಸ್ವಾತಂತ್ಯ ಬಂದು ಮುಕ್ಕಾಲು ದಶಕ ಕಳೆದರೂ ಅದೇ ಹಳೆಯ ಕಾನೂನಿನ ಅಡಿಯಲ್ಲಿ ಕೆಲವು ಅಪರಾಧಗಳಿಗೆ ಶಿಕ್ಷೆಯನ್ನು ನೀಡುವುದು ಸಾಧ್ಯವಾಗುತ್ತಿರಲಿಲ್ಲ. ಅದಕ್ಕೆ ಸಂಬಂಧಿಸಿದಂತೆ ಹೊಸ ಕಾನೂನಿನ ವ್ಯವಸ್ಥೆಯನ್ನು ತರಲಾಗಿದೆ ಎಂದು ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕ ಡಾ.ನಟರಾಜ್ ಅವರು, ಸೈಬರ್ ಅಪರಾಧಗಳು, ಸಿವಿಲ್ ಅಪರಾಧಗಳು, ಕ್ರಿಮಿನಲ್ ಅಪರಾಧಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿವಳಿಕೆ ಹೇಳಿದರು. ಕಾನೂನಿನ ತಿಳಿವಳಿಕೆ ಬರೀ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಅವರ ತಂದೆ, ತಾಯಿಯವರಿಗೂ ತಿಳಿದಿರಬೇಕಾದುದು ಅತ್ಯವಶ್ಯಕವಾಗಿರುತ್ತದೆ ಎಂದರು.ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಂ.ಯು.ಲೋಕೇಶ್ ಮಾತನಾಡಿ, ಸ್ನಾತಕೋತ್ತರ ಕೇಂದ್ರದಲ್ಲಿ ಸ್ವಚ್ಛತಾ ಕಾರ್ಯಕ್ರಮ, ಹೊಸ ಅಪರಾಧಿಕ ಕಾನೂನುಗಳ ಅರಿವು ಹಾಗೂ ಬಸವ ಜಯಂತಿ ಸೇರಿದಂತೆ ಮೂರು ಕಾರ್ಯ ಕ್ರಮಗಳನ್ನು ಆಯೋಜಿಸಿರುವುದು ತುಂಬಾ ಸಂತೋಷಕರ ಸಂಗತಿ ಎಂದರು.
ವಕೀಲರಾದ ಮಹಮದ್ ಇಮ್ರಾನ್, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಆರ್.ರೂಪೇಶ್ ಕುಮಾರ್, ಎನ್‍ಎಸ್‍ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಬಿ.ಟಿ.ನಿವೇದಿತ, ಡಾ.ಎಂ.ಸುಂದರಂ ಉಪಸ್ಥಿತರಿದ್ದರು.