ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ನಗರದ ಹೊರವಲಯದ ಪಡೀಲ್‌ನಲ್ಲಿ ನಿರ್ಮಾಣವಾಗುತ್ತಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಂತಿಮ ಹಂತದ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಉದ್ಘಾಟನೆಗೆ ಕೊನೆಗೂ ದಿನಗಣನೆ ಶುರುವಾಗಿದೆ. ರಾಜ್ಯ ಕಂದಾಯ ಸಚಿವ ಕೃಷ್ಣ ಭೈರೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭಾನುವಾರ ಕಟ್ಟಡದ ಕಾಮಗಾರಿ ಪರಿಶೀಲನೆ ನಡೆಸಿದ್ದು, ಇನ್ನೊಂದು ತಿಂಗಳೊಳಗೆ ಕೆಲಸ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.ಕಟ್ಟಡದ ಎಲ್ಲ ಕಡೆ ಖುದ್ದು ತೆರಳಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ ಸಚಿವ ಕೃಷ್ಣ ಬೈರೇಗೌಡ, ಆಯಾ ಇಲಾಖೆಗಳು ತಮಗೆ ಹಂಚಿಕೆ ಮಾಡಿದ ಕೊಠಡಿಗಳ ಇಂಟೀರಿಯರ್ ಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕು. ಉದ್ಘಾಟನೆಗೂ ಮುನ್ನ ಕಚೇರಿಗಳು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.ಉದ್ಘಾಟನೆಗೆ ಸಿಎಂ:
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕಟ್ಟಡ ಕಾಮಗಾರಿ ಇನ್ನೊಂದು ತಿಂಗಳೊಳಗೆ ಸಂಪೂರ್ಣವಾಗಲಿದೆ. ರಾಜ್ಯ ಬಜೆಟ್ ಅಧಿವೇಶನದ ಬಳಿಕ ನೂತನ ಜಿಲ್ಲಾಧಿಕಾರಿ ಕಚೇರಿಯನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.ಡಿಸಿ ಕಚೇರಿ ಕಾಮಗಾರಿಗೆ ಅನುದಾನದ ಕೊರತೆ ಇಲ್ಲ. ಸ್ಮಾರ್ಟ್‌ಸಿಟಿ ಯೋಜನೆಯಿಂದ ಈಗಾಗಲೇ ಹಣ ಹೊಂದಿಸಲಾಗಿದೆ. ಅಡಿಟೋರಿಯಂ ಕೆಲಸ ಪೂರ್ಣಗೊಳ್ಳಬೇಕಿದೆ. ಸಂಸದರ ಕೊಠಡಿ ಸಹಿತ ಕೆಲ ಇಲಾಖೆಗಳಿಗೆ ಪ್ರತ್ಯೇಕ ಮೀಟಿಂಗ್ ಹಾಲ್ ಒದಗಿಸಲಾಗಿದೆ. ಅದರ ಬದಲಿಗೆ ಎಲ್ಲ ಇಲಾಖೆಗಳೂ ಒಂದೇ ಕಡೆ ಮೀಟಿಂಗ್ ನಡೆಸಲು ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮನಪಾ ಆಯುಕ್ತ ರವಿಚಂದ್ರ ನಾಯಕ್, ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು. ---ಹಳೆ ಡಿಸಿ ಕಚೇರಿ ಮ್ಯೂಸಿಯಂ ಮಾಡಿ: ಕಂದಾಯ ಸಚಿವ ಸೂಚನೆಮಂಗಳೂರು: ನಗರದ ಬಂದರ್‌ನಲ್ಲಿ ಈಗಿನ ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲೇ ಇರುವ ಬ್ರಿಟೀಷರ ಕಾಲದಲ್ಲಿ ನಿರ್ಮಾಣಗೊಂಡ ಹಳೆ ‘ಕಲೆಕ್ಟರ್ ಆಫೀಸು’ ಕಟ್ಟಡವನ್ನು ಮ್ಯೂಸಿಯಂ ಆಗಿ ಪರಿವರ್ತಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಭಾನುವಾರ ಹಳೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಕಟ್ಟಡವನ್ನು ಪರಿಶೀಲಿಸಿದ ಅವರು ಬಳಿಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಜತೆ ಚರ್ಚಿಸಿದರು.ಸುಮಾರು 200 ವರ್ಷಗಳ ಹಳೆಯ ಈ ಕಟ್ಟಡ ಈಗಲೂ ಸದೃಢವಾಗಿದೆ. ಬಹಳ ಅಪರೂಪದ ಇತಿಹಾಸ ಹೊಂದಿರುವ ಈ ಪಾರಂಪರಿಕ ಕಟ್ಟಡವನ್ನು ಮುಂದಿನ ಜನಾಂಗಕ್ಕೂ ರಕ್ಷಿಸುವ ಉದ್ದೇಶದಿಂದ ಇದನ್ನು ಮ್ಯೂಸಿಯಂ ಆಗಿ ಪರಿವರ್ತಿಸುವುದು ಉತ್ತಮ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಟ್ರಸ್ಟ್ ರಚಿಸಿ, ಪ್ರಮುಖ ವ್ಯಕ್ತಿಗಳನ್ನು ಸೇರಿಸುವಂತೆ ಅವರು ಸೂಚಿಸಿದರು.
ಈ ಕಟ್ಟಡದಲ್ಲಿ ಸ್ಟುಡಿಯೊ ನಿರ್ಮಾಣ, ತೆರೆದ ವೇದಿಕೆ, ಸಣ್ಣ ಉದ್ಯಾನವನ, ವಾಕಿಂಗ್ ಟ್ರ್ಯಾಕ್ ಮತ್ತಿತರ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಪರಿಶೀಲಿಸಲು ತಿಳಿಸಿದರು. ಇಡೀ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರ್ಕಾರದಿಂದಲೇ ನಿರ್ವಹಿಸುವಂತೆ ಅವರು ತಿಳಿಸಿದರು.ಶಾಸಕರಾದ ಐವನ್ ಡಿಸೋಜ, ಮಂಜುನಾಥ್ ಭಂಡಾರಿ, ಜಿಲ್ಲೆಯ ಹಿರಿಯ ಅಧಿಕಾರಿಗಳು ಇದ್ದರು.