ಹೊಸ ಜಿಲ್ಲೆ ಉದಯವಾಗುತ್ತದೆಂಬ ನಿರೀಕ್ಷೆ

| Published : Mar 07 2025, 12:49 AM IST

ಸಾರಾಂಶ

ಬೆಳಗಾವಿ ಬಿಟ್ಟರೆ ಅತಿ ಹೆಚ್ಚು ಜಿ ಪಂ ಕ್ಷೇತ್ರಗಳನ್ನು ಒಳಗೊಂಡಿರುವ ತುಮಕೂರು ಜಿಲ್ಲೆಯನ್ನು ವಿಭಜಿಸಿ ಮತ್ತೊಂದು ಜಿಲ್ಲೆ ಮಾಡುತ್ತಾರೆಂಬ ನಿರೀಕ್ಷೆ ಕಳೆದ ಬಜೆಟ್ ವೇಳೆ ಇತ್ತು. ಆದರೆ ಎಲ್ಲರ ನಿರೀಕ್ಷೆ ಹುಸಿಯಾಯಿತು.

ಕನ್ನಡಪ್ರಭ ವಾರ್ತೆ, ತುಮಕೂರುಬೆಳಗಾವಿ ಬಿಟ್ಟರೆ ಅತಿ ಹೆಚ್ಚು ಜಿ ಪಂ ಕ್ಷೇತ್ರಗಳನ್ನು ಒಳಗೊಂಡಿರುವ ತುಮಕೂರು ಜಿಲ್ಲೆಯನ್ನು ವಿಭಜಿಸಿ ಮತ್ತೊಂದು ಜಿಲ್ಲೆ ಮಾಡುತ್ತಾರೆಂಬ ನಿರೀಕ್ಷೆ ಕಳೆದ ಬಜೆಟ್ ವೇಳೆ ಇತ್ತು. ಆದರೆ ಎಲ್ಲರ ನಿರೀಕ್ಷೆ ಹುಸಿಯಾಯಿತು.ಈಗ ಶುಕ್ರವಾರ ಮಂಡನೆಯಾಗಲಿರುವ ಬಜೆಟ್ ನಲ್ಲಿ ತುಮಕೂರು ಜಿಲ್ಲೆಯನ್ನು ವಿಭಜಿಸಿ ಮತ್ತೊಂದು ಜಿಲ್ಲೆ ಘೋಷಿಸುತ್ತಾರೆಂಬ ನಿರೀಕ್ಷೆ ಹೆಚ್ಚಾಗಿದೆ. ತಿಪಟೂರು ಗಡಿಯಿಂದ ಪಾವಗಡದ ಗಡಿಯವರೆಗೆ ಸುಮಾರು 200 ಕಿ.ಮೀ. ಹೆಚ್ಚು ವ್ಯಾಪ್ತಿಯನ್ನು ಹೊಂದಿರುವ 10 ತಾಲೂಕು 11 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ತುಮಕೂರು ಜಿಲ್ಲೆಯನ್ನು ಆಡಳಿತಾತ್ಮಕ ಕಾರಣದಿಂದಾಗಿ ಜಿಲ್ಲಾ ವಿಭಜನೆ ಅವಶ್ಯಕವಾಗಿದೆ. ಹೀಗಾಗಿ ಜಿಲ್ಲೆ ವಿಭಜನೆ ಮಾಡಿ ಹೊಸ ಜಿಲ್ಲೆ ಘೋಷಿಸಬಹುದೆಂದು ನಿರೀಕ್ಷೆ ಹೆಚ್ಚಾಗಿದೆ.ಈಗಾಗಲೇ ತಿಪಟೂರು, ಮಧುಗಿರಿ ಹಾಗೂ ಶಿರಾ ಭಾಗದ ಜನ ನಮ್ಮ ನಮ್ಮ ಊರುಗಳನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಿ ಎಂದು ಸರ್ಕಾರದ ಮೇಲೆ ಒತ್ತಡ ಹಾಕುತ್ತಾ ಬಂದಿದ್ದಾರೆ. ಮೆಟ್ರೋ ಯೋಜನೆ ತ್ವರಿತಗತಿಯಲ್ಲಿ ತುಮಕೂರಿನವರೆಗೆ ವಿಸ್ತರಣೆಯಾಗಬೇಕಾಗಿದೆ. ಈಗಾಗಲೇ ಹಲವಾರು ಕೈಗಾರಿಕೆಗಳು ತುಮಕೂರಿಗೆ ದಾಂಗುಡಿ ಇಡುತ್ತಿದೆ. ಅಲ್ಲದೇ ವಸಂತನರಸಾಪುರದಲ್ಲಿ ಕೈಗಾರಿಕಾ ಹಬ್ ಅನ್ನು ಕೂಡ ಸ್ಥಾಪಿಸಲಾಗಿದೆ. ಹೀಗಾಗಿ ಮೆಟ್ರೋ ಬಂದರೆ ಸಾಕಷ್ಟು ಅನುಕೂಲವಾಗಲಿದೆ. ತುಮಕೂರಿನಿಂದ ಪ್ರತಿ ದಿನ ಸಾವಿರಾರು ಮಂದಿ ಬೆಂಗಳೂರಿಗೆ ಹೋಗುತ್ತಿದ್ದಾರೆ. ಹೀಗಾಗಿ ಆದ್ಯತೆ ಮೇರೆಗೆ ತುಮಕೂರಿನವರೆಗೆ ಮೆಟ್ರೋ ವಿಸ್ತರಿಸಬೇಕಾಗಿದೆ. ತುಮಕೂರು ಜಿಲ್ಲೆ ಹಲವಾರು ಪ್ರವಾಸಿ ತಾಣಗಳನ್ನು ಹೊಂದಿದ್ದು ಅದರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಮಧುಗಿರಿ ಬಳಿ ಮೈದನಹಳ್ಳಿಯಲ್ಲಿ ಹೇರಳವಾಗಿ ಕಂಡು ಬಂದಿರುವ ಕೃಷ್ಣ ಮೃಗ ವನ್ಯಜೀವಿ ತಾಣವಿದೆ, ಹಾಗೆಯೇ ತಿಮ್ಲಾಪುರ ವನ್ಯಜೀವಿ ತಾಣವಿದೆ. ಮತ್ತು ದೇವರಾಯನದುರ್ಗ ಅರಣ್ಯ ಪ್ರದೇಶವನ್ನು ವಿಶೇಷವಾಗಿ ಅಭಿವೃದ್ಧಿಪಡಿಸಬೇಕಾಗಿದೆ. ಹಾಗೆಯೇ ಏಷ್ಯಾದಲ್ಲೇ ಅತ್ಯಂತ ವಿಶಿಷ್ಟ ಏಕಶಿಲಾ ಬೆಟ್ಟ ಮಧುಗಿರಿಯಲ್ಲಿದ್ದು ಅಲ್ಲಿಗೆ ರೋಪ್ ವೇ ನಿರ್ಮಾಣ ಸಂಬಂಧ ಶುಕ್ರವಾರದ ಬಜೆಟ್ ನಲ್ಲಿ ವಿಶೇಷ ಅನುದಾನ ಘೋಷಿಸಬೇಕಾಗಿದೆ. ಇನ್ನು ಕೈದಳವನ್ನು ಅಭಿವೃದ್ಧಿಗೊಳಿಸಿ ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕಾಗಿದೆ. ಜಿಲ್ಲೆಯಲ್ಲಿ ಇಬ್ಬರು ಪ್ರಭಾವಿ ಸಚಿವರು ಇರುವುದರಿಂದ ಕಳೆದ ಬಜೆಟ್ ನಲ್ಲಿ ಘೋಷಣೆಯಾಗಿದ್ದ ಯೋಜನೆಗಳಿಗೆ ಹಣ ಒದಗಿಸುವುದರ ಜೊತೆಗೆ ಈ ಸಲದ ಬಜೆಟ್ ನಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಬೇಕಾಗಿದೆ.ಇನ್ನು ತುಮಕೂರು ವಿವಿಗೆ ಹೊಸ ಕ್ಯಾಂಪಸ್‌ ಆರಂಭವಾಗಿದ್ದು ಅದರ ಮೂಲಭೂತ ಸೌಕರ್ಯಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕಾಗಿದೆ. ಒಟ್ಟಾರೆಯಾಗಿ ತುಮಕೂರು ಜಿಲ್ಲೆ ಹಲವಾರು ವಿಶೇಷತೆಗಳಿಂದ ಕೂಡಿದ್ದು ಬಜೆಟ್ ನಲ್ಲಿ ಹಣ ಮೀಸಲಿಡಬಹುದೆಂಬ ನಿರೀಕ್ಷೆ ಹೆಚ್ಚಾಗಿದೆ.