ಸಾರಾಂಶ
ಶ್ರೀರಾಜರಾಜೇಶ್ವರಿ ಕೃಪಾಪೋಷಿತ ವಂಶವಾಹಿನಿ ಯಕ್ಷಮೇಳದಿಂದ ಶ್ರೀರಾಮ ದರ್ಶನ ಮಹಿಮೆ ಪ್ರಸಂಗದ ತಾಳಮದ್ದಲೆ ನಡೆಯಿತು.
ಕನ್ನಡಪ್ರಭ ವಾರ್ತೆ ಸಾಗರ
ಯಕ್ಷಗಾನ ತಾಳಮದ್ದಲೆ ಮೂಲಕ ಹೊಸಹೊಸ ಪ್ರಸಂಗಗಳು ಬೆಳಕಿಗೆ ಬರುತ್ತಿರುವುದು ಸ್ವಾಗತಾರ್ಹ ಸಂಗತಿ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಎಚ್.ಎಸ್.ಮೋಹನ್ ಹೇಳಿದರು.ಇಲ್ಲಿನ ಶ್ರೀರಾಜರಾಜೇಶ್ವರಿ ಕೃಪಾಪೋಷಿತ ವಂಶವಾಹಿನಿ ಯಕ್ಷಮೇಳ ಸಂಯೋಜಿಸಿರುವ ನವಪಾಕ್ಷಿಕ ಸರಣಿ ತಾಳಮದ್ದಲೆಯ ೭ನೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಂಶವಾಹಿನಿ ಯಕ್ಷಮೇಳ ಪೌರಾಣಿಕ ಕತೆಯಲ್ಲಿಯೇ ಇರಬಹುದಾದ ಸಣ್ಣಸಣ್ಣ ವಿಷಯಗಳನ್ನು ವಿಸ್ತರಿಸಿ ಹೊಸತನ ನೀಡುವ ಮೂಲಕ ಉತ್ತಮ ಮತ್ತು ಅಪರೂಪದ ಕಥಾನಕವನ್ನು ಪ್ರಸಂಗವಾಗಿಸಿ ಕೊಡುತ್ತಿರುವ ಪ್ರಯತ್ನ ನಿಜಕ್ಕೂ ವಿಶಿಷ್ಟವಾಗಿದೆ ಎಂದು ಪ್ರಶಂಸಿಸಿದರು.
ಕಥಾನಾಯಕನಿಗೆ ಪ್ರತಿ ನಾಯಕನಿಲ್ಲದಿರುವುದು ಹಾಗೂ ಕುತೂಹಲ ಮೂಡಿಸಿ ಅನಿರೀಕ್ಷಿತವಾದ ಮುಕ್ತಾಯ ನೀಡುವ ಈ ರೀತಿಯ ಕಥೆಗಳು ಪುರಾಣದಲ್ಲಿ ಇರುವುದನ್ನು ಹೆಕ್ಕಿ ತೆಗೆದು ಕೇಳುಗರಿಗೆ ತಿಳಿಸುತ್ತಿರುವ ಕ್ರಮ ಉತ್ತಮವಾದದ್ದು ಎಂದರು.ಸಾಹಿತಿ ಭಾರತೀ ಅನಂತ, ವಿಮರ್ಶಕಿ ಭಾಗ್ಯಶ್ರೀ, ಕಲಾಸಕ್ತರಾದ ದತ್ತಾತ್ರೇಯ ಭಟ್, ಮೂರ್ತಿ ಎಂ.ವೈ. ಇದ್ದರು. ಪ್ರಸಂಗಕರ್ತ ರಮೇಶ್ ಹೆಗಡೆ ಗುಂಡೂಮನೆ ಅಧ್ಯಕ್ಷತೆ ವಹಿಸಿದ್ದರು. ನಂತರ ಶ್ರೀರಾಮದರ್ಶನ ಮಹಿಮೆ ಪ್ರಸಂಗದ ತಾಳಮದ್ದಲೆ ನಡೆಯಿತು. ಸೂರ್ಯನಾರಾಯಣ ಹೆಗಡೆ, ಸೃಜನ್ ಗಣೇಶ್ ಹೆಗಡೆ, ಶ್ರೀವತ್ಸ ಹಿಮ್ಮೇಳದಲ್ಲಿ ಮತ್ತು ಬಿ.ಟಿ.ಅರುಣ್ ಬೆಂಕಟವಳ್ಳಿ, ರವಿಶಂಕರ್ ಭಟ್, ಅಶೋಕ್‌ಕುಮಾರ್ ಹೆಗಡೆ, ಪ್ರತೀಕ್ ಬೆಂಕಟವಳ್ಳಿ, ರಮೇಶ್ ಹೆಗಡೆ ಅರ್ಥಧಾರಿಗಳಾಗಿ ಪಾಲ್ಗೊಂಡಿದ್ದರು.