ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯಮೈಷುಗರ್ ಕಾರ್ಖಾನೆಗೆ ಸೇರಿದ ಸಾತನೂರು ಫಾರಂನಲ್ಲೇ ಆಧುನಿಕ ತಂತ್ರಜ್ಞಾನದ ಹೊಸ ಕಾರ್ಖಾನೆಯನ್ನು ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.
ತಾಲೂಕಿನ ಬೂದನೂರು ಗ್ರಾಮದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಈಗ ಕಾರ್ಖಾನೆ ಇರುವ ಜಾಗದಲ್ಲಿ ಸಾಫ್ಟ್‌ವೇರ್ ಪಾರ್ಕ್ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದರು.ಸಾತನೂರು ಫಾರಂನಲ್ಲಿ ಹೊಸ ಕಾರ್ಖಾನೆ ನಿರ್ಮಾಣಕ್ಕೆ ರೈತ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಕೇಳಿದಾಗ, ಎಲ್ಲದಕ್ಕೂ ವಿರೋಧ ಮಾಡುವುದು ಸರಿಯಲ್ಲ. ಸಾಫ್ಟ್‌ವೇರ್ ಪಾರ್ಕ್‌ನ್ನು ಸಾತನೂರಿನಲ್ಲಿ ಮಾಡಲು ಸಾಧ್ಯವೇ. ಅಲ್ಲಿ ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣವಾದರೆ ರೈತರು ಕಬ್ಬು ತರುವುದಕ್ಕೆ ಉತ್ತಮವಾದ ಜಾಗವಾಗಿದೆ. ನಗರದಿಂದ ಕೇವಲ ೨-೩ ಕಿ.ಮೀ. ದೂರದಲ್ಲಿದ್ದು, ರಸ್ತೆ ಸಂಪರ್ಕವೂ ಉತ್ತಮವಾಗಿರುವುದರಿಂದ ಕಬ್ಬು ಸಾಗಣೆಗೆ ಪೂರಕವಾಗಿದೆ ಎಂದರು.
ನಗರ ವ್ಯಾಪ್ತಿಯಲ್ಲಿ ಸಾಫ್ಟ್‌ವೇರ್ ಪಾರ್ಕ್ ನಿರ್ಮಾಣವಾದರೆ ಸ್ಥಳೀಯವಾಗಿ ಯುವಕರಿಗೆ ಉದ್ಯೋಗವಕಾಶಗಳು ದೊರಕಲಿವೆ. ಇದರಿಂದ ಉದ್ಯೋಗವನ್ನರಿಸಿ ವಲಸೆ ಹೋಗುವುದು ತಪ್ಪುತ್ತದೆ. ಈ ವಿಷಯವಾಗಿ ರೈತ ಮುಖಂಡರೊಂದಿಗೆ ಸಮಾಲೋಚನೆ ನಡೆಸುತ್ತೇನೆ. ಸಾಧಕ-ಬಾಧಕಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ವಿರೋಧಕ್ಕೆ ಅವಕಾಶವಿಲ್ಲದಂತೆ ಹೊಸ ಕಾರ್ಖಾನೆ ನಿರ್ಮಿಸುವುದಾಗಿ ಭರವಸೆ ನೀಡಿದರು.ಊಹೆಗೆಲ್ಲಾ ಉತ್ತರ ನೀಡಲಾಗುವುದಿಲ್ಲ:
ಕಾರ್ಖಾನೆ ಆಸ್ತಿಯನ್ನು ಮಾರಾಟ ಮಾಡಿ ಹೊಸ ಕಾರ್ಖಾನೆ ನಿರ್ಮಿಸಲಾಗುವುದೇ ಎಂದಾಗ, ಯಾರು ಹಾಗೆ ಹೇಳಿದವರು, ಸರ್ಕಾರದಲ್ಲಿ ಈ ವಿಷಯವಾಗಿ ಗೆಜೆಟ್ ನೋಟಿಫಿಕೇಷನ್ ಆಗಿದೆಯಾ, ಯಾರಾದರೂ ಈ ಸಂಬಂಧ ಚರ್ಚೆ ನಡೆಸಿದ್ದಾರಾ, ಸುಮ್ಮನೆ ಊಹೆ ಮಾಡಿಕೊಳ್ಳುವುದಕ್ಕೆಲ್ಲಾ ಉತ್ತರ ಕೊಡಲಾಗುವುದಿಲ್ಲ. ಸರ್ಕಾರ ೫೦೦ ಕೋಟಿ ರು. ವೆಚ್ಚದಲ್ಲಿ ಕಾರ್ಖಾನೆಯನ್ನು ನಿರ್ಮಿಸಲಿದೆ ಎಂದು ಸ್ಪಷ್ಟಪಡಿಸಿದರು.ವಿರೋಧ ಮಾಡಿಲ್ಲ:
ಜಾತಿ ಗಣತಿ ವರದಿ ವಿಚಾರವಾಗಿ ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ನೋಡಿಕೊಳ್ಳುವಂತೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಶಾಸಕರೆಲ್ಲರೂ ಸಭೆ ನಡೆಸಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆಯೇ ವಿನಃ ಯಾರೂ ವಿರೋಧ ಮಾಡಿಲ್ಲ. ಆಯೋಗ ಮೊದಲು ಸರ್ಕಾರಕ್ಕೆ ವರದಿ ಕೊಡಲಿ. ಮುಖ್ಯಮಂತ್ರಿಗಳು ನಾವು ಅದನ್ನು ಜಾರಿಗೆ ತರಬೇಕು ಅಂತೇನಿಲ್ಲ ಎಂದಿದ್ದಾರೆ. ಸಿಎಂ ಮತ್ತು ಸರ್ಕಾರದ ಮೇಲೆ ನಮಗೆ ನಂಬಿಕೆ ಇದೆ. ಅವರು ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ ಎಂದರು.ಕಾಮಗಾರಿಗೆ ನಾನೇಕೆ ಅಡ್ಡಿಪಡಿಸಲಿ:
ನಾನು ಗುದ್ದಲಿ ಪೂಜೆ ಮಾಡಿರುವ ಕಾಮಗಾರಿಗಳು ಉದ್ಭಾಟನೆ ಹಂತಕ್ಕೆ ಬರುತ್ತಿವೆ. ನಾನು ಯಾವುದೇ ಕಾಮಗಾರಿಗಳನ್ನು ತಡೆಹಿಡಿದಿಲ್ಲ. ಜೆಡಿಎಸ್‌ನ ರಾಮಚಂದ್ರ ಅವರೇ ನನಗೆ ಫೋನ್ ಮಾಡಿ ನಾವು ಕೆಲಸ ಮಾಡುವುದಕ್ಕೆ ರೆಡಿ ಇದ್ದೇವೆ. ಶುಕ್ರವಾರ ಪೂಜೆ ಮಾಡಿಕೊಡಬೇಕೆಂದು ಕೇಳಿದರು. ಅದಕ್ಕೆ ನಾನು ಒಪ್ಪಿ ಪೂಜೆ ಮಾಡಿಕೊಡುತ್ತಿದ್ದೇನೆ. ಅಂದ ಮೇಲೆ ವಿರೋಧ ಎಲ್ಲಿಂದ ಬಂತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.೨೦೨೨ರಲ್ಲಿ ಪ್ರತಿಭಟನೆ ನಡೆಸುವ ವೇಳೆ ಪಾಕ್ ಪರ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತ್ರ ವಿರುದ್ಧವೂ ತನಿಖೆಗೆ ಸರ್ಕಾರವನ್ನು ಒತ್ತಾಯಿಸುತ್ತೇನೆ. ಶತ್ರುರಾಷ್ಟ್ರದ ವಿರುದ್ಧ ಯಾರೇ ಘೋಷಣೆ ಕೂಗಿದರೂ ನಾವು ಅದನ್ನು ಸಹಿಸುವುದಿಲ್ಲ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಅಪ್ಪಾಜಿಗೌಡ ಸೇರಿದಂತೆ ಇತರರಿದ್ದರು.