ಸಾರಾಂಶ
ಶಿಕ್ಷಣದ ಪ್ರಗತಿ ಮತ್ತು ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಕಾರ್ಯಭಾರವನ್ನು ಶಿಕ್ಷಕರಾದವರು ಅಚ್ಚುಕಟ್ಟಾಗಿ ನಿಭಾಯಿಸಬೇಕು.
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ತಾಲೂಕಿನ ಶೈಕ್ಷಣಿಕ ಪ್ರಗತಿ ಮತ್ತು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಕಲಿಕೆ ಮುಖ್ಯವಾಹಿನಿಗೆ ತರುವುದು ಪ್ರತಿಯೊಬ್ಬ ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ನಿಯೋಜನೆಗೊಂಡ ಹಿನ್ನೆಲೆ ಮಂಗಳವಾರ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಶಿಕ್ಷಣದ ಪ್ರಗತಿ ಮತ್ತು ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಕಾರ್ಯಭಾರವನ್ನು ಶಿಕ್ಷಕರಾದವರು ಅಚ್ಚುಕಟ್ಟಾಗಿ ನಿಭಾಯಿಸಬೇಕು. ಸಾಮಾಜಿಕ ಪ್ರಗತಿಗೆ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಯ ಮೇಲೆ ಅವಲಂಬನೆಯಾಗಿದೆ ಎಂದರು.ಸಂಘದ ಅಧ್ಯಕ್ಷ ಎಸ್. ನಾಗೇಶ್ ಮಾತನಾಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಶಿಕ್ಷಕರೆಲ್ಲರೂ ಉತ್ತಮವಾಗಿ ಶ್ರಮಿಸುವುದರಿಂದ ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಗೆ ತಾಲೂಕು ಪ್ರಥಮ ಸ್ಥಾನದಲ್ಲಿತ್ತು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಪಾಠ ಪ್ರವಚನಗಳನ್ನು ಮಕ್ಕಳಿಗೆ ಹೇಳಿಕೊಡುತ್ತಿದ್ದೇವೆ. ಸಂಘದ ಚಟುವಟಿಕೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರೋತ್ಸಾಹಿಸಿ ಸಹಕಾರವನ್ನು ನೀಡಬೇಕೆಂದು ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷ ಕೆ. ನಾಗರಾಜು, ಪ್ರಧಾನ ಕಾರ್ಯದರ್ಶಿ ಸಿ. ಮಹದೇವಸ್ವಾಮಿ, ಸಹ ಕಾರ್ಯದರ್ಶಿಗಳಾದ ಸೋಮಶೇಖರ, ಸಿ.ಆರ್. ರಾಜಪ್ಪ, ಸಂಘಟನಾ ಕಾರ್ಯದರ್ಶಿಗಳಾದ ಆರ್. ನಾಗೇಂದ್ರ, ಸಿ. ಸುರೇಶ್, ಎಸ್. ಭಾಗ್ಯಮ್ಮ, ಖಜಾಂಚಿ ಬಸವರಾಜು ಹಾಗೂ ನಿರ್ದೇಶಕರು ಇದ್ದರು.