ಸಾರಾಂಶ
ಲಕ್ಕವಳ್ಳಿ ಗ್ರಾಮದಲ್ಲಿ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ತರೀಕೆರೆನೂತನ ಸರ್ಕಾರಿ ಆಸ್ಪತ್ರೆಗೆ ಸುಸಜ್ಜಿತ ಪ್ರಯೋಗಾಲಯ, ಆಧುನಿಕ ಯಂತ್ರೋಪಕರಣಗಳನ್ನು ಒದಗಿಸಿ ತಜ್ಞ ವೈದ್ಯರ ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದ್ದು ಈ ಆಸ್ಪತ್ರೆ ಉಪಯೋಗವನ್ನು ಸಾರ್ವಜನಿಕರು ಪಡೆಯಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಚಿಕ್ಕಮಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಿಂದ ತರೀಕೆರೆ ತಾಲೂಕು ಲಕ್ಕವಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಆರೋಗ್ಯ ಮತ್ತು ಶಿಕ್ಷಣ ಈ ಎರಡು ಇಲಾಖೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದರೆ ಉತ್ತಮ ಸಮಾಜ ಕಟ್ಟಲು ಸಾಧ್ಯ, ಆರೋಗ್ಯ ಬಹಳ ಮುಖ್ಯ. ಹಾಗಾಗಿ ಸರ್ಕಾರ ಸರ್ವರಿಗೂ ಉಚಿತ ಚಿಕಿತ್ಸೆ ಸೌಲಭ್ಯ ಒದಗಿಸಿಕೊಟ್ಟಿದೆ. ರಾಜ್ಯಾ ದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ವೈದ್ಯ ಸಿಬ್ಬಂದಿ ಕೊರತೆ ಇದ್ದಡೆ ಕೂಡಲೇ ಭರ್ತಿ ಮಾಡಲಾಗುತ್ತಿದೆ. ಕಡ್ಡಾಯ ವೈದ್ಯಕೀಯ ಸೇವೆ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ವಿವರಿಸಿದರು. ಸಮುದಾಯ ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೆ ಜಿಲ್ಲಾಧಿಕಾರಿ ಮತ್ತು ಜಿಪಂನಿಂದಲೂ ನೆರವು ನೀಡಬಹುದು.ಇ-ಹೊಸ ಸಾಫ್ಟ್ ವೇರ್ಃ
ವೈದ್ಯರ ನೇಮಕ ಮತ್ತು ಚಿಕಿತ್ಸೆಗೆ ಮೊದಲ ಆದ್ಯತೆ ನೀಡಲಾಗಿದೆ. ಆಸ್ಪತ್ರೆಗಳಲ್ಲಿ ಯಾವುದೇ ಔಷಧ ಮಾತ್ರೆಗಳಿಗೆ ಕೊರತೆ ನೀಗಿಸಲು ಇ-ಹೊಸ ಸಾಫ್ಟ್ ವೇರ್ ಸಿದ್ದಪಡಿಸಲಾಗುತ್ತಿದೆ. ಬಿ.ಪಿ ಮತ್ತು ಶುಗರ್ ನಿಯಂತ್ರಿಸಿದರೆ ಅರ್ಧ ಕಾಯಿಲೆಗಳನ್ನೇ ಬಾರದಂತೆ ತಡೆಗಟ್ಟಬಹುದು. ಹೆರಿಗೆಗಾಗಿ ಖಾಸಗಿ ಆಸ್ಪತ್ರೆ ಹೋಗುವುದನ್ನು ತಪ್ಪಿಸಲು ಸರ್ಕಾರಿ ಆಸ್ಪತ್ರೆ ಗಳಲ್ಲಿ ಹೆರಿಗೆ ಮತ್ತು ಸ್ತ್ರೀರೋಗ ತಜ್ಞರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದರು. 260 ಹೊಸ ಅಂಬುಲೆನ್ಸ್ ಸೇವೆಃ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಆರೋಗ್ಯ ಇಲಾಖೆ ಹೆಚ್ಚು ಸದೃಢವಾಗಿ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸೇವೆಗಾಗಿ ಹೊಸದಾಗಿ 260 ಹೊಸ ಅಂಬುಲೆನ್ಸ್ ಸೇವೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ರಚನಾತ್ಮಕ ಕಾರ್ಯ. ಆರೋಗ್ಯ ಬಹಳ ಮುಖ್ಯ. ಆರೋಗ್ಯದ ಬಗ್ಗೆ ಹೆಚ್ಚು ಆಸಕ್ತಿ ವಹಿಸಬೇಕು. ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ ಎಂದು ಸಷ್ಷ್ಟಪಡಿಸಿದರು.ಶಾಸಕ ಜಿ.ಎಚ್.ಶ್ರೀನಿವಾಸ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದು ಲಕ್ಕವಳ್ಳಿ ಗ್ರಾಮಕ್ಕೆ ಶುಭ ದಿನವಾಗಿದೆ. ಲಕ್ಕವಳ್ಳಿಯಲ್ಲಿ ₹9 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟಿಸಲಾಗಿದೆ. ಮೂವರು ತಜ್ಞ ವೈದ್ಯರ ಮಂಜೂರಾತಿ ಆಗಿದೆ. ಆಧುನಿಕ ಯಂತ್ರೋಪಕರಣ ಒದಗಿಸಲಾಗಿದೆ. ಇಡೀ ರಾಜ್ಯದಲ್ಲೇ ಮೊದಲ ಬಾರಿಗೆ ತರೀಕೆರೆ ಸಾರ್ವಜನಿಕ ಆಸ್ಪತ್ರೆಗೆ ಡಯಾಲಿಸಿಸ್ ಚಿಕಿತ್ಸಾ ಸೌಲಭ್ಯ ಒದಗಿಸಲಾಗಿತ್ತು. ಡಯಾಲಿಸಿಸ್ ಗಾಗಿ ಹೊರಗಡೆ ಹೋಗುವ ವ್ಯವಸ್ಥೆ ಈಗ ಇಲ್ಲ, ತಾಲೂಕಿಗೆ ಹತ್ತು ಪಿಎಚ್.ಸಿ ಕೇಂದ್ರಗಳು ಮಂಜೂರಾಗಿದೆ. ಅಜ್ಜಂಪುರ ತಾಲೂಕು ಆಸ್ಪತ್ರೆ ಉನ್ನತೀ ಕರಿಸಿ ಕೊಡಿ ಅಂಬುಲೆನ್ಸ್ ಅನುಕೂಲ ಮಾಡಿಕೊಡಿ ಮತ್ತು ಇನ್ನೊಬ್ಬ ಮಕ್ಕಳ ವೈದ್ಯರನ್ನು ನೇಮಕ ಮಾಡಿಕೊಡಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಲ್ಲಿ ಮನವಿ ಮಾಡಿದರು. ರಾಜ್ಯದ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಈಡೇರಿಸಿದ್ದಾರೆ. ರಾಜ್ಯದಲ್ಲಿ ತಲಾ ಆದಾಯ ಹೆಚ್ಚಾಗಿದೆ ಎಂದು ಹೇಳಿದರು.
ಲಕ್ಕವಳ್ಳಿ ಗ್ರಾಪಂ ಅಧ್ಯಕ್ಷ ಅಬ್ದುಲ್ ರೆಹಮಾನ್, ಗ್ರಾ.ಪಂ.ಉಪಾಧ್ಯಕ್ಷೆ ಭವಾನಿ, ಮಾಜಿ ಸಂಸದ ಬಿ.ಎನ್.ಚಂದ್ಪಪ್ಪ, ಚಿಕ್ಕಮಗಳೂರು ಡಿಸಿ ಮೀನಾ ನಾಗರಾಜ್, ಜಿ.ಪಂ.ಸಿಇಒ ಎಚ್.ಎಸ್.ಕೀರ್ತನಾ, ಜಿಲ್ಲಾ ಪೋಲೀಸ್ ಅಧೀಕ್ಷಕ ಡಾ.ವಿಕ್ರಮ್ ಅಮಟೆ, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಜೆ.ಚಂದ್ರಶೇಖರ್, ಉಪವಿಭಾಗಾಧಿಕಾರಿ ಎನ್.ವಿ.ನಟೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕೆಮ್ಮು ಔಷಧಿಯ ಗುಣಮಟ್ಟ ತಪಾಸಣೆ: ದಿನೇಶ್ ಗಂಡೂರಾವ್
ಚಿಕ್ಕಮಗಳೂರು: ಮಧ್ಯ ಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಕಾಫ್ ಸಿರಪ್ ಸರಬರಾಜು ಮಾಡಿರುವ ಕಂಪನಿ, ಕರ್ನಾಟಕದಲ್ಲಿ ಸರಬರಾಜು ಮಾಡಿಲ್ಲ. ಕಳೆದ ಎರಡು ತಿಂಗಳಿಂದ ಡ್ರಗ್ ಕಂಟ್ರೋಲ್‌ನಿಂದ ಕೆಮ್ಮಿನ ಔಷಧಿಯ ನಿರಂತರವಾಗಿ ತಪಾಸಣೆ ಮಾಡುತ್ತಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗಂಡೂರಾವ್ ಹೇಳಿದ್ದಾರೆ.ಕಾರ್ಯಕ್ರಮದ ನಿಮಿತ್ತ ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿಗೆ ಸೋಮವಾರ ಆಗಮಿಸಿದ್ದ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಎರಡು ವರ್ಷಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕಾಫ್ ಸಿರಾಪ್ ಕೊಡ ಬಾರದು. 5 ವರ್ಷಗಿಂತ ಕಡಿಮೆ ಇರುವ ಮಕ್ಕಳಿಗೆ ವೈದ್ಯರ ಸಲಹೆ ಮೇರೆಗೆ ಸಿರಪ್ ನೀಡಬೇಕೆಂಬ ಮಾರ್ಗ ಸೂಚಿ ಮೊದಲಿನಿಂದಲೂ ಇದೆ ಎಂದರು.ಮಧ್ಯಪ್ರದೇಶ, ರಾಜಸ್ಥಾನ್‌ನಲ್ಲಿ ಆಗಿರುವಂತೆ ನಮ್ಮ ರಾಜ್ಯದಲ್ಲಿ ಏನೂ ಆಗಿಲ್ಲ. ಕಳೆದ 2 ತಿಂಗಳಿಂದ ಡ್ರಗ್ ಕಂಟ್ರೋಲ್ ನಿಂದ ಸಿರಪ್‌ನ ತಪಾಸಣೆ ಮಾಡುತ್ತಿದ್ದೇವೆ. ಅವುಗಳಲ್ಲಿ ಕಾಫ್ ಸಿರಪ್ ಸೇರಿದಂತೆ ಕೆಲವು ಔಷಧಿಗಳ ಕ್ಯಾಲಿಟಿ ಕಡಿಮೆ ವರದಿ ಬಂದ ಹಿನ್ನಲೆಯಲ್ಲಿ ಸಂಬಂಧಿಸಿದ ಕಂಪನಿಗಳ ವಿರುದ್ಧ ಕೇಸ್ ದಾಖಲಿಸಿ, ಔಷಧಿಗಳನ್ನು ಸೀಜ್ ಮಾಡಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ಇದೊಂದು ನಿರಂತರ ಪ್ರಕ್ರಿಯೆ ಎಂದು ಹೇಳಿದರು.ಎರಡು ರಾಜ್ಯಗಳಿಗೆ ಕಾಫ್ ಸಿರಪ್ ಸರಬರಾಜು ಮಾಡಿದ ಕಂಪನಿಗಳು ನಮ್ಮ ರಾಜ್ಯಕ್ಕೆ ಸರಬರಾಜು ಮಾಡಿಲ್ಲ, ಅಂತಹ ಕಂಪನಿಗಳಿಂದ ಸರಬರಾಜು ಮಾಡಿದ್ದರೆ ಸೀಜ್ ಮಾಡಿ ಎಂದು ಹೇಳಿದ್ದೇವೆ ಎಂದ ಸಚಿವರು, ಈಗಾಗಲೇ ಜಾರಿಯಲ್ಲಿರುವ ಮಾರ್ಗ ಸೂಚಿ ಜತೆಗೆ ಹೊಸ ಮಾರ್ಗಸೂಚಿಯನ್ನು ಮೆಡಿಕಲ್ ಗಳಿಗೆ ಆರೋಗ್ಯ ಇಲಾಖೆಯಿಂದ ಬಿಡುಗಡೆ ಮಾಡಲಾಗುವುದು ಎಂದರು.
ತನಿಖೆ ಪೊಲೀಸರು ಮಾಡ್ತಾರೆಧರ್ಮಸ್ಥಳದ ವಿರುದ್ಧ ನಡೆದಿರುವ ಷಡ್ಯಂತ್ರದ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ತನಿಖೆಯಲ್ಲಿ ಸರ್ಕಾರ ಭಾಗವಹಿಸಲ್ಲ, ಪೊಲೀಸರು ಮಾಡುತ್ತಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ವೈಯಕ್ತಿಕ ವಿಚಾರ, ಮತ್ಯಾರಿಗೋ ಸಪೋರ್ಟ್, ಇನ್ಯಾರಿಗೋ ತೊಂದರೆ ಕೊಡೋದು ಇಲ್ಲವೇ ಇಲ್ಲ. ತನಿಖೆ ಹಾಗೂ ಸಾಕ್ಷಿಗಳ ಆಧಾರದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಆಗಲಿದೆ. ಆರಂಭದಿಂದಲೂ ನಮ್ಮ ಸರ್ಕಾರ ಪ್ರಕರಣದಲ್ಲಿ ನಿಷ್ಪಕ್ಷಪಾತ ವಾಗಿದೆ. ವರದಿ ಯಾವಾಗ ಕೊಡುತ್ತಾರೆ ಎಂದು ಇಷ್ಟು ಬೇಗ ನಾನು ಹೇಳಲು ಆಗುವುದಿಲ್ಲ ಎಂದರು.
6ಕೆಟಿಆರ್.ಕೆ.10ಃತರೀಕೆರೆ ಸಮೀಪದ ಲಕ್ಕವಳ್ಳಿ ಗ್ರಾಮದಲ್ಲಿ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಗಾಟನಾ ಸಮಾರಂಭದಲ್ಲಿ ಕಾರ್ಯಕ್ರಮದ ಉದ್ಗಾಟನೆಯನ್ನು ಕರ್ನಾಟಕ ಸರ್ಕಾರ ಇಂಧನ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ.ಜಾರ್ಜ್ ಅವರು ನೇರವೇರಿಸಿದರು. ಕರ್ನಾಟಕ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ , ಶಾಸಕರಾದ ಜಿ.ಹೆಚ್.ಶ್ರೀನಿವಾಸ್, ಲಕ್ಕವಳ್ಳಿ ಗ್ರಾ.ಪಂ.ಅಧ್ಯಕ್ಷರು ಅಬ್ದುಲ್ ರೆಹಮಾನ್, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಜಿ.ಚಂದ್ರಶೇಖರ್ ಮತ್ತಿತರರು ಇದ್ದಾರೆ.