ಅರೆಬರೆಯ ಅಭಿವೃದ್ಧಿಯಲ್ಲಿಯೇ ನಲುಗುತ್ತಿರುವ ಗಣಿಜಿಲ್ಲೆ ಬಳ್ಳಾರಿ 2026ನೇ ಸಾಲಿನಲ್ಲಾದರೂ ಪ್ರಗತಿಯ ಮುಂದಡಿ ಇಡುವಂತಾಗಬೇಕು

ಮಂಜುನಾಥ ಕೆ.ಎಂ

ಬಳ್ಳಾರಿ: ಅರೆಬರೆಯ ಅಭಿವೃದ್ಧಿಯಲ್ಲಿಯೇ ನಲುಗುತ್ತಿರುವ ಗಣಿಜಿಲ್ಲೆ ಬಳ್ಳಾರಿ 2026ನೇ ಸಾಲಿನಲ್ಲಾದರೂ ಪ್ರಗತಿಯ ಮುಂದಡಿ ಇಡುವಂತಾಗಬೇಕು ಎಂದು ಜಿಲ್ಲೆಯ ಜನರ ಬಹು ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಆದರೆ, ಈ ಜಿಲ್ಲೆಯ ಅಭಿವೃದ್ಧಿಯ ನೊಗ ಹೊತ್ತು ಸಂಸದರು, ಶಾಸಕರು ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಕ್ಷೇತ್ರದ ಬೇಕು-ಬೇಡಗಳಿಗೆ ಹೇಗೆ ಸ್ಪಂದಿಸುತ್ತಾರೆ ಎಂಬ ಕುತೂಹಲವಿದೆ.

ಮರೆಗೆ ಸರಿದ 2025ನೇ ಸಾಲಿನಲ್ಲಿ ಜಿಲ್ಲೆಯ ಅಭಿವೃದ್ಧಿ ಅಷ್ಟಕ್ಕಷ್ಟೇ ಎಂಬಂತಾಯಿತು. ಈ ಬಾರಿಯಾದರೂ ಗಣಿ ಜಿಲ್ಲೆಯನ್ನು ಬಾಧಿಸುತ್ತಿರುವ ಅನೇಕ ಸಮಸ್ಯೆ-ಸಂಕಷ್ಟಗಳಿಗೆ ಜನಪ್ರತಿನಿಧಿಗಳು ಸ್ಪಂದಿಸುವಂತಾಗಬೇಕು ಎಂಬ ಆಗ್ರಹ ಜನಸಮುದಾಯದ್ದು. ಕಳೆದ ಹಲವು ವರ್ಷಗಳಿಂದ ಬೇಡಿಕೆಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ, ಮಹಿಳಾ ಪಾಲಿಟೆಕ್ನಿಕ್ ಕಾಲೇಜು, ಒಣಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆ, ಬಳ್ಳಾರಿ ಮಹಾನಗರಕ್ಕೆ ನಿರಂತರ ನೀರು ಪೂರೈಕೆ ಯೋಜನೆ, ಸುಧಾಕ್ರಾಸ್ ರೈಲ್ವೆಗೇಟ್‌ನ ಮೇಲ್ಸೇತುವೆ ನಿರ್ಮಾಣ ಕಾರ್ಯ ಶೀಘ್ರ ಪೂರ್ಣಗೊಳಿಸುವುದು, ಪ್ರವಾಸೋದ್ಯಮ ಉತ್ತೇಜನಕ್ಕೆ ಬಳ್ಳಾರಿಯ ಐತಿಹಾಸಿಕ ಕೋಟೆಗೆ ರೋಪ್‌ವೇ ನಿರ್ಮಾಣ,

ಜೀನ್ಸ್‌ ಅಪರೆಲ್ ಪಾರ್ಕ್ ಸ್ಥಾಪನೆ, ವಿಮಾನ ಹಾರಾಟಕ್ಕೆ ಚಾಲನೆ, ಬಳ್ಳಾರಿ- ಸಿರುಗುಪ್ಪ- ಸಿಂಧನೂರು ನೂತನ ರೈಲು ಮಾರ್ಗ ನಿರ್ಮಾಣ, ಕಂಪ್ಲಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮಿನಿ ವಿಧಾನಸೌಧ ಹಾಗೂ 100 ಬೆಡ್‌ ಆಸ್ಪತ್ರೆ ಕಾಮಗಾರಿ ಬೇಗ ಪೂರ್ಣಗೊಳಿಸುವುದು, ಕಂಪ್ಲಿಯಲ್ಲಿಸಕ್ಕರೆ ಕಾರ್ಖಾನೆ ಸ್ಥಾಪನೆ ಹಾಗೂ ಬಳ್ಳಾರಿ -ಕೊಪ್ಪಳ ಜಿಲ್ಲೆಗಳ ಸಂಪರ್ಕಕೊಂಡಿಯಾಗಿರುವ ಕಂಪ್ಲಿ ಗಂಗಾವತಿ ನಡುವಿನ ಸೇತುವೆ ನಿರ್ಮಾಣಕ್ಕೆ ಚಾಲನೆ ಸೇರಿದಂತೆ ಜಿಲ್ಲೆಯ ಐದು ತಾಲೂಕುಗಳ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಬೇಡಿಕೆಗಳು ಪೂರ್ಣಗೊಳ್ಳದಾಗಿವೆ. ನಗರ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ನೆಲೆಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳಿಗೆ ವೇಗ ದೊರೆಯಬೇಕಿದ್ದು ಜಿಲ್ಲೆಯ ಜನಪ್ರತಿನಿಧಿಗಳು ನೂತನ 2026ನೇ ಸಾಲಿನಲ್ಲಿ ಎಷ್ಟರ ಮಟ್ಟಿಗೆ ತಮ್ಮ ಕ್ಷೇತ್ರ ಅಭಿವೃದ್ಧಿಗೆ ಒತ್ತು ನೀಡುತ್ತಾರೆ. ಜನಾಶಯದಂತೆ ಹೇಗೆ ಜನಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಗಣಿಜಿಲ್ಲೆಯ ಜನರದ್ದಾಗಿದೆ.

ಕಂಪ್ಲಿ ಅಭಿವೃದ್ಧಿಗೆ ಗಮನ ನೀಡುವೆ-ಶಾಸಕ ಗಣೇಶ್

ಕಂಪ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗಾಗಲೇ ಅನೇಕ ಕಾರ್ಯಯೋಜನೆ ರೂಪಿಸಿಕೊಂಡಿದ್ದು

ಈ ವರ್ಷದಲ್ಲಿ ಭಾಗಶಃ ಪೂರ್ಣ ಮಾಡಲು ಶ್ರಮಿಸುವೆ.

ಕಂಪ್ಲಿ-ಗಂಗಾವತಿ ಸೇತುವೆ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಈ ವರ್ಷ ಖಂಡಿತ ಪೂರ್ಣಗೊಳಿಸುವೆ.

ಕಂಪ್ಲಿಯಲ್ಲಿ 112 ಎಕರೆ ಪ್ರದೇಶದಲ್ಲಿ ಕೃಷಿಗೆ ಸಂಬಂಧಿ ಯೋಜನೆ ರೂಪಿತವಾಗುತ್ತಿದೆ.

ಮಣ್ಣು ಸಂಶೋಧನಾ ಕೇಂದ್ರ, ಬೀಜ ಸಂಶೋಧನೆ ಸೇರಿದಂತೆ ರೈತ ಸಂಬಂಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ಕಂಪ್ಲಿ ಸೋಮಪ್ಪ ಕರೆಯಲ್ಲಿ ಇನ್‌ಡೋರ್ ಸ್ಟೇಡಿಯಂ ನಿರ್ಮಿಸುವ ಉದ್ದೇಶವಿದೆ. ಜಿಮ್, ಗ್ರಂಥಾಲಯ, ಗಾರ್ಡನ್, ಈಜುಕೊಳ ನಿರ್ಮಿಸಲಾಗುವುದು.

ತಾಂತ್ರಿಕ ಶಿಕ್ಷಣದ ಕೇಂದ್ರಗಳನ್ನು ತರಲು ಶ್ರಮಿಸಲಾಗುವುದು.

ಕಾರ್ಮಿಕ ಇಲಾಖೆ ಮಕ್ಕಳಿಗೆ ವಸತಿಯುತ ಶಾಲೆ ಆರಂಭಿಸಲು ಕ್ರಮ ವಹಿಸಲಾಗುವುದು.

ಕ್ಷೇತ್ರದ ಎಲ್ಲ ಗ್ರಾಮೀಣ ಹಾಗೂ ಕಂಪ್ಲಿ ನಗರ ಪ್ರದೇಶದಲ್ಲಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲಾಗುವುದು.

ಬಳ್ಳಾರಿ ನಗರಕ್ಕೆ ಸಮರ್ಪಕ ನೀರು ಪೂರೈಕೆ ಕ್ರಮ: ಶಾಸಕ ನಾರಾ ಭರತ್ ರೆಡ್ಡಿ

ಬಳ್ಳಾರಿ ಮಹಾನಗರಕ್ಕೆ ಕುಡಿವನೀರಿನ ಸಮಸ್ಯೆ ತಪ್ಪಿಸಲು ತುಂಗಭದ್ರಾ ಜಲಾಶಯದಿಂದ ನೇರವಾಗಿ ಪೈಪ್‌ಲೈನ್ ಮೂಲಕ ಕುಡಿವನೀರು ಪೂರೈಕೆ ಮಾಡುವ ಯೊಜನೆ ರೂಪಿಸಿಕೊಂಡಿದ್ದು ಈ ವರ್ಷ ಪೂರ್ಣಗೊಳ್ಳಲಿದೆ.

ಬಳ್ಳಾರಿಯ ತೀರಾ ಹಳೆಯದಾದ ಒಳಚರಂಡಿ ವ್ಯವಸ್ಥೆಯನ್ನು ಬದಲಿಸಿ, ಹೊಸದಾಗಿ ಚರಂಡಿಗಳನ್ನು ನಿರ್ಮಿಸಲಾಗುವುದು. ಇದು ಬಳ್ಳಾರಿಯ ಸ್ವಚ್ಛತೆಯ ಹಿನ್ನೆಲೆಯಲ್ಲಿ ಬಹಳ ಮುಖ್ಯವಾದ ಕೆಲಸವಾಗಿದ್ದು, ಇದನ್ನು ಈ ವರ್ಷವೂ ಪೂರ್ಣಗೊಳಿಸಲಾಗುವುದು.

ಸರ್ಕಾರಿ ಕಾನೂನು ಕಾಲೇಜು ನಿರ್ಮಿಸಲು ಈಗಾಗಲೇ ಪೂರಕ ಸಿದ್ಧತೆಯನ್ನು ಮಾಡಿಕೊಂಡಿದ್ದು ಕಾಲೇಜು ಸಹ ಈ ವರ್ಷವೇ ಪೂರ್ಣಗೊಳಿಸುವ ಉದ್ದೇಶವಿದೆ.

ಈ ಭಾಗದ ಜೀನ್ಸ್‌ ಕಾರ್ಮಿಕರು ಹಾಗೂ ಉದ್ಯಮಿಗಳ ಒತ್ತಾಸೆಯಂತೆಯೇ ಜೀನ್ಸ್ ಅಪರೇಲ್ ಪಾರ್ಕ್ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು.

ಬಳ್ಳಾರಿ ನಗರದ ಮುಖ್ಯ ವೃತ್ತಗಳು ಹಾಗೂ ರಸ್ತೆಗಳನ್ನು ಸಂಪೂರ್ಣ ಅಭಿವೃದ್ಧಿಪಡಿಸಿ, ಬಳ್ಳಾರಿಯನ್ನು ಸ್ವಚ್ಛ ಹಾಗೂ ಸುಂದರ ನಗರವನ್ನಾಗಿಸಲು ಕ್ರಮ ಕೈಗೊಳ್ಳಲಾಗುವುದು.