ಮಂಗಳೂರು: ದ.ಕ.ಜಿಲ್ಲಾ ನೂತನ ಖಾಝಿಯಾಗಿ ಪಾಣಕ್ಕಾಡ್ ಸೈಯದ್ ನಾಸಿರ್ ಅಬ್ದುಲ್ ಹಯ್ಯಾ ಶಿಹಾಬುದ್ದೀನ್ ಬಾಅಲವಿ ನಗರದ ಬಂದರ್ ಅನ್ಸಾರಿ ರಸ್ತೆಯಲ್ಲಿರುವ ಝೀನತ್ ಬಕ್ಷ್ ಯತೀಂ ಖಾನಾ ಹಾಲ್‌ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿದರು.ಮಸ್ಜಿದ್ ಝೀನತ್ ಬಕ್ಷ್ ಮತ್ತು ಈದ್ಗಾ ಜುಮಾ ಮಸ್ಜಿದ್ ಅಧ್ಯಕ್ಷ ಡಾ.ಹಾಜಿ ಯೇನೆಪೋಯ ಅಬ್ದುಲ್ಲ ಕುಂಞಿ ಅಧ್ಯಕ್ಷತೆ ವಹಿಸಿದ್ದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಕೋಶಾಧಿಕಾರಿ, ಕೇರಳ ಮುಸ್ಲಿಂ ಲೀಗ್ ಅಧ್ಯಕ್ಷ ಸೈಯದ್ ಸ್ವಾದಿಕ್ ಅಲಿ ಶಿಹಾಬ್ ತಂಙಳ್, ಮಂಗಳೂರನ್ನು ಕೇಂದ್ರೀಕರಿಸಿಕೊಂಡು ದ.ಕ.ಜಿಲ್ಲೆಯ ಖಾಝಿಯಾಗಿ ಅಧಿಕಾರ ಸ್ವೀಕರಿಸಿರುವ ಸೈಯದ್ ನಾಸಿರ್ ಶಿಹಾಬುದ್ದೀನ್ ಬಾಅಲವಿ ಅವರಿಗೆ ಹೊಣೆಗಾರಿಕೆ ನಿರ್ವಹಿಸಲು ಅಲ್ಲಾಹನು ಅನುಗ್ರಹಿಸಲಿ ಎಂದರು.

ಸಮಸ್ತದ ಪ್ರಧಾನ ಕಾರ್ಯದರ್ಶಿ ಶೈಖುನಾ ಎಂ.ಟಿ. ಅಬ್ದುಲ್ಲಾ ಮುಸ್ಲಿಯಾರ್‌, ಸಮಸ್ತ ಕೋಶಾಧಿಕಾರಿ ಶೈಖುನಾ ಕೊಯ್ಯೋಡ್ ಉಮರ್ ಮುಸ್ಲಿಯಾರ್, ಎಸ್‌ವೈಎಸ್ ಕೇಂದ್ರ ಕಾರ್ಯದರ್ಶಿ ಅಬ್ದುಸ್ಸಮದ್ ಪುಕೋಟೂರು, ಆರೋಗ್ಯ ಸಚಿವ ಯು.ಟಿ. ಖಾದರ್ ಶುಭ ಹಾರೈಸಿದರು.

ಮಸ್ಜಿದ್ ಝೀನತ್ ಬಕ್ಷ್ ಮತ್ತು ಈದ್ಗಾ ಜುಮಾ ಮಸ್ಜಿದ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಪರಿಚಯಿಸಿದರು. ಮಸ್ಜಿದ್ ಝೀನತ್ ಬಕ್ಷ್ ಮತ್ತು ಈದ್ಗಾ ಜುಮಾ ಮಸ್ಜಿದ್ ಕೋಶಾಧಿಕಾರಿ ಹಾಜಿ ಎಸ್.ಎಂ. ರಶೀದ್ ಸ್ವಾಗತಿಸಿದರು. ಹನೀಫ್ ಹುದವಿ ದೇಲಂಪಾಡಿ ಪ್ರಾಸ್ತಾವಿಕ ಮಾತನಾಡಿದರು. ಮಸ್ಜಿದ್ ಝೀನತ್ ಬಕ್ಷ್ ಮತ್ತು ಈದ್ಗಾ ಜುಮಾ ಮಸ್ಜಿದ್ ಉಪಾಧ್ಯಕ್ಷ, ಮಾಜಿ ಮೇಯರ್ ಕೆ. ಅಶ್ರಫ್ ವಂದಿಸಿದರು. ವಿದ್ಯಾರ್ಥಿ ನಜ್ಮುದ್ದೀನ್ ಕಿರಾಅತ್ ಪಠಿಸಿದರು.

ದ.ಕ. ಜಿಲ್ಲಾ ಖಾಝಿಯಾಗಿದ್ದ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಝರಿಯ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಪಾಣಕ್ಕಾಡ್ ಸೈಯ್ ನಾಸಿರ್ ಶಿಹಾಬುದ್ದೀನ್ ಬಾಅಲವಿ ನೇಮಕಗೊಂಡಿದ್ದರು.


1966ರ ಮೇ 2ರಂದು ಕೇರಳದ ಮಲಪ್ಪುರಂ ಜಿಲ್ಲೆಯ ಪಾಣಕ್ಕಾಡ್ ಸಮೀಪದ ಪೂವಾಡ್ ಎಂಬಲ್ಲಿ ಜನಿಸಿದ್ದ ಇವರು ಸನದು ಪಡೆದ ಬಳಿಕ ಹಲವು ಮಸೀದಿಗಳು ಮತ್ತು ಇಸ್ಲಾಮಿಕ್ ಸಂಸ್ಥೆಗಳಲ್ಲಿ ಖತೀಬ್ ಮತ್ತು ಮುದರ್ರಿಸ್ ಆಗಿ ಕಾರ್ಯನಿರ್ವಹಿಸಿದ್ದರು. ಮಲಪ್ಪುರಂ, ಪಾಲಕ್ಕಾಡ್, ತ್ರಿಶೂರ್ ಜಿಲ್ಲೆಗಳಲ್ಲಿರುವ ಸುಮಾರು 300ಕ್ಕೂ ಅಧಿಕ ಮೊಹಲ್ಲಾಗಳ ಖಾಝಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.