ಎಲ್ಲ ನಗರಾಭಿವೃದ್ಧಿ ಪ್ರಾಧಿಕಾರದಿಂದ ಹೊಸ ಲೇಔಟ್‌

| Published : May 22 2024, 12:47 AM IST

ಎಲ್ಲ ನಗರಾಭಿವೃದ್ಧಿ ಪ್ರಾಧಿಕಾರದಿಂದ ಹೊಸ ಲೇಔಟ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಜನರಿಗೆ ಕಡಿಮೆ ಬೆಲೆಗೆ ನಿವೇಶನ ವಿತರಿಸುವುದಕ್ಕಾಗಿ ತಮ್ಮ ವ್ಯಾಪ್ತಿಗೆ ಅನುಗುಣವಾಗಿ 100 ರಿಂದ 500 ಎಕರೆ ಭೂಮಿಯನ್ನು ಗುರುತಿಸಿ ಬಡಾವಣೆಯನ್ನು ಅಭಿವೃದ್ಧಿಪಡಿಸುವಂತೆ ನಗರಾಭಿವೃದ್ಧಿ ಸಚಿವ ಬಿ.ಎಸ್‌. ಸುರೇಶ್‌ ಅವರು ರಾಜ್ಯದ ಎಲ್ಲ ನಗರಾಭಿವೃದ್ಧಿ ಪ್ರಾಧಿಕಾರಗಳ ಆಯುಕ್ತರಿಗೆ ಸೂಚನೆ ನೀಡಿದರು.

- 100ರಿಂದ 500 ಎಕ್ರೆ ಬಡಾವಣೆ ನಿರ್ಮಾಣ । ಸೋವಿ ದರದಲ್ಲಿ ಸೈಟ್‌: ಸಚಿವ ಬೈರತಿ ಸೂಚನೆಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಜನರಿಗೆ ಕಡಿಮೆ ಬೆಲೆಗೆ ನಿವೇಶನ ವಿತರಿಸುವುದಕ್ಕಾಗಿ ತಮ್ಮ ವ್ಯಾಪ್ತಿಗೆ ಅನುಗುಣವಾಗಿ 100 ರಿಂದ 500 ಎಕರೆ ಭೂಮಿಯನ್ನು ಗುರುತಿಸಿ ಬಡಾವಣೆಯನ್ನು ಅಭಿವೃದ್ಧಿಪಡಿಸುವಂತೆ ನಗರಾಭಿವೃದ್ಧಿ ಸಚಿವ ಬಿ.ಎಸ್‌. ಸುರೇಶ್‌ ಅವರು ರಾಜ್ಯದ ಎಲ್ಲ ನಗರಾಭಿವೃದ್ಧಿ ಪ್ರಾಧಿಕಾರಗಳ ಆಯುಕ್ತರಿಗೆ ಸೂಚನೆ ನೀಡಿದರು.

ವಿಧಾನಸೌಧದಲ್ಲಿ ಮಂಗಳವಾರ ರಾಜ್ಯದ ಎಲ್ಲ 31 ನಗರಾಭಿವೃದ್ಧಿ ಪ್ರಾಧಿಕಾರಿಗಳ ಆಯುಕ್ತರೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದ ಸುರೇಶ್‌, ನಗರಾಭಿವೃದ್ಧಿ ಪ್ರಾಧಿಕಾರಿಗಳಲ್ಲಿ ಚಾಲ್ತಿಯಲ್ಲಿರುವ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಜನರಿಗೆ ಕಡಿಮೆ ಬೆಲೆಯಲ್ಲಿ ನಿವೇಶನ ನೀಡುವ ಸಲುವಾಗಿ ರಾಜ್ಯದಲ್ಲಿ ಎಲ್ಲ ನಗರಾಭಿವೃದ್ಧಿ ಪ್ರಾಧಿಕಾರಿಗಳು ತಾವೇ ಜಮೀನನ್ನು ಗುರುತಿಸಿ ಅದನ್ನು ಖರೀದಿ ಮಾಡಿ ಬಡಾವಣೆ ಅಭಿವೃದ್ಧಿಪಡಿಸಿ, ಜನರಿಗೆ ಹಂಚಿಕೆ ಮಾಡಬೇಕು. ಮೈಸೂರು, ಬೆಳಗಾವಿಯಂತಹ ವ್ಯಾಪ್ತಿ ದೊಡ್ಡದಿರುವ ನಗರಾಭಿವೃದ್ಧಿ ಪ್ರಾಧಿಕಾರಗಳು ತಲಾ 500 ಎಕರೆ, ತುಮಕೂರು ಸೇರಿ ಇನ್ನಿತರ ವ್ಯಾಪ್ತಿ ಕಡಿಮೆ ಇರುವ ಪ್ರಾಧಿಕಾರಗಳು ತಲಾ 200 ಎಕರೆ ಹಾಗೂ ತಾಲೂಕು ಮಟ್ಟದ ಪ್ರಾಧಿಕಾರಗಳು ತಲಾ 100 ಎಕರೆ ಭೂಮಿಯನ್ನು ಗುರುತಿಸಿ ಅಲ್ಲಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ತಾಕೀತು ಮಾಡಿದರು.

ಭೂಮಿ ಗುರುತಿಸುವುದು ಹಾಗೂ ಬಡಾವಣೆ ನಿರ್ಮಾಣ ಕಾರ್ಯದ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸಬೇಕು. ಮುಂದಿನ ಒಂದು ವರ್ಷದಲ್ಲಿ 1 ಲಕ್ಷ ನಿವೇಶನಗಳನ್ನು ರಚಿಸಿ, ಅವುಗಳನ್ನು ಹಂಚಿಕೆ ಮಾಡುವ ಗುರಿಯನ್ನು ಇಟ್ಟುಕೊಂಡು ಕೆಲಸ ಮಾಡಬೇಕು. ಭೂಸ್ವಾಧೀನಕ್ಕೆ ತಗಲುವ ವೆಚ್ಚ, ಕಚೇರಿ ವೆಚ್ಚವನ್ನಾಧರಿಸಿ ನಿವೇಶನಗಳಿಗೆ ಅತಿಕಡಿಮೆ ದರ ನಿಗದಿ ಮಾಡಿ ಮಾರಾಟ ಮಾಡಬೇಕು ಎಂದು ಸೂಚಿಸಿದರು.

ಖಾಸಗಿ ಲೇಔಟ್‌ಗಳಿಂದ ದುಬಾರಿ ನಿವೇಶನ ಖರೀದಿ ಮಾಡಲು ಸಾಧ್ಯವಾಗದ ಜನರೂ ನಿವೇಶನ ಹೊಂದುವಂತೆ ಮಾಡುವುದವನ್ನು ನಮ್ಮ ಗುರಿಯಾಗಿಸಿ ಕೆಲಸ ಮಾಡಬೇಕು. ಬಡಾವಣೆ ನಿರ್ಮಾಣಕ್ಕೆ ಸರ್ಕಾರಿ ಜಾಗ ಸಿಗದಿದ್ದರೆ ಕೃಷಿಯೇತರ ಜಮೀನು ಗುರುತಿಸಿ, ಜಾಗದ ಮಾಲೀಕರೊಂದಿಗೆ 50:50 ಅನುಪಾತದಲ್ಲಿ ನಿವೇಶನ ಹಂಚಿಕೆಯ ಭರವಸೆ ನೀಡಿ ಜಾಗವನ್ನು ಪಡೆಯಬೇಕು ಎಂದರು.

ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್‌, ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ನಗರಾಭಿವೃದ್ದಿ ಪ್ರಾಧಿಕಾರಗಳು ಮತ್ತು ನಗರ-ಗ್ರಾಮಾಂತರ ಯೋಜನಾ ಆಯುಕ್ತಾಲಯದ ಆಯುಕ್ತ ವೆಂಕಟಾಚಲಪತಿ, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕ ತಿಪ್ಪೇಸ್ವಾಮಿ ಇತರರಿದ್ದರು.

ಒಂದೂವರೆ ತಿಂಗಳಲ್ಲಿ

ಸೈಟ್‌ ವಿತರಣೆ ಶುರು?

ಈಗಾಗಲೇ ರಚಿಸಲಾಗಿರುವ ನಿವೇಶನಗಳ ಮಾರಾಟ ಪ್ರಕ್ರಿಯೆಯನ್ನು ಮುಂದಿನ ಒಂದೂವರೆ ತಿಂಗಳಲ್ಲಿ ಆರಂಭಿಸಬೇಕು. ಹೊಸದಾಗಿ ಬಾಡಾವಣೆ ನಿರ್ಮಾಣ ಹಾಗೂ ಈಗಾಗಲೇ ರಚಿಸಲಾಗಿರುವ ನಿವೇಶನಗಳ ಮಾರಾಟ ಪ್ರಕ್ರಿಯೆ ವಿಳಂಬ ಮಾಡಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸುರೇಶ್‌ ಎಚ್ಚರಿಸಿದರು.