ಹಲವಾರು ಸರ್ಕಾರಿ ಕಟ್ಟಡಗಳು ಶಿಥಿಲಾವ್ಯ ವಸ್ಥೆಯಲ್ಲಿವೆ. ಹೊಸ ಅವಿಷ್ಕಾರಗಳೊಂದಿಗೆ ಹೈಟೆಕ್ ಮಾದರಿಯಲ್ಲಿ ಹೊಸದಾಗಿ ಸರ್ಕಾರಿ ಕಚೇರಿಗಳನ್ನು ನಿರ್ಮಿಸಿ ಆಡಳಿತ ವ್ಯವಸ್ಥೆಯನ್ನು ಸುಗಮವಾಗಿ ನಡೆಸಲು ಅನುಕೂಲ ಕಲ್ಪಿಸಲಾಗುವುದು.

ಕನ್ನಡಪ್ರಭ ವಾರ್ತೆ ಮದ್ದೂರು

ಕಳೆದ ಹಲವು ವರ್ಷಗಳಿಂದಲೂ ನೆನಗುದಿಗೆ ಬಿದ್ದಿದ್ದ ತಾಪಂ ಕಚೇರಿ ಕಟ್ಟಡವನ್ನು ಹೊಸ ಅವಿಷ್ಕಾರದೊಂದಿಗೆ ಹೈಟೆಕ್ ಮಾದರಿಯಲ್ಲಿ ನಿರ್ಮಿಸಲು ಮುಂದಾಗಿರುವುದಾಗಿ ಶಾಸಕ ಕೆ.ಎಂ.ಉದಯ್ ತಿಳಿಸಿದರು.

ನಗರದ ತಾಪಂ ಕಚೇರಿ ಆವರಣದಲ್ಲಿ 4.30 ಕೋಟಿ ರು. ವೆಚ್ಚದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಮಗಳಲ್ಲಿ ಪಂಚಾಯ್ತಿ ಕಚೇರಿಗಳು ಎಷ್ಟು ಮುಖ್ಯವೋ ಅದೇ ರೀತಿ ತಾಲೂಕು ಕೇಂದ್ರದಲ್ಲಿ ಸರ್ಕಾರಿ ಕಚೇರಿಗಳು ಅಷ್ಟೇ ಮುಖ್ಯ. ಹೀಗಾಗಿ ಸ‌ರ್ಕಾರಿ ಕಚೇರಿಗಳ ಕಟ್ಟಡಗಳನ್ನು ಹೈಟೆಕ್ ಮಾದರಿಯಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದರು.

ಹಲವಾರು ಸರ್ಕಾರಿ ಕಟ್ಟಡಗಳು ಶಿಥಿಲಾವ್ಯ ವಸ್ಥೆಯಲ್ಲಿವೆ. ಹೊಸ ಅವಿಷ್ಕಾರಗಳೊಂದಿಗೆ ಹೈಟೆಕ್ ಮಾದರಿಯಲ್ಲಿ ಹೊಸದಾಗಿ ಸರ್ಕಾರಿ ಕಚೇರಿಗಳನ್ನು ನಿರ್ಮಿಸಿ ಆಡಳಿತ ವ್ಯವಸ್ಥೆಯನ್ನು ಸುಗಮವಾಗಿ ನಡೆಸಲು ಅನುಕೂಲ ಕಲ್ಪಿಸಲಾಗುವುದು ಎಂದರು.

ರೈತರು ಸಾರ್ವಜನಿಕರ ಕೆಲಸ ಕಾರ್ಯಗಳು ಸಮರ್ಪಕವಾಗಿ ಜರುಗುವ ಜೊತೆಗೆ ನರೇಗಾ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳೊಟ್ಟಿಗೆ ಪಂಚಾಯ್ತಿ ನಿರ್ವಹಣೆ ಕೇಂದ್ರ ಕಚೇರಿಯಲ್ಲಿ ನಡೆಸಲು ಹಲವಾರು ಕಟ್ಟಡಗಳು ಅಗತ್ಯ ವಾಗಿವೆ ಎಂದರು.

ಈಗಾಗಲೇ ಕಾವೇರಿ ನೀರಾವರಿ ನಿಗಮ ಕಚೇರಿ, ಭಾರತಿ ನಗರದಲ್ಲಿ ಸಬ್ ಡಿವಿಜನ್ ಕಚೇರಿ ಆಸ್ಪತ್ರೆ ಉನ್ನತೀಕರಣ ಹಾಗೂ ಇನ್ನಿತರ ಸರ್ಕಾರಿ ಕಟ್ಟಡಗಳನ್ನು ನಿರ್ಮಾಣ ಮಾಡುವ ಜೊತೆಗೆ ಪೇಟೆ ಬೀದಿ ರಸ್ತೆ ಅಗಲೀಕರಣ‌ ಕಾಮಗಾರಿಗೆ ಚಾಲನೆ ನೀಡಿ, ಜತೆಗೆ 30 ಕೋಟಿ ರು. ವೆಚ್ಚದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಿಸಲು ಕ್ರಮವಿಸಲಾಗಿದೆ ಎಂದರು.

ಗ್ರಾಮೀಣ ಭಾಗದ ರಸ್ತೆಗಳು ಕುಡಿಯುವ ನೀರು ನಾಲೆಗಳ ಆಧುನಿಕರಣ ಇನ್ನಿತರ ಶಾಶ್ವತ ಯೋಜನೆಗಳನ್ನು ರೂಪಿಸಿ ನಮ್ಮ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವ ರಾಜ್ಯದಲ್ಲೇ ಮದ್ದೂರುಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ನಂಬರ್ ಒನ್ ಕ್ಷೇತ್ರವಾಗಿದೆ ಎಂದರು.

ತಾಪಂ ಇಒ ರಾಮಲಿಂಗಯ್ಯ ಮಾತನಾಡಿದರು. ಈ ವೇಳೆ ನಗರಸಭೆ‌ ಮಾಜಿ ಅಧ್ಯಕ್ಷೆ‌ ಕೋಕಿಲಾ ಅರುಣ್, ತಾಪಂ ಲೆಕ್ಕಾಧಿಕಾರಿ ಗಂಗರಾಜು‌, ಯೋಜಾನಧಿಕಾರಿ‌ ಸುರೇಶ್, ‌‌ಮುಖಂಡರಾದ‌ ಎಂ.ಡಿ.ಮಹಾಲಿಂಗಯ್ಯ, ಮಮತ ಶಂಕರೆಗೌಡ, ಅರುವನಹಳ್ಳಿ ಸಿದ್ದರಾಜು, ಮರಿದೇವರು, ವೆಂಕಟೇಶ, ರಫೀಕ್, ಕುಶಾಲ್ ಗೌಡ‌‌, ಮಹದೇವಯ್ಯ, ಕಮಲ್ ನಾಥ್, ‌ಶಶಿಧರ್, ಆರಿಫ್ ಪಾಷ. ಇತರರಿದ್ದರು.