ಸಾರಾಂಶ
ಮಾಧ್ಯಮ ಸಂವಾದದಲ್ಲಿ ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಭರವಸೆ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪಪಟ್ಟಣದಲ್ಲಿ ಹೆಚ್ಚಿದ ಟ್ರಾಫಿಕ್-ಪಾರ್ಕಿಂಗ್ ಸಮಸ್ಯೆ, ಹೆದ್ದಾರಿ ಬದಿಯಲ್ಲಿ ಮಾಂಸ ಮಾರಾಟ, ತ್ಯಾಜ್ಯ ವಿಲೇವಾರಿ ವಿಳಂಬ, ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಸೇರಿದಂತೆ ಹತ್ತಾರು ಸಮಸ್ಯೆಗಳು ಮಾಧ್ಯಮ ಸಂವಾದದಲ್ಲಿ ಅನಾವರಣಗೊಂಡಿತು.
ಕೊಡಗು ಪತ್ರತರ್ಕರ ಸಂಘದ ಕುಶಾಲನಗರ ತಾಲೂಕು ಘಟಕದಿಂದ ಸುಂಟಿಕೊಪ್ಪದ ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಾಧ್ಯಮ ಸಂವಾದದಲ್ಲಿ ಹಲವಾರು ಸಮಸ್ಯೆಗಳ ಬಗ್ಗೆ ಪಟ್ಟಣದ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸಂಬಂಧಿಸಿದವರ ಗಮನ ಸೆಳೆದರು. ಸಂಘ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಅಧ್ಯಕ್ಷತೆ ವಹಿಸಿದ್ದರು.ಪ್ರಶ್ನೆಗಳನ್ನು ಆಲಿಸಿ ಪ್ರತಿಕ್ರಿಯಿಸಿದ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಗ್ರಾಮ ಪಂಚಾಯಿತಿ ಸಾರ್ವಜನಿಕರ ಅಹವಾಲು ಸ್ವೀಕರಿಸಲು ತಯಾರಾಗಿದೆ. ಗ್ರಾ.ಪಂ. ವ್ಯಾಪ್ತಿಯ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಗ್ರಾ.ಪಂ.ನೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು. ಇದಲ್ಲದೆ 29 ಇಲಾಖೆಗಳು ಕೂಡ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಸುಂಟಿಕೊಪ್ಪದಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದೆ. ಇದರಿಂದಾಗಿ ಹೊಸ ಮಾರುಕಟ್ಟೆ ನಿರ್ಮಿಸಲಾಗುತ್ತಿದ್ದು, ಅಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆಯ ಜೊತೆಗೂಡಿ ರಸ್ತೆಯ ಒಂದು ಬದಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವು ಎಂದು ತಿಳಿಸಿದರು. ಕಾಂಗ್ರೆಸ್ ಮುಖಂಡ ಇಸಾಕ್ ಖಾನ್ ಮಾತನಾಡಿ, ವಿದ್ಯುತ್ ಇಲಾಖೆಯ ಬಿಲ್ ಸಮಸ್ಯೆ ಹೆಚ್ಚಿದೆ. ಒಂದು ತಿಂಗಳು 19 ರು. ಬಿಲ್ ಬಂದರೆ ಮತ್ತೊಂದು ತಿಂಗಳು 2 ಸಾವಿರ ರು. ಬಿಲ್ ಬರುತ್ತಿದೆ. ಇದಕ್ಕೆ ಕಾರಣ ಏನು? ವಿದ್ಯುತ್ ಇಲಾಖೆಯಿಂದ ಸ್ಪಂದನೆ ದೊರಕುತ್ತಿಲ್ಲ. ಬಿಲ್ ವ್ಯತ್ಯಯ ಉಂಟಾಗುತ್ತಿದೆ. ಬೀದಿ ದೀಪ ಆನ್ ಮಾಡಲು ಜನ ಇಲ್ಲ ಎಂದು ದೂರಿದರು.ಇದಕ್ಕೆ ವಿದ್ಯುತ್ ಇಲಾಖೆಯ ಜೆಇ ಲವಕುಮಾರ್ ಪ್ರತಿಕ್ರಿಯಿಸಿ, 199 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಅದಕ್ಕಿಂತ ಹೆಚ್ಚು ಉಪಯೋಗಿಸಿದರೆ ಬಿಲ್ ಹೆಚ್ಚಾಗುತ್ತದೆ. ಬೀದಿ ದೀಪಗಳ ನಿರ್ವಹಣೆಯನ್ನು ಪಂಚಾಯಿತಿ ಮಾಡುತ್ತಿದೆ. ವಿದ್ಯುತ್ ಇಲಾಖೆಯಲ್ಲಿ ಸಮಸ್ಯೆ ಪರಿಹರಿಸಲು ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.ಪಾರ್ಕಿಂಗ್ ಸಮಸ್ಯೆ ಹೆಚ್ಚು: ಸಂವಾದದಲ್ಲಿ ಪಟ್ಟಣದಲ್ಲಿ ಪಾರ್ಕಿಂಗ್ ಹಾಗೂ ಟ್ರಾಫಿಕ್ ಸಮಸ್ಯೆ ಕುರಿತ ದೂರುಗಳು ಹೆಚ್ಚಾಗಿ ಕೇಳಿಬಂತು. ಹಿರಿಯರಾದ ವಹೀದ್ ಜಾನ್, ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಲೇ ಇದೆ. ಪೊಲೀಸ್ ಸಿಬ್ಬಂದಿ ವಾಹನಗಳ ಸಂಚಾರ ನಿಯಂತ್ರಣ ಮಾಡಲು ಕ್ರಮ ವಹಿಸಬೇಕು. ಈಗಿನ ಮಾರುಕಟ್ಟೆ ಹಳೆಯದಾಗಿದೆ. ಮಾರುಕಟ್ಟೆಗೆ ಹೊಸ ಕಟ್ಟಡಗಳು ಬೇಕಾಗಿದೆ ಎಂದರು.ಗ್ರಾಪಂ ಮಾಜಿ ಅಧ್ಯಕ್ಷ ಕರೀಂ ಮಾತನಾಡಿ ಶಾಂತಿಗಿರಿಯಿಂದ ಗದ್ದೆಗಳ್ಳ ವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಜನ ಮನೆಯ ಮುಂದೆ ಎರಡು ಬದಿಯಲ್ಲಿ ವಾಹನ ನಿಲ್ಲಿಸುತ್ತಿದ್ದಾರೆ. ಹೆದ್ದಾರಿಯಲ್ಲಿ ಇದರಿಂದಾಗಿ ವಾಹನ ಸಂಚಾರಕ್ಕೆ ಸಮಸ್ಯೆ ಆಗಿದೆ. ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.ಸುಂಟಿಕೊಪ್ಪ ಠಾಣೆಯ ಎಎಸ್‌ಐ ರಮೇಶ್ ಮಾತನಾಡಿ, ಟ್ರಾಫಿಕ್ ಸಮಸ್ಯೆ ಬಗ್ಗೆ ಸಾರ್ವಜನಿಕರ ಸಮ್ಮುಖದಲ್ಲಿ ಸಭೆ ಕರೆದು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.ನಗರ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಖಾನ್ ಮಾತನಾಡಿ, ಸುಂಟಿಕೊಪ್ಪದಲ್ಲಿ ಸಮಸ್ಯೆ ಬಗೆಯರಿಸುವಲ್ಲಿ ತಾಲೂಕು ಹಾಗೂ ಜಿಲ್ಲಾ ಅಧಿಕಾರಿಗಳು ವಿಫಲರಾಗಿದ್ದಾರೆಂದು ಆರೋಪಿಸಿದರು.ಮಾನವೀಯ ಒಕ್ಕೂಟದ ಕೆ. ಎಸ್.ಅನಿಲ್ ಮಾತನಾಡಿ, ಈಗಾಗಲೇ ಪರೀಕ್ಷಾ ಫಲಿತಾಂಶಗಳು ಪ್ರಕಟಗೊಂಡಿದ್ದು, ವಿವಿಧ ದಾಖಲೆ ಪ್ರಮಾಣ ಪತ್ರಗಳನ್ನು ಆದಷ್ಟು ಶೀಘ್ರವಾಗಿ ಕಚೇರಿಯಲ್ಲಿ ನೀಡುವಂತಾಗಬೇಕೆಂದು ಮನವಿ ಮಾಡಿದರು.ಇದಕ್ಕೆ ಉಪ ತಹಸೀಲ್ದಾರ್ ಪ್ರಶಾಂತ್ ಪ್ರತಿಕ್ರಿಯಿಸಿ, ಅರ್ಹ ಫಲಾನುಭವಿಗಳಿಗೆ ಆದಷ್ಟು ಶೀಘ್ರವಾಗಿ ಯಾವುದೇ ಅಡೆತಡೆಗಳಿಲ್ಲದೆ ದಾಖಲೆ ಪತ್ರಗಳನ್ನು ನೀಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಪತ್ರಕರ್ತರ ಸಂಘ ಈ ಸಂವಾದದಲ್ಲಿ ಕಂಡು ಬಂದ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರಿ ಮಟ್ಟದಲ್ಲಿ ಪ್ರಯತ್ನ ಮಾಡಲಿದೆ ಎಂದು ಹೇಳಿದರು.ಮಡಿಕೇರಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಅನೂಪ್ ಕುಮಾರ್ ಮಾತನಾಡಿದರು.ಬಡಾವಣೆಗೆ ಕೊಳಚೆ ನೀರು: ಮಡಿಕೇರಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಅನೂಪ್ ಕುಮಾರ್ ಮಾತನಾಡಿ, ಖಾಸಗಿ ಸಂಸ್ಥೆಯೊಂದರ ನಿವೇಶನದಿಂದ ಮಳೆಯ ಕೊಳಚೆ ನೀರು ಮತ್ತೊಂದು ಬಡಾವಣೆಗೆ ಬರುತ್ತಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಿ ಎಂದು ಆಗ್ರಹಿಸಿದರು. ಪಿಡಿಒ ಲೋಕೇಶ್ ಪ್ರತಿಕ್ರಿಯಿಸಿ, ಕೊಳಚೆ ನೀರು ಬರುತ್ತಿರುವ ಬಗ್ಗೆ ಈಗಾಗಲೇ ಸಾಕಷ್ಟು ದೂರು ಬಂದಿದೆ. ಅತ್ಯಂತ ಗಂಭೀರವಾಗಿ ಈ ಸಮಸ್ಯೆಯನ್ನು ಪರಿಗಣಿಸಲಾಗಿದ್ದು, ಸಂಬಂಧಿಸಿದವರಿಗೆ ಸೂಚನೆ ನೀಡಲಾಗಿದೆ ಎಂದರು.ಮಾಧ್ಯಮ ಸಂವಾದದಲ್ಲಿ ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಖಜಾಂಚಿ ಟಿ.ಕೆ. ಸಂತೋಷ್, ಕ್ಷೇಮಾಭಿವೃದ್ಧಿ ಅಧ್ಯಕ್ಷ ಜಿ.ವಿ. ರವಿಕುಮಾರ್, ನಿರ್ದೇಶಕರಾದ ವಿಶುಕುಮಾರ್, ರಂಜಿತ್ ಕವಲಪಾರ, ಗುರುದರ್ಶನ್, ಲಕ್ಷ್ಮೀಶ್, ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಬಿ. ವಿನ್ಸೆಂಟ್, ಖಜಾಂಚಿ ನವೀನ್ ಕುಮಾರ್, ಸುಂಟಿಕೊಪ್ಪ ಹೋಬಳಿ ಕಸಾಪ ಅಧ್ಯಕ್ಷ ಸೆಬಾಸ್ಟಿನ್, ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ, ಕಾಂಗ್ರೆಸ್ ಮುಖಂಡ ಯಂಕನ ಶ್ರೀರಾಮ್ ಸೇರಿದಂತೆ ಹಲವರು ಸಂವಾದದಲ್ಲಿ ಪಾಲ್ಗೊಂಡಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))