ಶೀಘ್ರವೇ ಹೊಸ ನಂದಿನಿ ಮಿಲ್ಕ್ ಪಾರ್ಲರ್‌ಗಳ ಸ್ಥಾಪನೆ: ಮಂಜನಗೌಡ ಪಾಟೀಲ

| Published : Aug 09 2025, 12:01 AM IST

ಶೀಘ್ರವೇ ಹೊಸ ನಂದಿನಿ ಮಿಲ್ಕ್ ಪಾರ್ಲರ್‌ಗಳ ಸ್ಥಾಪನೆ: ಮಂಜನಗೌಡ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ನಷ್ಟ ತಗ್ಗಿಸಲು ಒಕ್ಕೂಟಕ್ಕೆ ನೂತನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಮಂಡ್ಯದಿಂದ ಪ್ರದೀಪ ಎಸ್.ಎಂ. ಅವರನ್ನು ಹಾಗೂ ಮಾರ್ಕೆಟಿಂಗ್ ವ್ಯವಸ್ಥಾಪಕರು ಸೇರಿ ಕೆಲವರನ್ನು ಬದಲಾವಣೆ ಮಾಡಲಾಗಿದೆ.

ಹಾವೇರಿ: ನಮ್ಮ ಒಕ್ಕೂಟ ಮಾರುಕಟ್ಟೆ ಸೃಷ್ಟಿಸುವಲ್ಲಿ ಎಡವಿದೆ. ಅದಕ್ಕಾಗಿ ಕೆಲ ಅಧಿಕಾರಿಗಳ ಬದಲಾವಣೆ ಮಾಡಿದ್ದೇವೆ. ಶೀಘ್ರದಲ್ಲಿ ಸಮೀಕ್ಷೆ ಕೈಗೊಂಡು ಹೆಚ್ಚು ಹೊಸ ನಂದಿನಿ ಮಿಲ್ಕ ಪಾರ್ಲರ್‌ಗಳನ್ನು ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲಾಗುವುದು ಎಂದು ಹಾವೆಮುಲ್ ಅಧ್ಯಕ್ಷ ಮಂಜನಗೌಡ ಪಾಟೀಲ ಹೇಳಿದರು.ಶುಕ್ರವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ನಷ್ಟ ತಗ್ಗಿಸಲು ಒಕ್ಕೂಟಕ್ಕೆ ನೂತನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಮಂಡ್ಯದಿಂದ ಪ್ರದೀಪ ಎಸ್.ಎಂ. ಅವರನ್ನು ಹಾಗೂ ಮಾರ್ಕೆಟಿಂಗ್ ವ್ಯವಸ್ಥಾಪಕರು ಸೇರಿ ಕೆಲವರನ್ನು ಬದಲಾವಣೆ ಮಾಡಲಾಗಿದೆ. ಒಕ್ಕೂಟದ ₹20 ಕೋಟಿ ನಷ್ಟದ ಕುರಿತು ಆಡಿಟ್ ನಡೆಯುತ್ತಿದ್ದು, ಶೀಘ್ರದಲ್ಲೇ ವರದಿ ಬರಲಿದೆ ಎಂದರು.

ಒಕ್ಕೂಟ ಹೊಸ ಆಡಳಿತ ಮಂಡಳಿಯ ಅಭಿವೃದ್ಧಿ ಕಾರ್ಯಗಳನ್ನು ಕಂಡು ಸಹಿಸಲಾಗದವರು ನನ್ನ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ಮಾಡುವ ಅನಾಮಧೇಯ ಪತ್ರ ಹರಿಬಿಟ್ಟಿದ್ದಾರೆ. ಪತ್ರ ಹರಿಬಿಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ನಾವು ಅಧಿಕಾರ ವಹಿಸಿಕೊಂಡು ಮೂರ್ನಾಲ್ಕು ತಿಂಗಳು ಆಗಿದೆ. ₹20 ಕೋಟಿ, ನಷ್ಟದಲ್ಲಿರುವ ಒಕ್ಕೂಟವನ್ನು ಲಾಭದ ಕಡೆಗೆ ಕೊಂಡೊಯ್ಯಲು ಹಲವು ಕ್ರಮ ತೆಗೆದುಕೊಂಡಿದ್ದೇವೆ. ಕೆಲವರು, ನಾನು ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡುತ್ತಿರುವುದಾಗಿ ದುರುದ್ದೇಶದಿಂದ ಅಪರಿಚಿತ ಪತ್ರ ಬರೆದಿದ್ದಾರೆ. ಈ ಬಗ್ಗೆ ಕಾನೂನು ತಜ್ಞರ ಜತೆ ಚರ್ಚಿಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಈ ಆರೋಪ ಸುಳ್ಳೆಂದು ಒಕ್ಕೂಟದ ಮಹಿಳಾ ಅಧಿಕಾರಿ, ಸಿಬ್ಬಂದಿ ಎಸ್‌ಪಿ ಅವರಿಗೆ ದೂರು ಸಲ್ಲಿಸಿದ್ದಾರೆ ಎಂದರು.ಜಂಗಮನಕೊಪ್ಪದ ಯುಎಚ್‌ಟಿ ಘಟಕದ ನಿರ್ವಹಣೆ ಹೊಣೆಯನ್ನು ಕೆಎಂಎಫ್‌ಗೆ ವಹಿಸಲಾಗಿದೆ. ಇದರಿಂದ ನಮ್ಮ ಒಕ್ಕೂಟಕ್ಕೆ ಆಗುತ್ತಿದ್ದ ನಷ್ಟದ ಪ್ರಮಾಣ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ನಿತ್ಯ 1.60 ಲಕ್ಷ ಲೀಟರ್ ಹಾಲು ಸಂಗ್ರವಾಗುತ್ತಿದ್ದು, ಯುಎಚ್‌ಟಿ ಘಟಕಕ್ಕೆ 68 ಸಾವಿರ ಲೀಟರ್ ಹಾಲು ಪೂರೈಸಲಾಗುತ್ತಿದೆ. ಇದರಿಂದ ಪ್ರತಿ ಲೀಟರ್‌ಗೆ ₹6ರಿಂದ ₹7, ಹೊರೆ ಕಡಿಮೆಯಾಗಿದೆ. ನಗರದ ಪಶು ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ ಹಾವೆಮುಲ್ ಆಡಳಿತ ಮಂಡಳಿಯ ನೂತನ ಕಟ್ಟಡವನ್ನು ಆ. 15ರಂದು ಉದ್ಘಾಟಿಸಲಾಗುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಉಜ್ಜನಗೌಡ ಮಾವಿನತೋಪ, ನಿರ್ದೇಶಕರಾದ ಪ್ರಕಾಶ ಬನ್ನಿಹಟ್ಟಿ, ಬಸವೇಶಗೌಡ ಪಾಟೀಲ, ಚಂದ್ರಪ್ಪ ಜಾಲಗಾರ, ತಿಪ್ಪಣ್ಣ ಸಾತಣ್ಣನವರ, ಶಶಿಧರ ಯಲಿಗಾರ ಇತರರು ಇದ್ದರು.