ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಭಾನುವಾರ ನಗರದ ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಸಂಸ್ಥೆಯ ಮುಂದಿನ ದಿಕ್ಕು, ಕ್ರೀಡಾಪಟುಗಳ ಉತ್ತೇಜನ ಹಾಗೂ ಸಂಘಟನೆಯ ಬಲವರ್ಧನೆ ಕುರಿತು ಚರ್ಚೆ ನಡೆಸಿದ ನಂತರ ಪದಾಧಿಕಾರಿಗಳನ್ನು ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಸಂಸ್ಥೆಯ ಪೋಷಕರಾಗಿ ನಿರಂಜನ್ ರಾಜ್ ಹಾಗೂ ಬಿ. ಆರ್. ಧರ್ಮ, ಈ. ಕೃಷ್ಣಗೌಡ ಅವರನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ವಿಜಯಕುಮಾರ್ ಜವಾಬ್ದಾರಿ ಸ್ವೀಕರಿಸಿದರು. ಗೌರವಾಧ್ಯಕ್ಷರಾಗಿ ಕೆ.ಎಂ. ಶ್ರೀನಿವಾಸ್ ನೇಮಕಗೊಂಡಿದ್ದು, ಉಪಾಧ್ಯಕ್ಷರಾಗಿ ವೇಣುಗೋಪಾಲ್, ಮಂಜುನಾಥ್, ತ್ರಿಭುವನ್, ಶಶಿಧರ್ ಹಾಗೂ ಸಿ.ಕೆ. ರಘು ಅವರನ್ನು ಆಯ್ಕೆ ಮಾಡಲಾಗಿದೆ. ಸಂಸ್ಥೆ ಸಂಸ್ಥಾಪಕ ಹಾಗೂ ಕಾರ್ಯದರ್ಶಿಯಾಗಿ ಕೆ. ಹನುಮಂತೇಗೌಡ, ಸಹಕಾರ್ಯದರ್ಶಿಯಾಗಿ ಸಂತೋಷ್ ಶೆಟ್ಟಿ, ಶಿವಸ್ವಾಮಿ, ಖಜಾಂಚಿಯಾಗಿ ಅಶ್ವಥ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಿ.ಆರ್. ಸಿಂಚನ, ಪಿ.ಎ. ಶ್ರೀನಿವಾಸ್, ಯಶೋಧ, ಗಿರೀಶ್ ಮತ್ತು ಜಯಣ್ಣ ನೇಮಕಗೊಂಡಿದ್ದಾರೆ. ನೂತನ ಪದಾಧಿಕಾರಿಗಳಿಗೆ ಸಭೆಯಲ್ಲಿ ಹಾಜರಿದ್ದ ಸದಸ್ಯರು ಶುಭಾಶಯಗಳನ್ನು ತಿಳಿಸಿದರು.ನಂತರ ಪವರ್ ಲಿಫ್ಟಿಂಗ್ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಸತೀಶ್ ಕುಮಾರ್ ಉದ್ದೇಶಿಸಿ ಮಾತನಾಡಿ, ರಾಜ್ಯ ಮಟ್ಟದಲ್ಲಿ ಸಂಘಟನೆ ಉತ್ತಮವಾಗಿ ಬೆಳೆಯುತ್ತಿರುವುದನ್ನು ಶ್ಲಾಘಿಸಿದರು. ಹಾಸನ ಜಿಲ್ಲೆಯಲ್ಲೂ ಕ್ರೀಡೆಯಿಗೆ ಉತ್ತಮ ವಾತಾವರಣ ನಿರ್ಮಾಣವಾಗಿದ್ದು, ಇಲ್ಲಿನ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು. ಮಹಿಳಾ ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶ ನೀಡುವ ಅಗತ್ಯವಿದ್ದು, ಯುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ ಒದಗಿಸಬೇಕು ಎಂದು ಸೂಚಿಸಿದರು. ಪವರ್ ಲಿಫ್ಟಿಂಗ್ ಕ್ರೀಡೆಯ ಮಹತ್ವವನ್ನು ಹಲವರು ಅರಿಯದೇ ಇರುವುದರಿಂದ, ಈ ಕ್ರೀಡೆಯ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.ರಾಜ್ಯ ಸರ್ಕಾರದಿಂದ ಕ್ರೀಡಾಪಟುಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯಗಳಿರುವುದರಿಂದ, ಈ ಕ್ಷೇತ್ರದಲ್ಲಿ ಭವಿಷ್ಯ ಉತ್ತಮವಾಗಿದೆ. ಸರಿಯಾದ ತರಬೇತಿ ಮತ್ತು ಪ್ರೋತ್ಸಾಹ ದೊರೆತರೆ ಹಾಸನ ಜಿಲ್ಲೆಯ ಕ್ರೀಡಾಪಟುಗಳು ಹೆಚ್ಚಿನ ಸಾಧನೆ ಮಾಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ತರಬೇತಿ ಶಿಬಿರಗಳನ್ನು ಆಯೋಜಿಸಿ, ಹೊಸ ಪ್ರತಿಭೆಗಳನ್ನು ಬೆಳೆಸುವ ಜೊತೆಗೆ ಬಲಿಷ್ಠ ತಂಡವನ್ನು ರೂಪಿಸುವುದಾಗಿ ತಿಳಿಸಿದರು. ಹಾಸನ ಜಿಲ್ಲೆಯ ಪವರ್ ಲಿಫ್ಟಿಂಗ್ ಕ್ರೀಡೆಯನ್ನು ಇನ್ನಷ್ಟು ಉತ್ತೇಜಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು. ನಂತರ ಆಯ್ಕೆಗೊಂಡ ಪದಾಧಿಕಾರಿಗಳ ಹೆಸರನ್ನು ಓದಿ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಪವರ್ ಲಿಪ್ಟಿಂಗ್ ಸಂಸ್ಥೆಯ ರಾಜ್ಯ ಖಜಾಂಚಿ ಜಯರಾಮ್, ರಾಷ್ಟ್ರೀಯ ತೀರ್ಪುಗಾರ ಉಮೇಶ್ ಗಟ್ಟಿ ಸೇರಿದಂತೆ ಹಲವು ಕ್ರೀಡಾಪಟುಗಳು, ತರಬೇತುದಾರರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.
=====ಫೋಟೋ ಪ್ಯಾನಲ್
ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆಯ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.