ಹೊಸ ಪೈಪ್‌ಲೈನ್‌ಗೆ ಶೀಘ್ರ ಚಾಲನೆ: ನೀರಾವರಿ ನಿಗಮ

| Published : Aug 01 2025, 12:30 AM IST

ಹೊಸ ಪೈಪ್‌ಲೈನ್‌ಗೆ ಶೀಘ್ರ ಚಾಲನೆ: ನೀರಾವರಿ ನಿಗಮ
Share this Article
  • FB
  • TW
  • Linkdin
  • Email

ಸಾರಾಂಶ

22 ಕೆರೆಗಳ ಏತ ನೀರಾವರಿ ಯೋಜನೆಯ ಹೊಸ ಪೈಪ್‌ಲೈನ್ ಕಾಮಗಾರಿಗೆ ₹18 ಕೋಟಿ ಬಿಡುಗಡೆಗೊಳಿಸಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಅಮ್ಮಿನಬಾವಿ ತಿಳಿಸಿರುವುದಾಗಿ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದ್ದಾರೆ.

-22 ಕೆರೆಗಳ ಅಭಿವೃದ್ಧಿಗೆ ನೀರಾವರಿ ನಿಗಮದ ಎಂಡಿ ಜತೆ ಶಾಸಕ ಕೆ.ಎಸ್.ಬಸವಂತಪ್ಪ ಚರ್ಚೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

22 ಕೆರೆಗಳ ಏತ ನೀರಾವರಿ ಯೋಜನೆಯ ಹೊಸ ಪೈಪ್‌ಲೈನ್ ಕಾಮಗಾರಿಗೆ ₹18 ಕೋಟಿ ಬಿಡುಗಡೆಗೊಳಿಸಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಅಮ್ಮಿನಬಾವಿ ತಿಳಿಸಿರುವುದಾಗಿ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದ್ದಾರೆ.

ಬೆಂಗಳೂರಿನ ನೀರಾವರಿ ನಿಗಮದ ಕಚೇರಿಗೆ ಇತ್ತೀಚೆಗೆ ಭೇಟಿ ನೀಡಿ, ನೀರಾವರಿ ನಿಗಮ ವ್ಯವಸ್ಥಾಪಕ ನಿರ್ದೇಶಕರೊಂದಿಗೆ 22 ಕೆರೆಗಳ ಅಭಿವೃದ್ಧಿ ಕುರಿತು ಶಾಸಕರು ಗಂಭೀರ ಚರ್ಚೆ ನಡೆಸಿದರು.

ಈ ವೇಳೆ ಎಂಡಿ ರಾಜೇಶ್ ಅಮ್ಮಿನಬಾವಿ ಅವರು, ಈಗಾಗಲೇ ಹೊಸ ಪೈಪ್‌ಲೈನ್ ಕಾಮಗಾರಿಗೆ ₹೧೮ ಕೋಟಿ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ನಡೆದಿದೆ. ಹೆಚ್ಚುವರಿ ₹75 ಕೋಟಿ ಬಿಡುಗಡೆಗೆ ಕ್ರಮ ತೆಗೆದುಕೊಳ್ಳಲಾಗುವುದು. ಆದಷ್ಟು ಬೇಗ ಅನುದಾನ ಬಿಡುಗಡೆಗೊಳಿಸಿ 22 ಕೆರೆಗಳನ್ನು ಅಭಿವೃದ್ಧಿಗೊಳಿಸುವುದಾಗಿ ಶಾಸಕರಿಗೆ ಭರವಸೆ ನೀಡಿದ್ದಾರೆ.

ಸಿರಿಗೆರೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಹೋರಾಟದ ಫಲವಾಗಿ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿ 22 ಕೆರೆ ಏತ ನೀರಾವರಿ ಯೋಜನೆಯ ಪೈಪ್‌ಲೈನ್ ಕಾಮಗಾರಿಯನ್ನು ಪ್ರತಿಷ್ಠಿತ ಎಲ್ ಅಂಡ್ ಟಿ ಕಂಪನಿ ನಡೆಸಿತ್ತು. ಆದರೆ, ಈ ಹಿಂದೆ ನಡೆಸಿದ ಕಳಪೆ ಕಾಮಗಾರಿಯಿಂದ ಪೈಪ್‌ಲೈನ್ ಪದೇಪದೇ ಒಡೆದು ನೀರು ವ್ಯರ್ಥವಾಗಿದ್ದು ಬಿಟ್ಟರೆ ಒಂದೂ ಕೆರೆ ಭರ್ತಿಯಾಗುತ್ತಿಲ್ಲ.

ಈ ಬಾರಿ ಮುಂಗಾರು ಆರಂಭದಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಬರುತ್ತಿದೆ. ಆದರೆ ಕೆರೆಗಳು ತುಂಬುವಂತಹ ಮಳೆ ಬರುತ್ತಿಲ್ಲ. ಇದರಿಂದ ರೈತರು ಆತಂಕದಲ್ಲಿದ್ದಾರೆ. ಪ್ರಸ್ತುತ ತುಂಗಭದ್ರಾ ನದಿ ಮೈದುಂಬಿ ಹರಿದರೂ ಕೆರೆಗಳನ್ನು ಭರ್ತಿ ಮಾಡಿಕೊಳ್ಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮೋಟಾರ್ ಆನ್ ಮಾಡುತ್ತಿದ್ದಂತೆ ಎರಡ್ಮೂರು ಕೆರೆಗಳ ಪೈಪ್‌ಲೈನ್ ಒಡೆದು ನೀರು ಪೋಲಾಗುತ್ತಿದೆ.

ಗುಣಮಟ್ಟದ ಹೊಸ ಪೈಪ್‌ಲೈನ್ ಕಾಮಗಾರಿ ನಡೆಸಿ ಕೆರೆಗಳಿಗೆ ನೀರು ತುಂಬಿಸಬೇಕೆಂದು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಅನೇಕ ಬಾರಿ ಸರ್ಕಾರದ ಮೇಲೆ ಒತ್ತಡ ಹಾಕಲಾಗಿದೆ. ಅಲ್ಲದೇ ಮುಖ್ಯಮಂತ್ರಿ ಮತ್ತು ಡಿಸಿಎಂ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರೊಂದಿಗೂ ಚರ್ಚೆ ನಡೆಸಿ ಮನವಿ ಸಲ್ಲಿಸಲಾಗಿತ್ತು. ಕೂಡಲೇ 22 ಕೆರೆಗಳನ್ನು ಅಭಿವೃದ್ಧಿಗೊಳಿಸಿ ರೈತರ ಹಿತ ಕಾಯಬೇಕೆಂದು ಶಾಸಕ ಬಸವಂತಪ್ಪ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.

- - -

(ಬಾಕ್ಸ್) * ಹಳೇ ಪೈಪ್‌ಲೈನ್‌ ತುರ್ತು ದುರಸ್ತಿಗೆ ಹಣ ತೆಗೆದಿಡಿ ಮೋಟಾರ್ ಆನ್ ಮಾಡಿದ ತಕ್ಷಣ ಅಲ್ಲಲ್ಲಿ ಹಳೆಯ ಪೈಪ್ ಲೈನ್ ಒಡೆದು ನೀರು ಸೋರಿಕೆಯಾಗುತ್ತದೆ. ಹೊಸ ಪೈಪ್ ಲೈನ್ ಕಾಮಗಾರಿ ಆರಂಭಿಸುವವರೆಗೂ ಹಳೆಯ ಪೈಪ್ ಲೈನ್ ನಿರ್ವಹಣೆಗೆ ಹಣ ಬಿಡುಗಡೆ ಮಾಡಿಸಬೇಕು. ಪೈಪ್ ಲೈನ್ ಒಡೆದ ಕೂಡಲೇ ತುರ್ತು ದುರಸ್ತಿ ಮಾಡಿಸಿ ನಿರಂತರವಾಗಿ ನೀರು ಹರಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಶಾಸಕ ಕೆ.ಎಸ್. ಬಸವಂತಪ್ಪ ನೀರಾವರಿ ನಿಗಮದ ಎಂಡಿ ರಾಜೇಶ್ ಅಮ್ಮಿ ಅವರಿಗೆ ಮನವಿ ಸಲ್ಲಿಸಿದರು.

- - -

-28ಕೆಡಿವಿಜಿ40, 41:

ಬೆಂಗಳೂರಿನಲ್ಲಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಅಮ್ಮಿನಬಾವಿ ಅವರೊಂದಿಗೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಚರ್ಚೆ ನಡೆಸಿದರು.