ಸಾರಾಂಶ
ನಗರದ ಬಿಡದಿ ಸಮೀಪದ ವಂಡರ್‌ಲಾದಲ್ಲಿ ಹೊಸ ಪ್ರೀಮಿಯರ್ ಆಕ್ವಾ ರೀಟ್ರೀಟ್ ‘ದಿ ಐಲ್’ ರೆಸಾರ್ಟ್ ಅನಾವರಣಗೊಂಡಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು ನಗರದ ಬಿಡದಿ ಸಮೀಪದ ವಂಡರ್‌ಲಾದಲ್ಲಿ ಹೊಸ ಪ್ರೀಮಿಯರ್ ಆಕ್ವಾ ರೀಟ್ರೀಟ್ ‘ದಿ ಐಲ್’ ರೆಸಾರ್ಟ್ ಅನಾವರಣಗೊಂಡಿದೆ.
ಮನೋರಂಜನೆ, ವಿಶ್ರಾಂತಿ, ಉಲ್ಲಾಸಕ್ಕಾಗಿ ವಂಡರ್‌ಲಾಗೆ ಭೇಟಿ ನೀಡುವ ಸಾರ್ವಜನಿಕರಿಗೆ ಐಲ್ಯಾಂಡ್ ಮಾದರಿ ಅನುಭವ ನೀಡುವ ಉದ್ದೇಶದೊಂದಿಗೆ 39 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಈ ಪರಿಸರ ಸ್ನೇಹಿ ರೆಸಾರ್ಟ್‌ಅನ್ನು ವಂಡರ್ ಲಾ ಹಾಲಿಡೇಸ್ ಲಿ. ನ ಎಕ್ಸಿಕ್ಯೂಟಿವ್ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿತ್ತಿಲಪ್ಪಿಳ್ಳಿ ಶುಕ್ರವಾರ ಉದ್ಘಾಟಿಸಿದರು.ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ದಿ ಐಲ್ ಕುರಿತು ಮಾಹಿತಿ ನೀಡಿದ ಅವರು, ಒಟ್ಟು 4.5 ಎಕರೆ ಪ್ರದೇಶಗಳಲ್ಲಿ ದಿ ಐಲ್ ರೆಸಾರ್ಟ್ ಅನ್ನು ಗ್ರಾಹಕರ ಮನಸೆಳೆಯುವಂತೆ ನಿರ್ಮಿಸಲಾಗಿದ್ದು, 39 ಪ್ರಮುಖ ಸ್ಟೇಹೋಮ್‌ಗಳನ್ನು ರಚಿಸಲಾಗಿದೆ. ಪ್ರತಿ ಸ್ಟೇಗಳ ಸುತ್ತಲೂ ಗಿಡ, ಮರಗಳ ಹಸಿರು ಪರಿಸರ, ಮನಮೋಹಕ ಕ್ಯಾಂಪಿಂಗ್ ಟೆಂಟ್‌ಗಳು, ಜುಳುಜುಳು ಹರಿಯುವ ನೀರು, ಕೊಳಗಳು, ಕಾಟೇಜುಗಳು, ಈಜುಕೊಳ, ರೆಸ್ಟೋರೆಂಟ್, ಬಾರ್, ದಿನದ 24 ಗಂಟೆಯೂ ಭಾರತ ಸೇರಿದಂತೆ ಏಷ್ಯಾ ಖಂಡದಾದ್ಯಂತ ಇರುವ ವಿವಿಧ ಬಗೆಯ ಊಟ, ಉಪಹಾರ, ಖಾದ್ಯಗಳ ಸೌಲಭ್ಯ ಒದಗಿಸಲಾಗಿದೆ. ಎಂದು ವಿವರಿಸಿದರು.
ಕುಟುಂಬಗಳಿಗೆ ಮಾತ್ರವಲ್ಲದೆ, ಅತಿಥಿಗಳ ಆತಿಥ್ಯ, ವಿವಾಹ, ಕಾರ್ಪೊರೇಟ್ ಕಾರ್ಯಕ್ರಮಗಳಿಗೂ ಇದು ಲಭ್ಯವಿದ್ದು, ಪೂರಕವಾಗಿ ವಿನ್ಯಾಸಗೊಳಿಸಲಾಗಿದೆ. ಒಟ್ಟು 39 ಥೀಮ್ ಇರುವ ಐದು ಮಾದರಿ ಸ್ಟೇಗಳು ಲಭ್ಯವಿದ್ದು, 10 ಸಾವಿರ ರು. ಮೇಲ್ಪಟ್ಟ ದರದಲ್ಲಿ ಸ್ಟೇಗಳು ಲಭ್ಯವಾಗಲಿವೆ. ಕೇಂದ್ರೀಕೃತ ಅಥವಾ ಸಮುದಾಯ ಭೋಜನಕ್ಕಾಗಿಯೇ ನಿರ್ಮಿಸಿರುವ 62 ಆಸನಗಳ ಮುಕ್ತ ಬಹುಕ್ಯುಸಿನ್ ರೆಸ್ಟೋರೆಂಟ್ ಹಾಗೂ ದಿನದ 24 ಗಂಟೆಯೂ ಇನ್-ರೂಮ್ ಆಹಾರ ಸೇವಾ ಸೌಲಭ್ಯ ಹೊಂದಿದೆ ಎಂದು ತಿಳಿಸಿದರು.