ಕುಮಟಾ ಪಟ್ಟಣದಲ್ಲಿ ವಾಹನ ನಿಲುಗಡೆಗೆ ಹೊಸ ಕ್ರಮ: ಪುರಸಭೆ ಅಧ್ಯಕ್ಷೆ ಸುಮತಿ ಭಟ್

| Published : Mar 11 2025, 12:51 AM IST

ಕುಮಟಾ ಪಟ್ಟಣದಲ್ಲಿ ವಾಹನ ನಿಲುಗಡೆಗೆ ಹೊಸ ಕ್ರಮ: ಪುರಸಭೆ ಅಧ್ಯಕ್ಷೆ ಸುಮತಿ ಭಟ್
Share this Article
  • FB
  • TW
  • Linkdin
  • Email

ಸಾರಾಂಶ

ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆ ಮಾಡಿ ಸಂಚಾರ ಸಮಸ್ಯೆ ಸೃಷ್ಟಿಸುವವರನ್ನು ನಿಯಂತ್ರಿಸಿ

ಕುಮಟಾ: ಪಟ್ಟಣದ ಪ್ರಮುಖ ಸಂಚಾರ ದಟ್ಟಣೆ ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆ ಮಾಡಿ ಸಂಚಾರ ಸಮಸ್ಯೆ ಸೃಷ್ಟಿಸುವವರನ್ನು ನಿಯಂತ್ರಿಸಿ, ಸಂಚಾರ ಸುಗಮಗೊಳಿಸಲು ಪೊಲೀಸ್ ಇಲಾಖೆ ಸಹಯೋಗದಲ್ಲಿ ಕುಮಟಾ ಪುರಸಭೆ ಹೊಸ ನಿಯಮಾವಳಿ ರೂಪಿಸಿದೆ. ಕೂಡಲೇ ಜಾರಿಗೆ ತರಲು ಸಜ್ಜಾಗಿದೆ ಎಂದು ಪುರಸಭೆ ಅಧ್ಯಕ್ಷೆ ಸುಮತಿ ಭಟ್ ತಿಳಿಸಿದರು.

ಪುರಸಭೆಯ ಕಾರ್ಯಾಲಯದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ವಾಹನಗಳ ಸುಗಮ ಸಂಚಾರ ಹಾಗೂ ಸಾರ್ವಜನಿಕರ ಹಿತಕ್ಕಾಗಿ ಅನಿವಾರ್ಯವಾಗಿ ವಾಹನಗಳ ನಿಲುಗಡೆಯನ್ನು ಶಿಸ್ತುಬದ್ಧಗೊಳಿಸುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಪೊಲೀಸ್ ಸಹಯೋಗದಲ್ಲಿ ಪುರಸಭೆಯಿಂದ ವಾಹನ ನಿಲುಗಡೆ ಸ್ಥಳಗಳನ್ನು ಗುರುತಿಸಿದ್ದೇವೆ. ನಿಗದಿತ ದಿನಗಳಂದು ರಸ್ತೆಯ ಎಡ, ಬಲಭಾಗಕ್ಕೆ ಸೀಮಿತವಾಗಿ ವಾಹನ ನಿಲ್ಲಿಸಿದರೆ ಟ್ರಾಫಿಕ್ ಜಾಮ್ ತಡೆಯಬಹುದು. ಇದನ್ನು ಸಾರ್ವಜನಿಕರು ತಿಳಿದುಕೊಂಡು ನಾಗರಿಕ ಪ್ರಜ್ಞೆಯಿಂದ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ವಿನಂತಿಸುತ್ತಿದ್ದೇವೆ ಎಂದರು.

ಪಿಎಸ್‌ಐ ರವಿಗುಡ್ಡಿ ಮಾತನಾಡಿ, ಪಟ್ಟಣದಲ್ಲಿ ವಾಹನ ನಿಲುಗಡೆ ನಿಯಮ ಪಾಲನೆ ಕುರಿತು ಹೆಚ್ಚಿನ ನಿಗಾ ವಹಿಸಲಾಗುವುದು, ಸಂಚಾರ ನಿಯಮ ಉಲ್ಲಂಘಿಸಿದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಉಪಾಧ್ಯಕ್ಷ ಮಹೇಶ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಸೂರ್ಯಕಾಂತ ಗೌಡ, ಸದಸ್ಯ ಟೋನಿ, ವ್ಯವಸ್ಥಾಪಕಿ ಅನಿತಾ ಶೆಟ್ಟಿ ಇತರರು ಇದ್ದರು.

ಹೊಸ ಸಂಚಾರ ನಿಯಮಾವಳಿ:

ಪೇಟೆ ರಸ್ತೆಯ ಬಹುತೇಕ ಕಡೆಗಳಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ಅಗತ್ಯಕ್ಕೆ ತಕ್ಕಷ್ಟು ವಿಸ್ತಾರವಾಗಿಲ್ಲ. ಸಾರಿಗೆ ಬಸ್ ಸಹಿತ ದೊಡ್ಡ ವಾಹನಗಳು ಸಂಚರಿಸುವ ಕೋರ್ಟ್ ರಸ್ತೆ, ಬಸ್ತಿಪೇಟೆ, ನೆಲ್ಲಿಕೇರಿ ಹಳೆ ಬಸ್ ನಿಲ್ದಾಣ ಸಹಿತ ಅಘನಾಶಿನಿ, ಪಿಕಪ್ ಬಸ್ ನಿಲ್ದಾಣ, ಮೀನುಪೇಟೆ ರಸ್ತೆಗಳು ಸದಾ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದೆ. ವಾಹನ ದಟ್ಟಣೆ ನಿರ್ವಹಿಸುವುದು ತಲೆನೋವಾಗಿತ್ತು. ಹೀಗಾಗಿ ಶಾಸಕ ದಿನಕರ ಶೆಟ್ಟಿ ಪುರಸಭೆ, ಪೊಲೀಸ್ ಇಲಾಖೆಯೊಟ್ಟಿಗೆ ಚರ್ಚಿಸಿ ಸೂಕ್ತ ಕ್ರಮಕ್ಕೆ ನಿರ್ಧಾರ ಕೈಗೊಂಡಿದ್ದಾರೆ. ರಸ್ತೆಯಲ್ಲಿ ವಾಹನಗಳನ್ನು ಎಡ ಮತ್ತು ಬಲಭಾಗಕ್ಕೆ ವಾರಾನುಸಾರ ನಿಗದಿಸಲಾಗಿದೆ. ಮುಖ್ಯವಾಗಿ ಪಟ್ಟಣದ ರಾ.ಹೆ.೬೬ ನ್ನು ಹೊರತುಪಡಿಸಿ ಪಟ್ಟಣ ವ್ಯಾಪ್ತಿಯಲ್ಲಿ ಬೆಳಿಗ್ಗೆ ೯ರಿಂದ ರಾತ್ರಿ ೮ ಗಂಟೆವರೆಗೆ ಭಾರಿ ಸರಕು ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಮಾಸ್ತಿಕಟ್ಟೆ ವೃತ್ತದಿಂದ ಹಳೆ ಅಂಚೆಕಚೇರಿವರೆಗೆ ಹಾಗೂ ಮೂರುಕಟ್ಟೆಯಿಂದ ರಥಬೀದಿ ಸಹಿತ ಕೆನರಾ ಬೇಕರಿ ಒಳರಸ್ತೆಯವರೆಗೆ ಮಂಗಳ, ಗುರು, ಶನಿವಾರ ಎಡಭಾಗದಲ್ಲಿ, ಸೋಮ, ಬುಧ, ಶುಕ್ರ, ಭಾನುವಾರ ಬಲಭಾಗದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಈ ರಸ್ತೆಯಲ್ಲಿ ಏಕಮುಖ ದ್ವಿಚಕ್ರ ವಾಹನ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು ಲಘುವಾಹನಗಳ ಸಂಚಾರ ನಿಷೇಧಿಸಲಾಗಿದೆ. ಈ ಪೈಕಿ ರಥಬೀದಿಯ ವೆಂಕಟ್ರಮಣ ದೇವಸ್ಥಾನದಿಂದ ಕೆನರಾ ಬೇಕರಿ ಕ್ರಾಸ್ ವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಮೀನು ಮಾರುಕಟ್ಟೆಯಿಂದ ವನ್ನಳ್ಳಿ ಕ್ರಾಸ್‌ವರೆಗೆ ಸೋಮ, ಬುಧ, ಶುಕ್ರ ಮತ್ತು ಭಾನುವಾರ ಎಡಭಾಗದಲ್ಲಿ ಮಂಗಳ, ಗುರು ಹಾಗೂ ಶನಿವಾರ ಬಲಭಾಗದಲ್ಲಿ ವಾಹನ ನಿಲ್ಲಿಸಬಹುದಾಗಿದೆ. ಮೀನುಮಾರುಕಟ್ಟೆಯ ಸೇತುವೆಯ ಮೇಲೆ ವಾಹನ ನಿಲುಗಡೆ ಮಾಡುವಂತಿಲ್ಲ.

ವನ್ನಳ್ಳಿ ಕ್ರಾಸ್‌ನಿಂದ ಜೈವಂತ ಸ್ಟುಡಿಯೋ ಕ್ರಾಸ್‌ವರೆಗೆ ಮತ್ತು ಗಿಬ್ ವೃತ್ತದಿಂದ ಬಸ್ತಿಪೇಟೆ ಕ್ರಾಸ್‌ವರೆಗೆ ಸೋಮವಾರ, ಬುಧವಾರ, ಶುಕ್ರವಾರ, ಭಾನುವಾರ ಎಡಭಾಗದಲ್ಲಿ ಮಂಗಳವಾರ, ಗುರುವಾರ ಹಾಗೂ ಶನಿವಾರ ಬಲಭಾಗದಲ್ಲಿ ವಾಹನ ನಿಲ್ಲಿಸಬಹುದಾಗಿದೆ. ವಾಹನ ನಿಲುಗಡೆ ಸ್ಥಳಗಳ ಸಾರ್ವಜನಿಕರ ತಿಳಿವಳಿಕೆಗಾಗಿ ಸೂಚನಾ ಫಲಕಗಳನ್ನು ಅಲ್ಲಲ್ಲಿ ಅಳವಡಿಸಲಾಗುತ್ತಿದೆ. ಒಂದೊಮ್ಮೆ ನಿಯಮ ಉಲ್ಲಂಘಿಸಿದಲ್ಲಿ ಪೊಲೀಸ್‌ರು ಕಾನೂನು ರೀತ್ಯಾ ಕ್ರಮಕೈಗೊಳ್ಳಲಿದ್ದಾರೆ.