ಸಾರಾಂಶ
ಕನ್ನಡಪ್ರಭ ವಾರ್ತೆ ಕುಣಿಗಲ್ ಪಟ್ಟಣದ ಕೋಟೆ ಪ್ರದೇಶದಲ್ಲಿರುವ ಕುಣಿಗಲ್ ಹಿರೇಮಠದ ಮುಂದಿನ ಪೀಠಾಧಿಕಾರಿಯಾಗಿ ಪಟ್ಟಣದ ಕೆ ಸಿ ಬಸವರಾಜು ಮತ್ತು ಸವಿತಾ ಅವರ ಮಗ ಕೆ ಬಿ ವೀರೇಶ ಎಂಬ ವಟುವನ್ನು ವೀರರುದ್ರ ಶಿವಾಚಾರ್ಯ ಸ್ವಾಮೀಜಿ ಆಗಿ ನೇಮಕ ಮಾಡಲಾಯಿತು. ಕುಣಿಗಲ್ ಹಿರೇಮಠದಲ್ಲಿ ಈ ಹಿಂದೆ ಪೀಠಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಉತ್ತರಾಧಿಕಾರಿಯನ್ನು ನೇಮಕ ಮಾಡುವ ಸಂಬಂಧ ಮೃತ ಸ್ವಾಮೀಜಿ ರಚಿಸಿದ್ದ ವಿಲ್ ಪ್ರಕಾರ ವಿವಿಧ ಮಠಾಧೀಶರು, ಗಣ್ಯರ ಸಮ್ಮುಖದಲ್ಲಿ ಪಂಚ ಮುದ್ರೆ, ಪೀಠಾರೋಹಣ, ದಂಡ ಲಾಂಛನ, ಕಾವಿ ನೀಡುವಿಕೆ ಹಾಗೂ ಪಟ್ಟ ಧರಿಸುವ ಮುಖಾಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸಿದ್ದಲಿಂಗ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು. ಬೆಳಗಿನ ಜಾವ ಬ್ರಾಹ್ಮ್ಯ ಮುಹೂರ್ತದಲ್ಲಿ ವೀರೇಶ್ ಎಂಬ ವಟುವಿಗೆ ಕೇಶ ಮುಂಡನ ನಡೆಸಿ ನಂತರ ಶುದ್ಧೋದಕ ಜಲದಿಂದ ಅಭಿಷೇಕ ಮಾಡಲಾಯಿತು ಹಲವಾರು ಸ್ವಾಮೀಜಿಗಳು ಸಮಾಜದ ಮುಖಂಡರು ವಟುವಿನ ತಂದೆ ತಾಯಿ ಈ ಕಾರ್ಯ ನೆರವೇರಿಸಿದರು, ನಂತರ ನಡೆದ ದೀಕ್ಷಾ ಕಾರ್ಯಕ್ರಮದಲ್ಲಿ ಹಿತ್ತಲಹಳ್ಳಿ ಮಠದ ಸದಾಶಿವ ಶಿವಾಚಾರ್ಯ ಸ್ವಾಮೀಜಿ ವೀರಶೈವ ಲಿಂಗಾಯಿತ ಧರ್ಮದ ರೀತಿ ಮಂತ್ರ ವಿಧಿ ಬೋಧಿಸಿ ಯುವ ದೀಕ್ಷೆ, ಲಾಂಛನ ಪೀಠ,ಪಟ್ಟ, ಕಾವಿ ಹಾಗೂ ಜೋಳಿಗೆಯನ್ನು ನೀಡಿದರು,
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ಹಿರೇಮಠದ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಆಣತಿಯಂತೆ ಹಾಗೂ ಅವರ ಸಂಕಲ್ಪದಂತೆ ಈ ದಿನ ಮುಂದಿನ ಪೀಠಾಧಿಕಾರಿಗಳನ್ನು ಮಾಡಲಾಗುತ್ತಿದೆ ಸಿವಿಲ್ ಎಂಜಿನಿಯರ್ ಆಗಿ ಪದವಿ ಪಡೆದಿರುವ ಇವರು ಧಾರ್ಮಿಕ ಕ್ಷೇತ್ರದಲ್ಲಿ ಉತ್ತಮ ಜ್ಞಾನವನ್ನು ಪಡೆಯುವ ಉದ್ದೇಶದಿಂದ ಸಿದ್ದಗಂಗಾ ಮಠದಲ್ಲಿ ಎರಡು ವರ್ಷಗಳ ತನಕ ವೇದ ಉಪನಿಷತ್ತು ವೀರಶೈವ ಧರ್ಮ ಅಧ್ಯಯನ ಮಾಡುವಂತೆ ಸೂಚಿಸಿದರು,ಧಾರ್ಮಿಕ ಕ್ಷೇತ್ರದ ಬೆಳವಣಿಗೆಗೆ ಅವಶ್ಯಕತೆ ಇರುವಂತಹ ಸ್ವಾಮೀಜಿಗಳ ಸಂಖ್ಯೆ ಬಹುತೇಕ ಕಡಿಮೆ ಆಗುತ್ತಿದೆ ಹಲವಾರು ಸಂಸಾರಿಗಳು ತಮ್ಮ ಮನೆಯ ಮಕ್ಕಳನ್ನು ಮಠಗಳಿಗೆ ವಟುವಾಗಿ ಕೊಡಲು ನಿರಾಕರಿಸಿರುವುದು ಎಷ್ಟು ಸರಿ ಎಂದರು ಸಮಾಜದ ಒಳಿತಿಗಾಗಿ ತಮ್ಮ ಮಗನನ್ನು ಸ್ವಾಮೀಜಿ ಮಾಡಲು ನೀಡಿರುವ ಕೆಸಿ ಬಸವರಾಜು ಮತ್ತು ಸವಿತಾ ಅವರನ್ನು ಅಭಿನಂದಿಸುವ ಜವಾಬ್ದಾರಿ ನಮ್ಮ ಮೇಲಿದೆ. ಹೊಸ ಸ್ವಾಮೀಜಿಗೆ ಹಿತವಚನ ಹೇಳಿದ ಸಿದ್ದಗಂಗಾ ಶ್ರೀಗಳು ಸಮಾಜದ ಒಳಿತಿಗಾಗಿ ಹಾಗೂ ಮಠದ ಅಭಿವೃದ್ಧಿಗಾಗಿ ದುಡಿಯುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕುಣಿಗಲ್ ಹಿರೇಮಠದ ಹೊಸ ಪೀಠಾಧ್ಯಕ್ಷರಾದ ಶ್ರೀ ವೀರರುದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಿದ್ದಗಂಗೆ ಶ್ರೀಗಳು ಸೇರಿದಂತೆ ಇತರ ಸ್ವಾಮೀಜಿಗಳ ಮಾರ್ಗದರ್ಶನ ಹಾಗೂ ಸಮಾಜದ ಮುಖಂಡರ ಸಲಹೆ ಮೇರೆಗೆ ಸಮಾಜವನ್ನು ಮಠವನ್ನು ಉತ್ತಮ ಮಾರ್ಗದಲ್ಲಿ ನಡೆಸಿಕೊಂಡು ಹೋಗುವುದಾಗಿ ಬರವಸೆ ನೀಡಿದರು.
ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ರಚನೆಯಾದ ಸಂಪುಟವನ್ನು ಸಭೆಯಲ್ಲಿ ಓದುವ ಹಾಗೂ ಸಹಿ ಪಡೆಯುವ ಕರ್ತವ್ಯವನ್ನು ನಿರ್ವಹಿಸಿ ಮಠದ ಅಭಿವೃದ್ಧಿಗಾಗಿ ಶ್ರಮಿಸುವಂತೆ ಹಾಗೂ ಮಠದ ಆಸ್ತಿಗಳನ್ನು ಯಾವುದೇ ಕಾರಣಕ್ಕೂ ಪರಭಾರೆ ಮಾಡದೆ ಅದರಿಂದ ಬರುವ ಲಾಭವನ್ನು ದುರ್ಬಳಕೆಗೆ ಬಳಸದೆ ಕೇವಲ ಮಠದಲ್ಲಿ ನಡೆಯುವ ದಾಸೋಹ ಪೂಜಾ ಕಾರ್ಯಕ್ರಮ ಸೇರಿದಂತೆ ಇತರ ಮಠದ ಅಭಿವೃದ್ಧಿಗಾಗಿ ಬಳಸಲು ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂಪುಟ ರಚನೆ ಆಗಿದೆ ಎಂದು ಓದಿದರು.ಈ ಸಂದರ್ಭದಲ್ಲಿ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶಿವ ಸಿದ್ದೇಶ್ವರ ಸ್ವಾಮೀಜಿ, ದೇಗುಲ ಮಠದ ಕಿರಿಯ ಶ್ರೀಗಳಾದ ಚನ್ನಬಸವ ಸ್ವಾಮೀಜಿ, ಕೊಡಲಿಪೇಟೆ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಇತರ ಸ್ವಾಮೀಜಿಗಳು ಇದ್ದರು.