ಹೊಸ ಮತದಾರರ ನೋಂದಣಿಗೆ ಅವಕಾಶ

| Published : Nov 20 2024, 12:33 AM IST

ಸಾರಾಂಶ

ಮತದಾನ ಪ್ರತಿಯೊಬ್ಬರ ಹಕ್ಕಾಗಿದ್ದು, ಯುವ ಸಮುದಾಯ ಮತ ಚಲಾವಣೆ ಹಕ್ಕು ಪಡೆದುಕೊಳ್ಳಬೇಕು. 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಬೇಕು

ಮತದಾರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ -2025ರ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಗಂಗಾವತಿಮತದಾರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ -2025 ಅಭಿಯಾನ ಶುರುವಾಗಿದ್ದು, ಎಲ್ಲರೂ ಉಪಯೋಗ ಪಡೆದುಕೊಳ್ಳುವಂತೆ ವಡ್ಡರಹಟ್ಟಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುರೇಶ ಚಲವಾದಿ ಹೇಳಿದರು.ತಾಲೂಕಿನ ವಡ್ಡರಹಟ್ಟಿ ಗ್ರಾಮದ ಕೆಎಲ್ಇ ಕಾಲೇಜಿನಲ್ಲಿ ತಾಲೂಕು ಸ್ವೀಪ್ ಸಮಿತಿ ಹಾಗೂ ಗ್ರಾಪಂ ಸ್ವೀಪ್ ಸಮಿತಿಯಿಂದ ಮಂಗಳವಾರ ಆಯೋಜಿಸಿದ್ದ ಮತದಾರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ -2025ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮತದಾನ ಪ್ರತಿಯೊಬ್ಬರ ಹಕ್ಕಾಗಿದ್ದು, ಯುವ ಸಮುದಾಯ ಮತ ಚಲಾವಣೆ ಹಕ್ಕು ಪಡೆದುಕೊಳ್ಳಬೇಕು. 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಬೇಕು ಎಂದರು.2025ರ ಜನವರಿ 5ವರೆಗೆ ಮತದಾನ ಪಟ್ಟಿ ಪರಿಷ್ಕರಣೆಗೆ ಅವಕಾಶ ಇದ್ದು, ಅರ್ಜಿ ಫಾರಂ ನಮೂನೆ-6ರಲ್ಲಿ ಹೊಸ ಮತಾದರರ ನೋಂದಣಿ, ನಮೂನೆ 6ಬಿ-ರಲ್ಲಿ ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲು, ನಮೂನೆ-7ರಲ್ಲಿ ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಲಿಂಕ್ ಮಾಡಲು, ನಮೂನೆ-6ರಲ್ಲಿ ವಿಳಾಸ ಬದಲಾವಣೆ, ಬದಲಿ ಮತದಾರರ ಗುರುತಿನ ಚೀಟಿ ನೀಡುವಿಕೆಗಾಗಿ, ಅಂಗವಿಕಲ ವ್ಯಕ್ತಿಯನ್ನು ಮತದಾರರ ಪಟ್ಟಿಯಲ್ಲಿ ಗುರುತಿಸಲು ಸ್ಥಳೀಯ ಬಿಎಲ್ಓ ಅವರನ್ನು ಸಂಪರ್ಕಿಸುವಂತೆ ಮಾಹಿತಿ ನೀಡಿದರು.ನಂತರ ವಿದ್ಯಾರ್ಥಿಗಳಿಗೆ ಚುನಾವಣೆ ಹಾಗೂ ಮತದಾನ ಕುರಿತು ಕ್ವೀಜ್ ನಡೆಸಿ ಜಾಗೃತಿ ಮೂಡಿಸಿದರು.ಕಾಲೇಜು ಪ್ರಾಚಾರ್ಯ ಎಸ್.ಸಿ. ಪಾಟೀಲ್, ಉಪನ್ಯಾಸಕ ಶ್ಯಾಮ್ ಸಿಂಗ್, ತಾಪಂ ಐಇಸಿ ಸಂಯೋಜಕ ಬಾಳಪ್ಪ ತಾಳಕೇರಿ, ಗ್ರಾಮ ಆಡಳಿತ ಅಧಿಕಾರಿ ಸೈನಾಜ್, ಗ್ರಾಪಂ ಸಿಬ್ಬಂದಿ ರುದ್ರಸ್ವಾಮಿ, ಬಿಎಫ್ ಟಿ ಅಮರೇಶ, ಕೆಎಲ್ಇ ಕಾಲೇಜು ಉಪನ್ಯಾಸಕರು, ಸಿಬ್ಬಂದಿ ವರ್ಗ ಇದ್ದರು.