ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗೂರು
ಹೋಬಳಿಯ ನವಿಲೆ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ನಾಗೇಶ್ವರ ಸನ್ನಿಧಿಯಲ್ಲಿ ಸುಮಾರು 5 ಕೋಟಿ ರು. ವೆಚ್ಚದಲ್ಲಿ ನೂತನ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.ಹೋಬಳಿಯ ನವಿಲೆ ನಾಗೇಶ್ವರ ಸನ್ನಿಧಿಯಲ್ಲಿ ದೇವಾಲಯ ಆಡಳಿತ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸದ್ಯ ದೇವಾಲಯದ ಬ್ಯಾಂಕ್ ಖಾತೆಯಲ್ಲಿ ಸುಮಾರು 2 ಕೋಟಿ ಹಣವಿದ್ದು, ಈ ಹಣದಲ್ಲಿ ನೂತನ ಕಲ್ಯಾಣ ಮಂಟಪದ ಕಾಮಗಾರಿಯನ್ನು ಪ್ರಾರಂಭಿಸಲಾಗುತ್ತದೆ. ಮುಂಬರುವ ದಿನಗಳಲ್ಲಿ ದೇವಾಲಯಕ್ಕೆ ಬರುವ ಆದಾಯ ಮತ್ತು ಭಕ್ತರ ನೆರವಿನಿಂದ ಕಲ್ಯಾಣ ಮಂಟಪದ ಕಾಮಗಾರಿಯನ್ನು ಸಂಪೂರ್ಣ ಮುಗಿಸುವ ಗುರಿ ಹೊಂದಲಾಗಿದೆ ಎಂದರು.
ನೂತನ ಕಲ್ಯಾಣ ಮಂಟಪದಲ್ಲಿ ಪ್ರತ್ಯೇಕ ಅಡುಗೆಮನೆ, ಧಾರೆ ಮಂಟಪ ಸೇರಿದಂತೆ ಸುಸಜ್ಜಿತವಾಗಿ ಕಟ್ಟಡವನ್ನು ನಿರ್ಮಾಣ ಮಾಡುವಂತೆ ನಿರ್ಭೀತಿ ಕೇಂದ್ರದ ಎಂಜಿನಿಯರ್‌ಗೆ ತಿಳಿಸಲಾಗಿದೆ. ನೂತನ ಕಲ್ಯಾಣ ಮಂಟಪ ನಿರ್ಮಾಣಗೊಂಡರೆ ಈ ಭಾಗದ ಶುಭಕಾರ್ಯಗಳಿಗೆ ಹಾಗೂ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲು ಹೆಚ್ಚಿನ ಅನುಕೂಲವಾಗುತ್ತದೆ ಎಂದರು.ಪ್ರತಿನಿತ್ಯ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಹರಕೆ ಒತ್ತು ಶ್ರೀ ನಾಗೇಶ್ವರ ಸ್ವಾಮಿ ದೇವಾಲಯಕ್ಕೆ ಬರುತ್ತಾರೆ. ಮುಂದಿನ ದಿನಗಳಲ್ಲಿ ಈ ಭಾಗದ ಪ್ರಸಿದ್ಧ ಧಾರ್ಮಿಕ ಕೇಂದ್ರವನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ. ಅರ್ಚಕರ ವಿಶ್ರಾಂತಿ ಕೊಠಡಿ ನಿರ್ಮಾಣಕ್ಕೂ ಮುಂಬರುವ ದಿನಗಳಲ್ಲಿ ಆದ್ಯತೆ ನೀಡುವುದಾಗಿ ಹೇಳಿದರು.
ನವಿಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೋವಿ ಕಾಲೋನಿಯಲ್ಲಿ ಕಾಂಕ್ರೀಟ್ ರಸ್ತೆಗೆ ಅನುದಾನ ನೀಡುವುದಾಗಿ ತಿಳಿಸಿದ ಅವರು, ನವಿಲೆ ನಾಗೇಶ್ವರ ಸ್ವಾಮಿ ನೂತನ ರಥ ನಿರ್ಮಾಣಕ್ಕೆ ಸುಮಾರು 80 ಲಕ್ಷ ವೆಚ್ಚವಾಗುತ್ತಿದ್ದು, ಈಗಾಗಲೇ ಭಕ್ತರು ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ ತಾವು ಕೂಡ ಹೆಚ್ಚಿನ ಸಹಾಯ ಮಾಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಮುಜರಾಯಿ ತಹಸೀಲ್ದಾರ್ ಲತಾ, ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ನವಿಲೆ ಪರಮೇಶ್, ನಿರ್ಭೀತಿ ಕೇಂದ್ರದ ಎಂಜಿನಿಯರ್ ಸಿದ್ದೇಗೌಡ, ಮುಖಂಡರಾದ ಎನ್. ಬಿ ನಾಗರಾಜ್, ಎನ್‌ಕೆ ನಾಗಪ್ಪ, ಜಯದೇವಪ್ಪ, ರವೀಶ್, ರಾಜು, ನಾಗೇಶ್, ದೇವರಾಜು, ಕುಮಾರ್, ಪುಟ್ಟರಾಜು, ದೀಪು, ನಂಜುಂಡೇಗೌಡ, ಸುರೇಶ್, ಉದ್ಯಮಿ ಭುವನಹಳ್ಳಿ ಯೋಗೇಶ್, ವಿಎನ್ ಮಂಜುನಾಥ್, ಹುಲಿಕೆರೆ ಸಂಪತ್ ಕುಮಾರ್, ಜಂಬೂರ್ ಮಹೇಶ್, ಸತೀಶ್, ಪಂಚಾಯತಿ ಕಾರ್ಯದರ್ಶಿ ಮಲ್ಲೇಶ್, ಸೇರಿದಂತೆ ಇತರರು ಹಾಜರಿದ್ದರು.