ಹಾವೇರಿ: ವಿಬಿಜಿ ರಾಮ್‌ಜಿ ಯೋಜನೆಯಲ್ಲಿನ ಹಲವು ನಿಯಮಗಳನ್ನು ಪರಿಷ್ಕರಿಸುವಂತೆ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಪ್ರಸ್ತುತ ಪರಿಸ್ಥಿತಿಯಲ್ಲಿ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಕಷ್ಟಕರವಾಗಲಿದೆ ಎಂದು ವಿಧಾನಸಭಾಧ್ಯಕ್ಷ ಹಾಗೂ ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಬೇಸರ ವ್ಯಕ್ತಪಡಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ವಿಬಿಜಿ ರಾಮ್‌ಜಿ ಯೋಜನೆ ರಾಜ್ಯ ಸರ್ಕಾರದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಉಂಟುಮಾಡಲಿದ್ದು, ಯೋಜನೆಯಲ್ಲಿನ ಹಲವು ಷರತ್ತುಗಳು ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿವೆ. ಈ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆರ್ಥಿಕ ಪಾಲುದಾರಿಕೆಯನ್ನು 60:40 ಅನುಪಾತದಲ್ಲಿ ನಿಗದಿಪಡಿಸಿರುವುದರಿಂದ ರಾಜ್ಯದ ಮೇಲಿನ ವೆಚ್ಚದ ಭಾರ ಹೆಚ್ಚಾಗಲಿದೆ. ಆದರೂ ಈಗ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಿದೆ ಎಂದರು.
ಸಭೆಯಲ್ಲಿ ಮಾಹಿತಿ ನೀಡಿದ ನರೇಗಾ ಯೋಜನಾಧಿಕಾರಿ, ಜು. 1ರಿಂದ ರಾಜ್ಯದಲ್ಲಿ ವಿಬಿಜಿ ರಾಮ್‌ಜಿ ಯೋಜನೆ ಜಾರಿಯಾಗಲಿದ್ದು, ಇದರೊಂದಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಯಲ್ಲಿ ಇದ್ದ ಕೆಲವು ನಿಯಮಗಳಲ್ಲಿ ಬದಲಾವಣೆ ಆಗಲಿವೆ ಎಂದು ತಿಳಿಸಿದರು.ಹೊಸ ಯೋಜನೆಯಡಿ ಬಿತ್ತನೆ ಮತ್ತು ಕೊಯ್ಲು ಅವಧಿಯಲ್ಲಿ ತಲಾ 30 ದಿನಗಳಂತೆ ಒಟ್ಟು 60 ದಿನಗಳ ಕಾಲ ಕಾರ್ಮಿಕರಿಗೆ ಕೆಲಸ ನೀಡುವುದನ್ನು ಸ್ಥಗಿತಗೊಳಿಸಲಾಗುತ್ತದೆ. ಇದು ವರೆಗೆ ನರೇಗಾ ಯೋಜನೆಯಡಿ ಕಾರ್ಮಿಕರು ವರ್ಷದ ಯಾವುದೇ ದಿನ ಕೆಲಸಕ್ಕೆ ಬೇಡಿಕೆ ಸಲ್ಲಿಸಿ ಉದ್ಯೋಗ ಪಡೆಯಬಹುದಾಗಿತ್ತು ಎಂದು ವಿವರಿಸಿದರು.
ಯೋಜನೆಯಡಿ ಸಕ್ರಿಯ ಕಾರ್ಮಿಕರಿಗೆ ಇ-ಕೆವೈಸಿ ಕಡ್ಡಾಯಗೊಳಿಸಲಾಗಿದ್ದು, ಅನುಷ್ಠಾನದಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಇದು ಸಹಕಾರಿಯಾಗಲಿದೆ ಎಂದು ಹೇಳಿದರು. ನಿಗದಿತ ಮಿತಿಗಿಂತ ಹೆಚ್ಚಿನ ಕಾಮಗಾರಿಗಳನ್ನು ಕೈಗೆತ್ತಿಕೊಂಡರೆ ಅದರ ಹೆಚ್ಚುವರಿ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕಾಗುತ್ತದೆ. ಹೊರಗುತ್ತಿಗೆ ನೌಕರರ ವೇತನ ಹಾಗೂ ಸಾರಿಗೆ ವೆಚ್ಚವನ್ನೂ ರಾಜ್ಯವೇ ಹೊತ್ತುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ ತೀವ್ರವಲ್ಲ
ಹಾವೇರಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿಲ್ಲ, ಕೆಲವೆಡೆ ಮಾತ್ರ ಬೋರ್‌ವೆಲ್‌ಗಳನ್ನು ಮರುಕೊರೆಸುವ ಅಗತ್ಯವಿದ್ದು, ಈ ಉದ್ದೇಶಕ್ಕಾಗಿ ಟಾಸ್ಕ್‌ಫೋರ್ಸ್‌ಗೆ ₹41 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಹೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ರುದ್ರಪ್ಪ ಲಮಾಣಿ, ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಹಾವೇರಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟೊಂದು ಗಂಭೀರವಾಗಿ ಕಂಡುಬಂದಿಲ್ಲ. ಆದರೆ, ತುರ್ತು ಅಗತ್ಯವಿರುವ ಪ್ರದೇಶಗಳ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬಾಡಿಗೆ ಕಟ್ಟಡಗಳಲ್ಲಿ ಅಂಗನವಾಡಿ ಕೇಂದ್ರಗಳುತಾಲೂಕಿನಲ್ಲಿ ಒಟ್ಟು 260 ಅಂಗನವಾಡಿ ಕೇಂದ್ರಗಳಿದ್ದು, ಅವುಗಳಲ್ಲಿ 55 ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು. ನಗರ ಪ್ರದೇಶದ 24 ಹಾಗೂ ಗ್ರಾಮೀಣ ಭಾಗದ 31 ಕೇಂದ್ರಗಳು ಸ್ವಂತ ಕಟ್ಟಡವಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂದರು.
ಗ್ರಾಮೀಣ ಭಾಗದ 31 ಕೇಂದ್ರಗಳ ಪೈಕಿ 29 ಕೇಂದ್ರಗಳಿಗೆ ಈಗಾಗಲೇ ನಿವೇಶನ ಮಂಜೂರಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದ ಅವರು, ಬಿದರಗಟ್ಟಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಜಾಗದ ಸಮಸ್ಯೆ ಎದುರಾಗಿದ್ದು, ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿಕೊಂಡು ಖಾಸಗಿ ವ್ಯಕ್ತಿಗಳು ದನದ ಕೊಟ್ಟಿಗೆ ನಿರ್ಮಿಸಿರುವ ಕಾರಣ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು. ಪಿಡಿಒ ಹಾಗೂ ಆಡಳಿತಾಕಾರಿಗಳನ್ನು ಕರೆದುಕೊಂಡು ಹೋಗಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಬೇಕು. ಅಂಗನವಾಡಿಗಳಿಗೆ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಸೌಲಭ್ಯ ಕಲ್ಪಿಸಿ ಎಂದು ಶಾಸಕರು ತಿಳಿಸಿದರು.ಫಲಾನುಭವಿಗಳು ಯಾರೆಂಬುದೇ ಗೊತ್ತಿಲ್ಲ
ತಾಲೂಕಿನಲ್ಲಿ 2,099 ಫಲಾನುಭವಿಗಳು ಯುವನಿಧಿ ಯೋಜನೆಯಡಿ ನೋಂದಣಿ ಮಾಡಿಸಿಕೊಂಡಿದ್ದು, ಈ ಪೈಕಿ 1,858 ಫಲಾನುಭವಿಗಳಿಗೆ ₹5.57 ಲಕ್ಷ ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ ಎಂದು ಉದ್ಯೋಗ ವಿನಿಮಯ ಕಚೇರಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಎಂ.ಎಂ. ಮೈದೂರ, ಯಾವ ಯಾವ ಫಲಾನುಭವಿಗಳಿಗೆ ಹಣ ಹಾಕಿದೆ ಎಂಬ ಮಾಹಿತಿ ಕೊಡಿ ಎಂದರು. ಆಗ ಅಧಿಕಾರಿಗಳು ನಮ್ಮಲ್ಲಿ ಯುವನಿಧಿ ಫಲಾನುಭವಿಗಳ ಪಟ್ಟಿ ಇಲ್ಲ, ನಾವೂ ರಾಜ್ಯ ಗ್ಯಾರಂಟಿ ಸಮಿತಿಗೆ ಫಲಾನುಭವಿ ಪಟ್ಟಿ ಒದಗಿಸುವಂತೆ ಕೋರಿದ್ದು, ಇದುವರೆಗೂ ಕೊಟ್ಟಿಲ್ಲ ಎಂದು ತಿಳಿಸಿದರು.
ಆಗ ಮಧ್ಯ ಪ್ರವೇಶಿಸಿದ ಶಾಸಕ ರುದ್ರಪ್ಪ ಲಮಾಣಿ, ಸರ್ಕಾರ ಪಾರದರ್ಶಕವಾಗಿ ಗ್ಯಾರಂಟಿಗಳನ್ನು ನೀಡಲು ಆದೇಶ ಹೊರಡಿಸಿದೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆಯಡಿ ಕೋಟ್ಯಂತರ ರುಪಾಯಿ ಸತ್ತವರ ಖಾತೆಗೆ ಹೋಗಿದೆ. ಯುವನಿಧಿಯೂ ಆ ರೀತಿ ಆಗದಂತೆ ನೋಡಿಕೊಳ್ಳಿ. ಯಾವ ಯಾವ ಫಲಾನುಭವಿಗಳಿಗೆ ಹಣ ಹೋಗಿದೆ ಎಂಬುದರ ಪಟ್ಟಿ ಪಾರದರ್ಶಕವಾಗಿದ್ದರೆ, ಮುಂದೆ ಉದ್ಯೋಗ ಕಲ್ಪಿಸಿಕೊಡಲು ಅನುಕೂಲವಾಗುತ್ತದೆ. ಶೀಘ್ರದಲ್ಲಿ ಮಾಹಿತಿ ಒದಗಿಸುವಂತೆ ಸೂಚಿಸಿದರು.ಸಭೆಯಲ್ಲಿ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಮೋಹನ ದಂಡಿನ, ತಹಸೀಲ್ದಾರ್ ಶರಣಮ್ಮ ಕೆ., ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗೆಣ್ಣಿ, ಸಭಾಧ್ಯಕ್ಷರ ಆಪ್ತಕಾರ್ಯದರ್ಶಿ ಡಾ. ಶ್ರೀಪಾದ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪರಮೇಶ್ವರ ಹುಬ್ಬಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.