ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಹೊಸ ವರ್ಷವನ್ನು ಜಿಲ್ಲೆಯಾದ್ಯಂತ ಜನತೆ ಸಂಭ್ರಮದಿಂದ ಸ್ವಾಗತಿಸಿದ್ದು, ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.ಹೊಸ ವರ್ಷದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ವಿವಿಧ ಕಚೇರಿಗಳಲ್ಲಿ ಸರ್ಕಾರಿ ನೌಕರರು ಕೇಕ್ ಕತ್ತರಿಸಿ ಸಂಭ್ರಮಿಸಿ, ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು.
ಈ ನಡುವೆ ನಗರದ ಪತ್ರಕರ್ತರ ಭವನದಲ್ಲಿ ಪತ್ರಕರ್ತರು ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ನೇತೃತ್ವದಲ್ಲಿ ಸ್ನೇಹಮಿಲನ ಕಾರ್ಯಕ್ರಮ ನಡೆಸಿ, ಸಿಹಿ ಹಂಚಿ ಹೊಸ ವರ್ಷದ ಮೊದಲ ದಿನವನ್ನು ಸಂಭ್ರಮಿಸಿದರು.ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ:
ನಗರದೇವತೆ ಕೋಲಾರದಮ್ಮ, ಸೋಮೇಶ್ವರ, ಕಿಲಾರಿಪೇಟೆ ವೇಣುಗೋಪಾಲಸ್ವಾಮಿ, ಕೆಇಬಿ ಗಣಪತಿ ದೇವಾಲಯ, ಕಾಳಮ್ಮನ ಗುಡಿ, ವೆಂಕಟರಮಣಸ್ವಾಮಿ ದೇವಾಲಯ, ಪಂಚಮುಖಿ ಹನುಮ ದೇವಾಲಯ ಸೇರಿದಂತೆ ಎಲ್ಲಾ ಕಡೆಯೂ ಹೊಸ ವರ್ಷದ ಅಂಗವಾಗಿ ಇಡೀ ದೇವಾಲಯಗಳಿಗೆ ವಿದ್ಯುತ್ ದೀಪಗಳಿಂದ ಶೃಂಗಾರಗೊಳಿಸಿದ್ದು, ದೇವರಿಗೆ ವಿಶೇಷ ಪೂಜೆ, ಅಲಂಕಾರ ನಡೆಯಿತು.ನಗರದ ಪ್ರಮುಖ ದೇವಾಲಯಗಳಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ ಕಾರಣ ಉದ್ದುದ್ದ ಸಾಲುಗಳು ಕಂಡು ಬಂದವು.
ಒಟ್ಟಾರೆ ನಾಗರಿಕರು ಹೊಸ ವರ್ಷದಲ್ಲಿ ಒಳಿತನ್ನು ಮಾಡು ಎಂದು ದೇವರಿಗೆ ಮೊರೆ ಹೋಗಿದ್ದು ಕಂಡು ಬಂತು.ದೊಡ್ಡಪೇಟೆ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ರೀತಿಯಲ್ಲಿ ಹೂವಿನ ಅಲಂಕಾರ ಮಾಡಿದ್ದು, ನೂರಾರು ಮಂದಿ ಮುಂಜಾನೆಯಿಂದಲೇ ಸರದಿ ಸಾಲಿನಲ್ಲಿ ಆಗಮಿಸಿ ದೇವರ ದರ್ಶನ ಪಡೆದರು.
ವಿವಿಧ ಸಂಘಗಳು, ಪತ್ರಿಕಾಲಾಯಗಳಲ್ಲಿ ಹೊಸ ವರ್ಷದ ನೂತನ ಕ್ಯಾಲೆಂಡರ್ ಗಳ ಬಿಡುಗಡೆಯು ನಡೆದಿದ್ದು, ಎಲ್ಲಾ ಕಡೆ ಹೊಸ ವರ್ಷದ ಸಂಭ್ರಮ ಕಂಡು ಬಂತು.ಕಿಲಾರಿಪೇಟೆಯಲ್ಲಿ ವಿಶೇಷ ಅಲಂಕಾರ:
ನಗರದ ಗೋಪಾಲಕರ ತವರಾದ ಕಿಲಾರಿಪೇಟೆಯಲ್ಲಿ ಧನುರ್ಮಾಸ ಹಾಗೂ ಹೊಸ ವರ್ಷದ ಅಂಗವಾಗಿ ವೇಣುಗೋಪಾಲಸ್ವಾಮಿಗೆ ವಿಶೇಷ ಅಲಂಕಾರ ಮಾಡಿದ್ದು, ಸ್ವಾಮಿಯನ್ನು ವಿಶಿಷ್ಟ ರೀತಿಯ ಹೂಗಳಿಂದ ಅಲಂಕರಿಸಲಾಗಿತ್ತು.ಮುನಿಸ್ವಾಮಪ್ಪ ಸಹೋದರರು ಪೂಜೆ ನಡೆಸಿಕೊಟ್ಟಿದ್ದು, ಕಿಲಾರಿಪೇಟೆಯ ಮೇಸ್ತ್ರಿ ನಾರಾಯಣಸ್ವಾಮಿ,ಚೌಡಪ್ಪ, ಮುನಿಸ್ವಾಮಪ್ಪ, ಪತ್ರಕರ್ತ ಕೆ.ಎಸ್.ಗಣೇಶ್, ಸೀನಪ್ಪ, ತಬಲಮಾಸ್ಟರ್ ಕೃಷ್ಣಪ್ಪ, ಕೆ.ಎನ್.ಮುನಿಕೃಷ್ಣ, ಮಣಿ, ಮುನಿವೆಂಕಟ ಯಾದವ್, ಕ್ಯಾಪ್ಟನ್ ಮಂಜು, ರಾಮಕೃಷ್ಣ, ದೊಡ್ಡವೀರಪ್ಪ, ಬಿ.ಶ್ರೀನಿವಾಸ್, ಕೆ.ಎನ್.ವೆಂಕಟೇಶ್, ಬೂದಿಕೋಟೆ ವೆಂಕಟಪ್ಪ, ವೆಂಕಟರಾಂ,ಗೋವಿಂದಪ್ಪ ಮತ್ತಿತರರಿದ್ದರು.
ಅಂತರಗಂಗೆ ಬೆಟ್ಟದಲ್ಲಿ ಹೊಸ ವರ್ಷಾಚರಣೆ:ಹೊಸ ವರ್ಷದ ಪ್ರಯುಕ್ತ ನಗರದ ಅಂತರ ಗಂಗೆಬೆಟ್ಟದ ಕಾಶಿ ಶ್ರೀ ವಿಶ್ವೇಶ್ವರ ದೇವಾಲಯಕ್ಕೆ ನೂರಾರು ಭಕ್ತರು ಭೇಟಿ ನೀಡಿ ದೇವರ ಪೂಜೆ ಮಾಡಿಸಿ ಕೃತಾರ್ಥರಾದರು.ಕೋಲಾರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳು ಹಾಗೂ ಬೆಂಗಳೂರು, ಗಡಿ ಭಾಗದ ಹೊರ ರಾಜ್ಯಗಳಿಂದಲೂ ಭಕ್ತರು ಮಧ್ಯರಾತ್ರಿಯಿಂದಲೇ ಅಂತರಗಂಗೆ ಬೆಟ್ಟಕ್ಕೆ ಭೇಟಿ ನೀಡಿ, ಅಲ್ಲಿ ಕಲ್ಲಿನ ಬಸವನ ಬಾಯಲ್ಲಿ ಸುರಿಯುತ್ತಿರುವ ನೀರಿನಲ್ಲಿ ಸ್ನಾನ ಮಾಡಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಕೈ ಮುಗಿದರು. ಬೆಟ್ಟದಲ್ಲಿ ಭಕ್ತರಿಗೆ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.