ಸಾರಾಂಶ
ಹೊಸಪೇಟೆ: ಹೊಸ ವರ್ಷಾಚರಣೆ ನಿಮಿತ್ತ ಹಂಪಿಗೆ ಪ್ರವಾಸಿಗರು ಹರಿದುಬಂದಿದ್ದು, 2023ನೇ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷಾಚರಣೆಗೆ ಹಂಪಿಯ ವಿರೂಪಾಕ್ಷೇಶ್ವರ ಸ್ವಾಮಿ ದರ್ಶನ ಪಡೆದ ಭಕ್ತರು ಹಾಗೂ ಪ್ರವಾಸಿಗರು ಹೊಸ ಸಂಕಲ್ಪ ಮಾಡಿದರು.
ಹಂಪಿಯಲ್ಲಿ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಹಂಪಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹಂಪಿ ಬಸ್ ನಿಲ್ದಾಣ, ಪಾರ್ಕಿಂಗ್ ಸ್ಥಳವಲ್ಲದೇ ಹಂಪಿ ಉತ್ಸವಕ್ಕಾಗಿ ಗುರುತಿಸಲಾಗಿರುವ ಗುತ್ತಿ ತೋಟದಲ್ಲೂ ಪ್ರವಾಸಿಗರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ಆದರೂ ಪ್ರವಾಸಿಗರ ದಂಡು ಕಡಿಮೆಯಾಗಿರಲಿಲ್ಲ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹಂಪಿಯಲ್ಲಿ ಉಂಟಾಗಿದ್ದ ಟ್ರಾಫಿಕ್ ಜಾಮ್ ತೆರವುಗೊಳಿಸಲು ಪೊಲೀಸರು ಹರಸಾಹಸಪಟ್ಟರು.ಹಂಪಿಗೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಎಲ್ಲೆಡೆ ಸ್ಮಾರಕಗಳ ಎದುರು ಸೆಲ್ಫಿ ಕ್ರೇಜ್‌ನೊಂದಿಗೆ ಪ್ರವಾಸಿಗರು ಫೋಟೋಗಳಿಗೆ ಪೋಸು ನೀಡಿದರು. ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರಿಂದ ಎಲ್ಲೆಡೆಯೂ ಪ್ರವಾಸಿಗರ ದಂಡೇ ಕಾಣುತ್ತಿತ್ತು.
ಸ್ಮಾರಕಗಳ ವೀಕ್ಷಣೆ: ಹಂಪಿಯ ವಿರೂಪಾಕ್ಷೇಶ್ವರ ದೇವಾಲಯ, ಮಹಾನವಮಿ ದಿಬ್ಬ, ರಾಣಿ ಸ್ನಾನಗೃಹ, ಕಡಲೆ ಕಾಳು, ಸಾಸಿವೆ ಕಾಳು ಗಣಪತಿ ಮಂಟಪಗಳು, ಎದುರುಬಸವಣ್ಣ ಮಂಟಪ, ಶ್ರೀಕೃಷ್ಣದೇವಾಲಯ, ಅಚ್ಯುತರಾಯ ದೇವಾಲಯ, ಉದ್ದಾನ ವೀರಭದ್ರೇಶ್ವರ ದೇವಾಲಯ, ಹಜಾರ ರಾಮ ದೇವಾಲಯ, ಕಮಲ ಮಹಲ್, ಆನೆಲಾಯ, ವಿಜಯ ವಿಠ್ಠಲ ದೇವಾಲಯ, ಕಲ್ಲಿನತೇರು, ಪುರಂದರ ದಾಸರ ಮಂಟಪ, ಪಟ್ಟಾಭಿರಾಮ ದೇವಾಲಯ, ಸೀತೆ ಸೆರಗು, ವಾಲಿ, ಸುಗ್ರೀವ ಗುಹೆ ಸೇರಿದಂತೆ ಹಲವು ಸ್ಮಾರಕಗಳನ್ನು ಪ್ರವಾಸಿಗರು ಕಣ್ತುಂಬಿಕೊಂಡರು. ಹೊಸ ವರ್ಷದ ಆಚರಣೆಗೆ ಪ್ರವಾಸಿಗರು ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಹರಿದು ಬಂದಿದ್ದರು.ಹೋಟೆಲ್, ರೆಸಾರ್ಟ್‌ಗಳು ಫುಲ್: ಹಂಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿರುವ ಹಿನ್ನೆಲೆಯಲ್ಲಿ ಹೋಟೆಲ್, ರೆಸಾರ್ಟ್‌ಗಳು ಫುಲ್ ಆಗಿದ್ದವು, ಪ್ರವಾಸಿಗರಿಗೆ ರೂಮ್‌ಗಳು ಸಿಗದೇ ಪರದಾಡುವ ಸ್ಥಿತಿ ನಿರ್ಮಾಣಗೊಂಡಿತ್ತು. ಗದಗ, ಕೊಪ್ಪಳ, ಬಳ್ಳಾರಿ ಮತ್ತು ತೋರಣಗಲ್, ಗಂಗಾವತಿಯ ಹೋಟೆಲ್‌ಗಳಲ್ಲೂ ಪ್ರವಾಸಿಗರು ವಾಸ್ತವ್ಯ ಹೂಡಿ ಹಂಪಿ ಸ್ಮಾರಕಗಳ ವೀಕ್ಷಣೆಗೆ ಬಂದಿದ್ದರು. ಹಂಪಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿದ್ದರಿಂದ ಹಂಪಿಯಲ್ಲಿ ಜನ ಜಾತ್ರೆ ಉಂಟಾಗಿತ್ತು. ಹಂಪಿ, ತುಂಗಭದ್ರಾ ಜಲಾಶಯಗಳ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರಿಂದ ವಿಜಯನಗರ ಎಸ್ಪಿ ಶ್ರೀಹರಿಬಾಬು ಅವರು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಿದ್ದರು. ತುಂಗಭದ್ರಾ ಜಲಾಶಯಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು.