ಹೊಸ ವರ್ಷಕ್ಕೆ ಬೇಕ್‌ಪಾಯಿಂಟ್‌ನಲ್ಲಿ ಕೇಕ್ ಜಾತ್ರೆ

| Published : Dec 31 2023, 01:30 AM IST

ಸಾರಾಂಶ

ನೂತನ ವಸಂತಾಗಮನದ ಸಂಭ್ರಮಾಚರಣೆಗೆ ಗ್ರಾಹಕರನ್ನು ಸೆಳೆಯಲು ಕೇಕ್ ಮೇಳವನ್ನು ಆಯೋಜಿಸಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಮಂಡ್ಯದ ಚಾಮುಂಡೇಶ್ವರಿ ನಗರದ ಬೇಕ್ ಪಾಯಿಂಟ್ ವತಿಯಿಂದ ಕೇಕ್ ಮೇಳ ಆಯೋಜಿಸಲಾಗಿದೆ.

ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್‌ರಿಂದ ಚಾಲನೆ । ವಸಂತಾಗಮನಕ್ಕೆ ವಿನೂತನ ಮಾದರಿ ಕೇಕ್‌ಗಳ ಆಕರ್ಷಣೆ

ಕನ್ನಡಪ್ರಭ ವಾರ್ತೆ ಮಂಡ್ಯ

ಹೊಸ ವರ್ಷಕ್ಕೆ ಮುನ್ನವೇ ವಿಭಿನ್ನ, ವಿನೂತನ ಮಾದರಿಯ ಕೇಕ್‌ಗಳು ರೂಪುಗೊಂಡು ಜನರನ್ನು ಆಕರ್ಷಿಸುತ್ತಿವೆ. ನೂತನ ವಸಂತಾಗಮನದ ಸಂಭ್ರಮಾಚರಣೆಗೆ ಗ್ರಾಹಕರನ್ನು ಸೆಳೆಯಲು ಕೇಕ್ ಮೇಳವನ್ನು ಆಯೋಜಿಸಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಮಂಡ್ಯದ ಚಾಮುಂಡೇಶ್ವರಿ ನಗರದ ಬೇಕ್ ಪಾಯಿಂಟ್ ವತಿಯಿಂದ ಕೇಕ್ ಮೇಳ ಆಯೋಜಿಸಲಾಗಿದೆ.

ಬೇಕ್ ಪಾಯಿಂಟ್‌ನ ೨೪ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ೧೬ನೇ ವರ್ಷದ ಬೃಹತ್ ಕೇಕ್ ಜಾತ್ರೆ ಉದ್ಘಾಟಿಸಿ ಮಾತನಾಡಿದ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್, ಸಂತಸದ ಕ್ಷಣಗಳನ್ನು ಸಂಭ್ರಮದಿಂದ ಕಳೆಯಲು ಕೇಕ್ ಪ್ರಧಾನ ಪಾತ್ರ ವಹಿಸುತ್ತಾ ಬಂದಿದೆ. ಹುಟ್ಟುಹಬ್ಬ, ಹೊಸ ವರ್ಷ, ಪ್ರೇಮಿಗಳ ದಿನ, ಮದುವೆ ವಾರ್ಷಿಕೋತ್ಸವ ಸೇರಿದಂತೆ ಹಲವು ಶುಭ ಸಮಾರಂಭಗಳಲ್ಲಿ ಕೇಕ್ ಇರಲೇಬೇಕು. ಎಲ್ಲ ವರ್ಗದ ಜನರು ಇಷ್ಟಪಡುವ ಅದರಲ್ಲೂ ಮಕ್ಕಳಿಗೆ ಅತೀ ಪ್ರಿಯವಾದ ತಿನಿಸಾಗಿದೆ. ಹೊಸ ವರ್ಷಾಚರಣೆಯಲ್ಲಂತೂ ಕೇಕ್‌ಗೆ ಮಹತ್ವದ ಸ್ಥಾನವಿರಲಿದೆ ಎಂದು ತಿಳಿಸಿದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಸಚ್ಚಿದಾನಂದ ಇಂಡವಾಳು, ವಿಭಿನ್ನ ಸ್ವರೂಪದ, ಅತ್ಯಾಕರ್ಷಣೀಯ ಕೇಕ್‌ಗಳು ಮಂಡ್ಯದ ಮೆರುಗನ್ನು ಹೆಚ್ಚಿಸಿವೆ. ಗುಣಮಟ್ಟದಿಂದ ತಯಾರುಗೊಂಡಿರುವ ಕೇಕ್‌ಗಳು ಜನರ ಮನಸೂರೆಗೊಂಡಿವೆ. ಇಂತಹ ಮೇಳಗಳು ವ್ಯಾಪಾರದ ದೃಷ್ಟಿಯಿಂದ ಮಾತ್ರವಲ್ಲದೆ ಗ್ರಾಹಕರನ್ನು ಸೆಳೆಯುವ ದೃಷ್ಟಿಯಿಂದಲೂ ಅಗತ್ಯವಾಗಿವೆ ಎಂದರು.

ವೈಶಿಷ್ಟ್ಯಪೂರ್ಣ ಕೇಕ್‌ಗಳು:

ಪ್ರತಿ ವರ್ಷವೂ ಭಿನ್ನ-ವಿಭಿನ್ನ ಹಾಗೂ ವೈಶಿಷ್ಟ್ಯಪೂರ್ಣ ಕೇಕ್ ಮಾದರಿಗಳೊಂದಿಗೆ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಈ ಬಾರಿಯ ಕೇಕ್ ಮೇಳದಲ್ಲಿ ಬಾರ್ಬಿಗೊಂಬೆ, ಮಿಕ್ಕಿ ಮೌಸ್, ನವಿಲು, ಕಾರ್ಟೂನ್‌ಗಳು, ಕಲ್ಲಂಗಡಿ ಹಣ್ಣಿನ ಮಾದರಿ ಸೇರಿದಂತೆ ನೂರಾರು ಕಲಾಕೃತಿಗಳು ಕೇಕ್‌ನೊಳಗೆ ಅರಳಿ ಜನರನ್ನು ಆಕರ್ಷಿಸುತ್ತಿವೆ. ಪೇಸ್ಟ್ರೀ, ಹನಿಕೇಕ್ ಮತ್ತು ಕ್ರೀಮ್ ಕೇಕ್‌ನ ಮಾದರಿಗಳು ಒಂದಕ್ಕಿಂತ ಒಂದು ಆಕರ್ಷಣೀಯವಾಗಿದ್ದು, ಜನರ ಮನಸ್ಸನ್ನು ಸೂರೆಗೊಳ್ಳುವಂತೆ ಮೈತಳೆದಿವೆ. ಚಾಕೋಲೇಟ್, ವೆನಿಲ್ಲಾ, ಪೈನಾಪಲ್, ಸ್ಟ್ರಾಬೆರಿ, ಆರೇಂಜ್, ಮ್ಯಾಂಗೋ, ಪಿಸ್ತಾ, ಬಟರ್ ಸ್ಕಾಚ್, ಬ್ಲಾಕ್ ಕರೆಂಟ್ ಸೇರಿದಂತೆ ವಿವಿಧ ರೀತಿಯ ಗ್ರಾಹಕರಿಗೆ ಇಷ್ಟವಾಗುವ ಸುವಾಸನೆಯುಳ್ಳ ಕೇಕ್‌ಗಳನ್ನು ಸಿದ್ಧಪಡಿಸಿ ಮೇಳದಲ್ಲಿ ಇಡಲಾಗಿದೆ. ದೊಡ್ಡವರಿಂದ ಹಿಡಿದು ಪುಟ್ಟ ಮಕ್ಕಳಿಗೂ ಇಷ್ಟವಾಗುವ ಕೇಕ್‌ಗಳು ಮಕ್ಕಳನ್ನು ಆಕರ್ಷಿಸುತ್ತಿದ್ದವು.

ನೂತನ ಹೊಸವರ್ಷವನ್ನು ಬರಮಾಡಿಕೊಳ್ಳುವ ಹಿನ್ನಲೆಯಲ್ಲಿ ಹಾಗೂ ರಿಯಾಯಿತಿ ದರದಲ್ಲಿ ಕೇಕ್‌ಗಳು ಸಿಗುತ್ತಿದ್ದರಿಂದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕೇಕ್‌ಗಳನ್ನು ನೋಡಿ ಖುಷಿಪಟ್ಟರಲ್ಲದೆ, ಕೆಲವರು ತಮಗೆ ಇಷ್ಟವಾದ ಕೇಕ್‌ಗಳನ್ನು ಬುಕ್ಕಿಂಗ್ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು.

ಸ್ಥಳಕ್ಕೆ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್‌ಗೌಡ ಭೇಟಿ ನೀಡಿ ವಿವಿಧ ಕೇಕ್‌ಗಳನ್ನು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಯುವ ಮುಖಂಡರಾದ ಬೇವಿನಹಳ್ಳಿ ಮಹೇಶ್, ಸೂರ್ಯಗೌಡ, ಕೇಶವ್, ಲೋಕೇಶ್, ಚಂದ್ರಕಲಾ ಮತ್ತಿತರರಿದ್ದರು.

---------------------

ಕೋಟ್..

ಬೆಂಗಳೂರು, ಮೈಸೂರಿನಂತಹ ದೊಡ್ಡ ನಗರಗಳಲ್ಲಿ ಆಯೋಜನೆಯಾಗುತ್ತಿದ್ದ ಕೇಕ್ ಮೇಳಗಳು ಇತ್ತೀಚಿನ ವರ್ಷಗಳಲ್ಲಿ ಮಂಡ್ಯದಲ್ಲೂ ನಡೆಯುತ್ತಿದೆ. ಬ್ರೆಡ್, ಕ್ರೀಮ್, ಹಣ್ಣುಗಳು, ಚಾಕೋಲೇಟ್ ಚಿಪ್ಸ್, ಅಲಂಕಾರಿಕ ಸಿಹಿ ಸಿನಿಸುಗಳನ್ನು ಬಳಸಿ, ತಯಾರಿಸಿದ ಅತ್ಯಾಕರ್ಷಕ ಕೇಕ್ಗಳನ್ನು ಪ್ರದರ್ಶನಕ್ಕಿಡಲಾಗಿದೆ. ಕೇಕ್ ಜಾತ್ರೆಯಲ್ಲಿ ಒಂದಕ್ಕೊಂದು ವಿಭಿನ್ನವಾಗಿರುವ ಕೇಕ್‌ಗಳು ಜನರ ಗಮನಸೆಳೆಯುತ್ತಿವೆ. ೧ರಿಂದ ೫ ಕಿಲೋ ತೂಕದ ಕೇಕ್‌ಗಳನ್ನು ಪ್ರದರ್ಶನಕ್ಕಿಡಲಾಗಿದೆ.

-ಎಚ್.ಆರ್.ಅರವಿಂದ್, ಮಾಲೀಕರು, ಬೇಕ್‌ಪಾಯಿಂಟ್

---

ಮಂಡ್ಯದ ಚಾಮುಂಡೇಶ್ವರಿ ನಗರದ ಬೇಕ್ ಪಾಯಿಂಟ್‌ನಲ್ಲಿ ಆಯೋಜಿಸಿದ್ದ ಕೇಕ್ ಜಾತ್ರೆಯಲ್ಲಿ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್, ಬಿಜೆಪಿ ಮುಖಂಡ ಸಚ್ಚಿದಾನಂದ, ಬೇವಿನಹಳ್ಳಿ ಮಹೇಶ್ , ಎಚ್.ಆರ್.ಅರವಿಂದ್ ಪಾಲ್ಗೊಂಡಿದ್ದರು.