ಕ್ರೀಡಾಪಟುಗಳಿಗೆ ಹೊಸ ವರ್ಷ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮುಕ್ತ

| Published : Dec 30 2024, 01:03 AM IST

ಕ್ರೀಡಾಪಟುಗಳಿಗೆ ಹೊಸ ವರ್ಷ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮುಕ್ತ
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ಸ್ಥಾಪಿಸುವ ಕನಸಿನೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಂಕೀರ್ಣ ನಿರ್ಮಾಣಕ್ಕೆ 2018ರಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು. ಸ್ಥಳೀಯ ಕ್ರೀಡಾಪಟುಗಳು, ತರಬೇತುದಾರರೊಂದಿಗೆ ಸಮಾಲೋಚನೆ ನಡೆಸಿ ಆಯಾ ಕ್ರೀಡೆಗಳಿಗೆ ತಕ್ಕಂತೆ ಸಂಕೀರ್ಣದ ವಿನ್ಯಾಸ ರೂಪಿಸಲಾಗಿದೆ.

ವಿಶೇಷ ವರದಿ ಧಾರವಾಡ:ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಲ್ಲಿಯ ಕೋರ್ಟ್​ ವೃತ್ತದ ಬಳಿ ನಿರ್ಮಿಸುತ್ತಿರುವ ಈಜುಕೊಳ ಸೇರಿದಂತೆ ಸುಸಜ್ಜಿತ ಕ್ರೀಡಾ ಸಂಕೀರ್ಣ (ಸ್ಪೋರ್ಟ್ಸ್​ ಕಾಂಪ್ಲೆಕ್ಸ್​) ಉದ್ಘಾಟನೆಗೆ ಸಜ್ಜಾಗುತ್ತಿದ್ದು, ಹೊಸ ವರ್ಷದ ಶುರುವಾತು ದಿನಗಳಲ್ಲಿ ಮುಕ್ತವಾಗಲಿದೆ.

ಬರೀ ಈಜುಕೊಳ ಹಾಗೂ ಕೆಲವು ಒಳಾಂಗಣ ಕ್ರೀಡಾಂಗಣದ ವಿನ್ಯಾಸದಲ್ಲಿ 2018ರಲ್ಲಿ ಶುರುವಾದ ಈ ಯೋಜನೆ ನಂತರ ವಿಸ್ಕೃತ ರೂಪ ಪಡೆದು ಅನುದಾನ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿತು. ಆದರೆ, ಸಾರ್ವಜನಿಕರ ಒತ್ತಡದಿಂದ ಕೊನೆಗೆ ಎನ್​ಎಂಡಿಸಿ ಮತ್ತು ಒಎನ್​ಜಿಸಿ ಕಂಪನಿಗಳ ಕಾರ್ಪೊರೇಟ್​ ಸೋಷಿಯಲ್​ ರೆಸ್ಪಾನ್ಸಿಬಿಲಿಟಿ ಫಂಡ್‌ (ಸಿಎಸ್​ಆರ್​) ಮೂಲಕ ₹ 35 ಕೋಟಿ ವೆಚ್ಚದಲ್ಲಿ 1.6 ಎಕರೆ ವಿಶಾಲವಾದ ಜಾಗದಲ್ಲಿ ಸಂಕೀರ್ಣ ನಿರ್ಮಿಸಲಾಗುತ್ತಿದೆ.

ದೆಹಲಿಯ ಐಐಟಿ ಹಾಗೂ ಪ್ರತಿಷ್ಠಿತ ಸ್ಕೂಲ್​ ಆಫ್​ ಪ್ಲಾನಿಂಗ್​ ಆ್ಯಂಡ್‌ ಆರ್ಕಿಟೆಕ್ಟ್‌ನ ತಾಂತ್ರಿಕ ಸಲಹೆ ಈ ಯೋಜನೆಗೆ ಇರುವುದು ವಿಶೇಷ. ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ಸ್ಥಾಪಿಸುವ ಕನಸಿನೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಂಕೀರ್ಣ ನಿರ್ಮಾಣಕ್ಕೆ 2018ರಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು. ಸ್ಥಳೀಯ ಕ್ರೀಡಾಪಟುಗಳು, ತರಬೇತುದಾರರೊಂದಿಗೆ ಸಮಾಲೋಚನೆ ನಡೆಸಿ ಆಯಾ ಕ್ರೀಡೆಗಳಿಗೆ ತಕ್ಕಂತೆ ಸಂಕೀರ್ಣದ ವಿನ್ಯಾಸ ರೂಪಿಸಲಾಗಿದೆ. ಸಂಕೀರ್ಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ​, ಒಳಾಂಗಣ ಕ್ರೀಡೆಗಳಿಗೆ ವಿಶಾಲ ಜಾಗ ಸೇರಿ ಸಕಲ ಸೌಲಭ್ಯ ಕಲ್ಪಿಸಲಾಗಿದೆ. ಬಹುತೇಕ ಕಟ್ಟಡ ಸಂಪೂರ್ಣ ಹೊಸ ತಂತ್ರಜ್ಞಾನದೊಂದಿಗೆ ಸ್ಟೀಲ್​ ರಚನೆ (ಸ್ಟ್ರಕ್ಚರ್​) ಯೊಂದಿಗೆ ನಿರ್ಮಾಣವಾಗಿದೆ. ಕ್ರೀಡೆಗಳನ್ನು ಮೀಸಲು ಸುಸಜ್ಜಿತ ಗ್ಯಾಲರಿ, ಕ್ರೀಡಾಪಟುಗಳಿಗೆ ಪ್ರತ್ಯೇಕ ಕೊಠಡಿ ಸೇರಿ ಅನೇಕ ಸೌಲಭ್ಯ ಕಲ್ಪಿಸಲಾಗಿದೆ.

ಸಂಕೀರ್ಣಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದವು. ಹಳೇ ಕಟ್ಟಡ ನೆಲಸಮಗೊಳಿಸಿ ಕಾಮಗಾರಿ ಆರಂಭಿಸುವ ಹಂತದಲ್ಲಿ ಕೋವಿಡ್‌ನಿಂದ ಕೆಲಕಾಲ ಸ್ಥಗಿತವಾಗಿತ್ತು. ನಂತರ ಕಾಮಗಾರಿ ಆರಂಭವಾದಾಗ ಅನುದಾನ ಕೊರತೆ ಸೇರಿ ಇನ್ನೂ ಅನೇಕ ಅಡೆತಡೆಗಳು ಕಾಮಗಾರಿ ವಿಳಂಬಕ್ಕೆ ಕಾರಣವಾಗಿವೆ. ಹಂತ-ಹಂತವಾಗಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ ಬಳಿಕ ಬರೋಬ್ಬರಿ 6 ವರ್ಷಕ್ಕೆ ಸಿದ್ಧವಾದ ಸುಸಜ್ಜಿತ ಸಂಕೀರ್ಣ ಕೆಲವೇ ದಿನಗಳಲ್ಲಿ ಉದ್ಘಾಟನೆಗೊಳ್ಳುವುದು ಕ್ರೀಡಾಪಟುಗಳಲ್ಲಿ ಸಂತಸ ಮೂಡಿಸಿದೆ.

ಕ್ರೀಡಾ ಸಂಕೀರ್ಣದಲ್ಲಿನ ಸೌಲಭ್ಯ

ಹೆಸರಿಗೆ ತಕ್ಕಂತೆ ಬಹು ಉಪಯೋಗಿ ಕ್ರೀಡಾ ಸಂಕೀರ್ಣ ಇದಾಗಿದೆ. ಜಿ+3 ಮಹಡಿಗಳಲ್ಲಿ ಸಂಕೀರ್ಣ ನಿರ್ಮಾಣವಾಗಲಿದೆ. ನೆಲಮಹಡಿಯಲ್ಲಿ ಕಾರ್​, ಬೈಕ್​ಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ​ ವ್ಯವಸ್ಥೆ ಇದ್ದರೆ, ಉಳಿದ ಕಡೆ ಕ್ಯಾಂಟೀನ್​, ಕ್ರೀಡಾ ಸಾಮಗ್ರಿಗಳ ಮಳಿಗೆ, ವೀಕ್ಷಕರ ಗ್ಯಾಲರಿ, ಮಕ್ಕಳು ಹಾಗೂ ವಯಸ್ಕರಿಗೆ ಪ್ರತ್ಯೇಕ ಈಜುಕೊಳ, ಕಬಡ್ಡಿ ಅಂಕಣ, ಬ್ಯಾಡ್ಮಿಂಟನ್​​, ಜುಡೋ, ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಜಿಮ್​, ತರಬೇತುದಾರರು, ವೈದ್ಯರಿಗೆ ಕೊಠಡಿ ಸೇರಿ ಇನ್ನೂ ಅನೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಇದೇ ಕಾರಣಕ್ಕೆ ನಗರದ ಬಹುತೇಕ ಕ್ರೀಡಾಪಟುಗಳು ಈ ಸಂಕೀರ್ಣ ಉದ್ಘಾಟನೆಗೆ ಕಾದು ಕುಳಿತಿದ್ದಾರೆ.

ಹಲವು ಅಡೆತಡೆ ಎದುರಿಸಿ ಈಗ ಕ್ರೀಡಾಪಟುಗಳ ಅನುಕೂಲಕ್ಕೆ ತಕ್ಕಂತೆ ನಿರ್ಮಿಸುತ್ತಿರುವ ಕ್ರೀಡಾ ಸಂಕೀರ್ಣದ ಕಾಮಗಾರಿ ಬಹುತೇಕ ಸಂಪೂರ್ಣವಾಗಿದೆ. ಇನ್ನು ಕೆಲವೇ ತಿಂಗಳಲ್ಲೇ ಉದ್ಘಾಟನೆಯಾಗಲಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.