ರಾಜ್ಯಾದ್ಯಂತ ಜನ 2026ರ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದು, ಎಲ್ಲೆಡೆ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯಾದ್ಯಂತ ಜನ 2026ರ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದು, ಎಲ್ಲೆಡೆ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.ಬುಧವಾರ ಮಧ್ಯರಾತ್ರಿ ಗಡಿಯಾರದ ಮುಳ್ಳು 12ನ್ನು ದಾಟುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಜನ, ಪರಸ್ಪರ ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡರು. ಹಳೆ ವರ್ಷವನ್ನು ಭರ್ಜರಿಯಾಗಿ ಬೀಳ್ಕೊಟ್ಟು, ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದ ಕರುನಾಡ ಜನತೆ, ರಾತ್ರಿ ಹೊಸ ಪ್ರಪಂಚದಲ್ಲೇ ತೇಲಾಡಿದರು. ಎಲ್ಲೆಡೆ ‘ಹ್ಯಾಪಿ ನ್ಯೂ ಈಯರ್’ ಘೋಷಣೆಗಳು ಮುಗಿಲು ಮುಟ್ಟಿದ್ದವು.
ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ ಸೇರಿ ರಾಜ್ಯದ ನಗರ ಪ್ರದೇಶಗಳಲ್ಲಿ ಯುವಕ-ಯುವತಿಯರು ಪಬ್ಗಳಲ್ಲಿ ಸುಮಧುರ ಸಂಗೀತದೊಂದಿಗೆ ಕುಣಿದು ಕುಪ್ಪಳಿಸಿದರು. ಕೇಕ್ ಕತ್ತರಿಸಿ ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಿದರು. ಮಧ್ಯರಾತ್ರಿಯಾಗುತ್ತಿದ್ದಂತೆ ಯುವಕರು ದ್ವಿಚಕ್ರ ವಾಹನಗಳಲ್ಲಿ ಸಂಚರಿಸಿ 2025ಕ್ಕೆ ವಿದಾಯ ಹೇಳಿ 2026 ಹೊಸ ವರ್ಷವನ್ನು ಪಟಾಕಿ ಸಿಡಿಸಿ ಘೋಷಣೆ ಕೂಗುವ ಮೂಲಕ ಸಂಭ್ರಮಿಸಿದರು. ಹೊಸ ವರ್ಷದ ಹಿನ್ನೆಲೆಯಲ್ಲಿ ನಗರದ ಮುಖ್ಯರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.ಕೊಡಗು ಜಿಲ್ಲೆಯಾದ್ಯಂತ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಜಿಲ್ಲೆಯ ಹೋಂಸ್ಟೇ, ರೆಸಾರ್ಟ್ ಹಾಗೂ ಹೋಟೆಲ್ ಗಳು ಬಹುತೇಕ ಭರ್ತಿಯಾಗಿದ್ದವು. ರೆಸಾರ್ಟ್ ಹಾಗೂ ಹೋಂಸ್ಟೇಗಳಲ್ಲಿ ಫೈಯರ್ ಕ್ಯಾಂಪ್, ಸಂಗೀತ, ನೃತ್ಯ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಪ್ರವಾಸಿಗರ ಆಗಮನದಿಂದಾಗಿ ಹೆಚ್ಚಿನ ಟ್ರಾಫಿಕ್ ಜಾಮ್ ಉಂಟಾಯಿತು. ಮಡಿಕೇರಿಯ ಪ್ರವಾಸಿತಾಣ ರಾಜಾಸೀಟ್‌ನಲ್ಲಿ 2025ರ ವರ್ಷದ ಕೊನೆಯ ಸೂರ್ಯಾಸ್ತವನ್ನು ಪ್ರವಾಸಿಗರು ಕಣ್ತುಂಬಿಕೊಂಡರು. ಉಳಿದಂತೆ ಅಬ್ಬಿಜಲಪಾತ, ದುಬಾರೆ, ನಿಸರ್ಗಧಾಮ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರಿದ್ದರು. ವರ್ಷಾಚರಣೆಯ ಹಿನ್ನೆಲೆಯಲ್ಲಿ ಚಿಕನ್, ಪೋರ್ಕ್, ಮಟನ್‌ಗೆ ಭಾರಿ ಬೇಡಿಕೆ ಕಂಡು ಬಂತು. ಮದ್ಯ ಕೂಡ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಯಿತು.ಮೈಸೂರು ಅರಮನೆಯಲ್ಲಿ ರಾತ್ರಿ 11 ಗಂಟೆಗೆ ಪೊಲೀಸ್ ಬ್ಯಾಂಡ್ ಏರ್ಪಡಿಸಲಾಗಿತ್ತು. ಇಂಗ್ಲಿಷ್ ಹಾಗೂ ಕರ್ನಾಟಕ ಬ್ಯಾಂಡ್ ಎರಡನ್ನೂ ನುಡಿಸಲಾಯಿತು. ರಾತ್ರಿ 11 ಗಂಟೆಯಿಂದಲೇ ಅರಮನೆಗೆ ದೀಪಾಲಂಕಾರ ಮಾಡಲಾಗಿತ್ತು. ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಆಗಸದೆಡೆಗೆ ಚಿಮ್ಮಿದ ಬಾಣ ಬಿರುಸುಗಳ ಪ್ರದರ್ಶನ ಕಣ್ಣು ಕುಕ್ಕುವಂತಿತ್ತು. ಕುಂದಾನಗರಿ ಬೆಳಗಾವಿ ಜಿಲ್ಲೆಯ ಕ್ಯಾಂಪ್‌ಗಳಲ್ಲಿ ಮಧ್ಯರಾತ್ರಿ ತರಹೇವಾರಿ ಓಲ್ಡ್‌ಮ್ಯಾನ್ ಕಲಾಕೃತಿಗಳನ್ನು ದಹಿಸಿ, ಹೊಸ ವರ್ಷವನ್ನು ಸ್ವಾಗತಿಸಲಾಯಿತು.
ಬೀಚ್‌ಗಳು ಫುಲ್ ರಶ್:ಹೊಸ ವರ್ಷದ ಹಿನ್ನೆಲೆಯುಲ್ಲಿ ಕರಾವಳಿಯ ಬೀಚ್‌ಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದವು. ಬುಧವಾರ ಬೆಳಗಿನಿಂದಲೇ ಮಂಗಳೂರಿನ ಸೋಮೇಶ್ವರ, ತಣ್ಣೀರುಬಾವಿ, ಪಣಂಬೂರು, ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಗೋಕರ್ಣದ ಓಂಬೀಚ್, ಹೊನ್ನಾವರದ ಕಡಲತೀರಗಳಿಗೆ ಪ್ರವಾಸಿಗರ ದಂಡು ದಾಂಗುಡಿ ಇಟ್ಟಿತ್ತು. ಪ್ರವಾಸಿಗರ ರಕ್ಷಣೆಗೆ ಸಮುದ್ರ ತೀರಗಳಲ್ಲಿ ಹೆಚ್ಚುವರಿ ಲೈಫ್ ಗಾರ್ಡ್‌ಗಳನ್ನು ನಿಯೋಜನೆ ಮಾಡಲಾಗಿತ್ತು.
ಬೀಚ್‌ಗಳಲ್ಲಿ ಅದ್ದೂರಿ ನೈಟ್ ಪಾರ್ಟಿ ಆಯೋಜಿಸಿದ್ದು, ಮ್ಯಾಜಿಕ್ ಶೋ, ಭರ್ಜರಿ ಫೈರ್ ವರ್ಕ್ಸ್, ಲೈವ್ ಬ್ಯಾಂಡ್, ಡಿಜೆ, ಡ್ಯಾನ್ಸ್ ಶೋ, ಮ್ಯೂಸಿಕಲ್ ನೈಟ್‌ನ ಹಬ್ಬವನ್ನು ಪ್ರವಾಸಿಗರಿಗೆ ಉಣಬಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರವಾಸಿಗರಿಗೆ ಕುಟುಂಬ ಸಮೇತ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು.ಇದೇ ವೇಳೆ, ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಮಣ್ಯ ಸೇರಿ ರಾಜ್ಯದ ಹಲವು ದೇವಸ್ಥಾನಗಳಲ್ಲಿ ಭಕ್ತರು ವಿಶೇಷ ರೀತಿಯಲ್ಲಿ ಪುಷ್ಪಾಲಂಕಾರ ಸೇವೆ ಸಲ್ಲಿಸಿದರು.