ಹೊಸದಾಗಿ 51 ಇಂದಿರಾಕ್ಯಾಂಟೀನ್‌ ನಿರ್ಮಾಣ

| Published : Sep 14 2024, 01:46 AM IST

ಸಾರಾಂಶ

ನಗರದಲ್ಲಿ ಹೊಸದಾಗಿ 51 ಇಂದಿರಾ ಕ್ಯಾಂಟೀನ್‌ಗಳ ನಿರ್ಮಾಣಕ್ಕೆ ಜಾಗ ಗುರುತಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಹೊಸದಾಗಿ 51 ಇಂದಿರಾ ಕ್ಯಾಂಟೀನ್‌ಗಳ ನಿರ್ಮಾಣಕ್ಕೆ ಸರ್ಕಾರ ಅನುಮತಿಸಿದ್ದು, ಕ್ಯಾಂಟೀನ್‌ಗಳಿಲ್ಲದ ವಾರ್ಡ್‌ಗಳಲ್ಲಿ ಅಗತ್ಯವಿರುವ ಜಾಗ ಗುರುತಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ 225 ವಾರ್ಡ್‌ಗಳಲ್ಲಿ ಇನ್ನೂ 40ಕ್ಕೂ ಹೆಚ್ಚಿನ ವಾರ್ಡ್‌ಗಳಲ್ಲಿ ಕ್ಯಾಂಟೀನ್‌ಗಳು ನಿರ್ಮಾಣವಾಗಬೇಕಿದೆ. ಆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2 ಕ್ಯಾಂಟೀನ್‌ಗಳ ನಿರ್ಮಾಣ ಸೇರಿದಂತೆ ಒಟ್ಟು 51 ಕ್ಯಾಂಟೀನ್‌ಗಳ ನಿರ್ಮಾಣಕ್ಕೆ ಅನುಮತಿಸಿದೆ. ಅದರಂತೆ ಈಗಾಗಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಂಟೀನ್‌ ನಿರ್ಮಿಸಲಾಗಿದ್ದು, ಉಳಿದಂತೆ ವಾರ್ಡ್‌ಗಳಲ್ಲಿ ಕ್ಯಾಂಟೀನ್‌ಗಳನ್ನು ನಿರ್ಮಿಸಬೇಕಿದೆ. ಅದಕ್ಕಾಗಿ ಯಾವೆಲ್ಲ ವಾರ್ಡ್‌ಗಳಲ್ಲಿ ಕ್ಯಾಂಟೀನ್‌ಗಳಿಲ್ಲ ಎಂಬುದನ್ನು ಗುರುತಿಸಿ ಅಲ್ಲಿ ಕ್ಯಾಂಟೀನ್‌ ನಿರ್ಮಾಣಕ್ಕೆ ಜಾಗ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಸದ್ಯ 21 ವಾರ್ಡ್‌ಗಳಲ್ಲಿ ಜಾಗ ಗುರುತಿಸಲಾಗಿದೆ. ಅವುಗಳಲ್ಲಿ ಕ್ಯಾಂಟೀನ್‌ ನಿರ್ಮಾಣ ಸಾಧ್ಯತೆ ಕುರಿತಂತೆ ಪರಿಶೀಲಿಸಲಾಗುತ್ತಿದೆ. ಉಳಿದ ವಾರ್ಡ್‌ಗಳಲ್ಲೂ ಜಾಗ ಗುರುತಿಸುವಂತೆ ಹೇಳಲಾಗಿದೆ. ಒಮ್ಮೆ ಜಾಗ ಗುರುತಿಸಿದ ನಂತರ ಕ್ಯಾಂಟೀನ್‌ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗುವುದು. ಅದರಂತೆ ಈಗಾಗಲೇ ಜಾಗ ಗುರುತಿಸಿರುವಲ್ಲಿ ಕ್ಯಾಂಟೀನ್‌ ನಿರ್ಮಾಣಕ್ಕೆ ಮುಂದಿನ ತಿಂಗಳು ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.