ಬೈಕ್‌ನ ಹಿಂಬದಿ ಸವಾರ ಪ್ರವರ್ಧನ ಅವರಿಗೆ ಗಾಯಗಳಾಗಿದ್ದು, ಅವರನ್ನು ಚೇಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಹೆಲ್ಮೆಟ್ ಧರಿಸದೆ ಚಾಲನೆ । ಮೂಗಿರೆಡ್ಡಿಪಲ್ಲಿ ಕ್ರಾಸ್ ಬಳಿ ಘಟನೆ

ಕನ್ನಡಪ್ರಭ ವಾರ್ತೆ ಚೇಳೂರುತಾಲೂಕಿನ ನಲ್ಲಗುಟ್ಲಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮೂಗಿರೆಡ್ಡಿಪಲ್ಲಿ ಕ್ರಾಸ್ ಬಳಿ ಭಾನುವಾರ ಸಂಜೆ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.ಆಂಧ್ರಪ್ರದೇಶದ ಪುಲಿಕಲ್ಲು ಗ್ರಾಮದ ಅಭಿಷೇಕ್ (23) ಮೃತಪಟ್ಟ ದುರ್ದೈವಿ. ಬೈಕ್‌ನ ಹಿಂಬದಿ ಸವಾರ ಪ್ರವರ್ಧನ ಅವರಿಗೆ ಗಾಯಗಳಾಗಿದ್ದು, ಅವರನ್ನು ಚೇಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.ಘಟನೆಯ ವಿವರ: ಅಭಿಷೇಕ್ ಹಾಗೂ ಪ್ರವರ್ಧನ ಅವರು ಚೇಳೂರಿನ ಕಡೆಯಿಂದ ತಮ್ಮ ತಾಯಿಯ ತವರೂರಾದ ರಾಮಾನುಪಡಿ ಗ್ರಾಮಕ್ಕೆ ದೇವರ ಪೂಜೆಗಾಗಿ ಬೈಕ್‌ನಲ್ಲಿ ತೆರಳುತ್ತಿದ್ದರು. ಮೂಗಿರೆಡ್ಡಿಪಲ್ಲಿ ಕ್ರಾಸ್ ಬಳಿ ಎದುರಿನಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ.ಅಪಘಾತದ ತೀವ್ರತೆಗೆ ತಲೆಗೆ ಗಂಭೀರ ಗಾಯಗೊಂಡ ಅಭಿಷೇಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸವಾರ ಹೆಲ್ಮೆಟ್ ಧರಿಸಿರದ ಕಾರಣ ತಲೆಗೆ ನೇರವಾಗಿ ಪೆಟ್ಟುಬಿದ್ದಿರುವುದು ಸಾವಿಗೆ ಪ್ರಮುಖ ಕಾರಣ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.ಮೃತ ಅಭಿಷೇಕ್ ಅವರಿಗೆ ಕೇವಲ ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಹೊಸ ಜೀವನದ ಕನಸು ಕಾಣುತ್ತಿದ್ದ ಯುವಕನ ಅಕಾಲಿಕ ಮರಣದಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಪುಲಿಕಲ್ಲು ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.ಘಟನಾ ಸ್ಥಳಕ್ಕೆ ಚೇಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.