ಸಾರಾಂಶ
ಮೈಸೂರು : ವೋಟ್ ಬ್ಯಾಂಕಿಗಾಗಿ ಕಾಂಗ್ರೆಸ್ ದಲಿತರನ್ನು ಬಳಸಿಕೊಂಡು ವಂಚಿಸುತ್ತಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾದ ನಗರಾಧ್ಯಕ್ಷ ವಿ. ಶೈಲೇಂದ್ರ ದೂರಿದರು.
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರಿಗೆ ಕಾಂಗ್ರೆಸ್ ಈವರೆಗೂ ಮುಖ್ಯಮಂತ್ರಿ ಸ್ಥಾನ ನೀಡದೆ ವಂಚಿಸಿದೆ. ಕಾಂಗ್ರೆಸ್ ನಿಜವಾದ ದಲಿತ ವಿರೋಧಿ. ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಅವಮಾನಿಸಿದೆ. ಅವರ ನಿಧನರಾದಾಗ ಅಂತ್ಯಕ್ರಿಯೆಗೂ ಜಾಗ ನೀಡಲಿಲ್ಲ. ಸಾಮಾನ್ಯವಾಗಿ ಕೆಪಿಸಿಸಿ ಅಧ್ಯಕ್ಷರಾದವರು ಕಾಂಗ್ರೆಸ್ ಅಧಿಕಾರಕ್ಕೆ ತಂದ ಕೂಡಲೇ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ ವಾಡಿಕೆ ಇದೆ. ಆದರೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿ. ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಮುಂತಾದ ದಲಿತ ನಾಯಕರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡದೆ ಮೋಸ ಮಾಡಿದೆ ಎಂದು ಅವರು ಕಿಡಿಕಾರಿದರು.
ಮುಖ್ಯಮಂತ್ರಿಗಳು ಅಧಿಕಾರದ ಆಸೆಗೆ ದಲಿತರಿಗೆ ಸಿಗಬೇಕಾದ ನ್ಯಾಯ ನೀಡುತ್ತಿಲ್ಲ. ದಲಿತರನ್ನು ಸಿದ್ದರಾಮಯ್ಯ ತುಳಿಯುತ್ತಲೇ ಬಂದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಿತೂರಿ ಮಾಡಿ ಕೇಂದ್ರ ರಾಜಕೀಯಕ್ಕೆ ಕಳುಹಿಸಿದರು. ವಿ. ಶ್ರೀನಿವಾಸಪ್ರಸಾದ್ ಅವರನ್ನು ಏಕಾಏಕಿ ಸಚಿವ ಸ್ಥಾನದಿಂದ ತೆಗೆದು, ಪಕ್ಷ ಬಿಡುವಂತೆ ಮಾಡಿದರು. ಬೆಂಗಳೂರಿನ ಡಿಜೆ, ಕೆಜಿ ಹಳ್ಳಿಯಲ್ಲಿ ದಲಿತ ಶಾಸಕರ ಮನೆಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರದ ಆರೋಪಿಗಳ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ದೂರಿದರು.
ಈಗ ಬೆಳಗಾವಿಯಲ್ಲಿ ದಲಿತ ಮಹಿಳೆ ಮೇಲೆ ದೌರ್ಜನ್ಯ ನಡೆಸಿದವರ ವಿರುದ್ಧವೂ ಯಾವುದೇ ಕ್ರಮ ಕೈಗೊಂಡಿಲ್ಲ. ಎಸ್ಸಿ, ಎಸ್ಟಿಗಳ ಅಭಿವೃದ್ಧಿಗೆಂದು ಮೀಸಲಾಗಿದ್ದ 11 ಸಾವಿರ ಕೋಟಿ ರೂ ಅನುದಾನವನ್ನು ಇದೀಗ ಗ್ಯಾರಂಟಿ ಯೋಜನೆಗೆ ವೆಚ್ಚ ಮಾಡುತ್ತಿದ್ದಾರೆ. ಇದನ್ನು ನೋಡಿದರೆ ನಿಜವಾದ ದಲಿತ ವಿರೋಧಿ ಸಿಎಂ ಸಿದ್ದರಾಮಯ್ಯನೇ ಹೊರತು ಬಿಜೆಪಿ ಅಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರ ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಮರಿಯಪ್ಪ, ಸ್ವಾಮಿ, ನಗರ ಪಾಲಿಕೆ ಮಾಜಿ ಸದಸ್ಯ ಕೃಷ್ಣ, ಮುರಳೀಧರ, ಜಿಲ್ಲಾ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಇದ್ದ ಇದ್ದರು.