ಪತ್ರಿಕಾ ವಿತರಣೆ ಶ್ರೇಷ್ಠ ಕಾರ್ಯ, ಸೇವೆ ಶ್ಲಾಘನೀಯ: ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌

| Published : Nov 29 2024, 01:03 AM IST

ಪತ್ರಿಕಾ ವಿತರಣೆ ಶ್ರೇಷ್ಠ ಕಾರ್ಯ, ಸೇವೆ ಶ್ಲಾಘನೀಯ: ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಜಿಲ್ಲಾ ದಿನಪತ್ರಿಕೆಗಳ ಹಂಚಿಕೆದಾರರ ಸಂಘದ ಆಶ್ರಯದಲ್ಲಿ ಗುರುವಾರ ತುಮಕೂರು ನಗರದ ಜಿಲ್ಲಾ ಗ್ರಂಥಾಲಯ ಸಭಾಂಗಣದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಹಾಗೂ ವಿವಿಧ ಪ್ರಶಸ್ತಿ ಪುರಸ್ಕೃತ ಹಾಗೂ ಹಿರಿಯ ಪತ್ರಿಕಾ ವಿತರಕರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ತುಮಕೂರುರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಜಿಲ್ಲಾ ದಿನಪತ್ರಿಕೆಗಳ ಹಂಚಿಕೆದಾರರ ಸಂಘದ ಆಶ್ರಯದಲ್ಲಿ ಗುರುವಾರ ನಗರದ ಜಿಲ್ಲಾ ಗ್ರಂಥಾಲಯ ಸಭಾಂಗಣದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಹಾಗೂ ವಿವಿಧ ಪ್ರಶಸ್ತಿ ಪುರಸ್ಕೃತ ಹಾಗೂ ಹಿರಿಯ ಪತ್ರಿಕಾ ವಿತರಕರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಸಮಾರಂಭದಲ್ಲಿ ಮಾತನಾಡಿ, ಪತ್ರಿಕಾ ವಿತರಕರು ಸಂಘಟಿತರಾಗಿ ಅಗತ್ಯ ಸವಲತ್ತುಗಳನ್ನು ಪಡೆಯಬೇಕು. ನಾನು ಕಾಲೇಜು ದಿನಗಳಲ್ಲಿ ಪತ್ರಿಕೆ ವಿತರಕನಾಗಿ ಕೆಲಸ ಮಾಡಿದ್ದೆ, ವಿತರಕರ ಕಷ್ಟದ ಅರಿವಿದೆ. ಪತ್ರಿಕಾ ವಿತರಕರಿಗೂ ರಾಜ್ಯೋತ್ಸವ ಪ್ರಶಸ್ತಿ ನೀಡಿ ಅವರ ಸೇವೆಯನ್ನು ಗುರುತಿಸಿ ಗೌರವಿಸಬೇಕು ಎಂದು ತಾವು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆ. ಮುಖ್ಯಮಂತ್ರಿಗಳು ಸ್ಪಂದಿಸಿ ಈ ಬಾರಿಯಿಂದ ವಿತರಕರಿಗೂ ರಾಜ್ಯೋತ್ಸವ ಪ್ರಶಸ್ತಿ ನೀಡಲು ಸಮ್ಮತಿ ನೀಡಿದರು ಎಂದು ಹೇಳಿದರು.ನಿತ್ಯ ಬೆಳಗ್ಗೆ ಪತ್ರಿಕೆ ವಿತರಿಸುವ ಒತ್ತಡದಲ್ಲಿರುವ ವಿತರಕರು ಅಪಘಾತಕ್ಕೀಡಾದರೆ ಅಂತಹವರಿಗೆ ಸರ್ಕಾರದಿಂದ ನೆರವು ದೊರೆಯಬೇಕು ಎಂದು ಕಾರ್ಮಿಕ ಇಲಾಖೆಯಿಂದ ಪತ್ರಿಕಾ ವಿತರಕರಿಗೆ ಅಪಘಾತ ವಿಮಾ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ ಎಂದ ಅವರು, ಆರ್ಟಿಫಿಷಿಯಲ್ ಇಂಟಿಲಿಜೆನ್ಸ್ ಕಾಲದಲ್ಲಿದ್ದೇವೆ, ಪತ್ರಿಕೆಗಳ ಪರಿಸ್ಥಿತಿ ಸಂಕಷ್ಟದಲ್ಲಿದೆ. ಆದರೆ ಏನೇ ಬದಲಾವಣೆಗಳ ನಡುವೆ ಮುದ್ರಣ ಮಾಧ್ಯಮ ಉಳಿಯುತ್ತದೆ. ಪತ್ರಿಕೆಗಳು ಇರುವವರೆಗೂ ವಿತರಕರಿಗೆ ಮಹತ್ವ ಇದ್ದೇ ಇರುತ್ತದೆ ಎಂದರು.ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಿಕಾ ಹಂಚಿಕೆದಾರರು ಕೀಳರಿಮೆ ಪಡುವ ಅಗತ್ಯವಿಲ್ಲ, ಅಬ್ದುಲ್ ಕಲಾಂ ಅವರು ಪತ್ರಿಕಾ ವಿತರಕರಾಗಿ ಕೆಲಸ ಮಾಡಿ ರಾಷ್ಟ್ರಪತಿಯಾದರು. ದಿನಬೆಳಿಗ್ಗೆ ಚಳಿಮಳೆ ಲೆಕ್ಕಿಸದೆ ಪತ್ರಿಕೆ ವಿತರಣೆ ಮಾಡುವವರಿಗೆ ಸರ್ಕಾರ ಅಪಘಾತ ವಿಮೆ ಯೋಜನೆಯ ನೆರವು ನೀಡಿ ಸಹಕರಿಸಿದೆ ಎಂದರು.ಸಿದ್ಧವಾದ ಪತ್ರಿಕೆಯನ್ನು ಓದುಗರಿಗೆ ತಲುಪಿಸುವ ಪ್ರಮುಖ ಜವಾಬ್ದಾರಿ ನಿರ್ವಹಿಸುತ್ತಿರುವ ಪತ್ರಿಕಾ ವಿತರಕರ ಜೊತೆ ಪತ್ರಕರ್ತರ ಸಂಘ ಇರುತ್ತದೆ. ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಸಂಘ ಧ್ವನಿಯಾಗಿ ನೆರವಿಗೆ ಬರುತ್ತದೆ ಎಂದು ಹೇಳಿದರು. ಬೆಳ್ಳಾವಿ ಕಾರದ ಮಠದ ಕಾರದ ವೀರಬಸವ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ, ಪತ್ರಿಕೆ ವಿತರಕರು ಕೇವಲ ಪತ್ರಿಕೆ ವಿತರಿಸುವುದಿಲ್ಲ, ಮನೆಮನೆಗೆ ಜ್ಞಾನವನ್ನು ಹಂಚುವ ಮಹತ್ಕಾರ್ಯ ಮಾಡುತ್ತಿದ್ದೀರಿ. ನೀವು ಜ್ಞಾನದ ಪ್ರಚಾರಕರು ಎಂಬ ಹೆಮ್ಮೆ ನಿಮಗಿರಲಿ ಎಂದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಪತ್ರಕರ್ತ ಎಸ್.ನಾಗಣ್ಣ ಅವರು ಪತ್ರಿಕಾ ವಿತರಕರ ಸೇವೆ ಶ್ಲಾಘಿಸಿ, ಇಡೀ ಪ್ರಪಂಚದಲ್ಲಿ ಅತೀ ಕಡಿಮೆ ಬೆಲೆಗೆ ಯಾವುದಾದರೂ ವಸ್ತುವನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ ಎಂದರೆ ಅಂದು ಪತ್ರಿಕೆ. ಸುದ್ದಿ ಸಮಾಚಾರಗಳನ್ನು ಮನೆಗೆ ತಲುಪಿಸುವಂತಹ ಪತ್ರಿಕಾ ವಿತರಿಸುವುದು ಘನತೆವೆತ್ತ ವಿಚಾರ ಎಂದರು.

ಇಂದು ಸಾಮಾಜಿಕ ಜಾಲತಾಣಗಳ ಮೋಹದಲ್ಲಿ ಪತ್ರಿಕೆಗಳ ಪರಿಸ್ಥಿತಿ ಸಂದಿಗ್ಧತೆಯಲ್ಲಿದೆ. ಆದರೂ ಎದುರಾಗುವ ಸವಾಲುಗಳನ್ನು ಸ್ವೀಕರಿಸಿ ಪತ್ರಿಕೆಗಳನ್ನು ಮುನ್ನಡೆಸಬೇಕಾಗಿದೆ. ಇಂದು ಜೀವನ ನಿರ್ವಹಣೆ ದುಬಾರಿಯಾಗಿದೆ. ಪತ್ರಿಕಾ ವಿತರಕರ ಬದುಕೂ ಸಂಕಷ್ಟದಲ್ಲಿದೆ. ಸರ್ಕಾರದಿಂದ ಅಗತ್ಯ ಸವಲತ್ತುಗಳು ಇವರಿಗೆ ಸಿಗಲಿ ಎಂದು ಆಶಿಸಿದರು.ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳಿಧರ ಹಾಲಪ್ಪ ಮಾತನಾಡಿ, ಪತ್ರಿಕಾ ಹಂಚಿಕೆದಾರರಿಗೆ ಸರ್ಕಾರ ಅಪಘಾತ ವಿಮೆ ಯೋಜನೆ ನೀಡಿದೆ. ಜೊತೆಗೆ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ ಮಾಡಲು ಘೋಷಣೆ ಮಾಡುವಂತೆ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಮನವಿ ಮಾಡೋಣ ಎಂದು ಹೇಳಿದರು.ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿದರು. ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ಹುಬ್ಬಳ್ಳಿಯ ಪತ್ರಿಕಾ ವಿತರಕರ ಕುಟುಂಬದವರಿಗೆ ನಗರದ ರೋಟರಿ ಸಂಸ್ಥೆ ಅಧ್ಯಕ್ಷೆ ರಾಜೇಶ್ವರಿ ರುದ್ರಪ್ಪ ಧನ ಸಹಾಯ ಮಾಡಿದರು. ಹಿರಿಯ ಪತ್ರಕರ್ತರಾದ ಟಿ.ಎನ್.ಮಧುಕರ್, ಸೊಗಡು ವೆಂಕಟೇಶ್, ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಶಂಭುಲಿಂಗ, ಉಪಾಧ್ಯಕ್ಷ ಪ್ರಶಾಂತ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಸಂಗಮ್ ಸುರೇಶ್, ಸಂಘಟನಾ ಕಾರ್ಯದರ್ಶಿ ವಾಸುದೇವ್ ನಾದೂರು, ಜಿಲ್ಲಾ ಪತ್ರಿಕಾ ಹಂಚಿಕೆದಾರರ ಸಂಘದ ಅಧ್ಯಕ್ಷ ಚಲುವರಾಜು(ರಘು), ಗೌರವಾಧ್ಯಕ್ಷ ಟಿ.ಎಲ್.ನರಸಿಂಹಯ್ಯ, ಉಪಾಧ್ಯಕ್ಷ ರಂಗಮುತ್ತಯ್ಯ ಖಜಾಂಚಿ ಎಚ್.ಪಿ.ಯೋಗೀಶ್ ಸೇರಿದಂತೆ ಸಂಘದ ಪದಾಧಿಕಾರಿಗಳು, ವಿತರಕರು ಭಾಗವಹಿಸಿದ್ದರು.