ಸಾರಾಂಶ
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿರುವ ಜನತಾ ವಿದ್ಯಾವರ್ಧಕ ಸಂಸ್ಥೆಯ ಬಿ.ಎಚ್. ಪಾಟೀಲ ಪ್ರೌಢಶಾಲೆಯ ವಿದ್ಯಾರ್ಥಿ, ದಿನ ಪತ್ರಿಕೆ ಹಂಚುವ ಹುಡುಗ, ಬಡ ರೈತನ ಮಗ ಪ್ರಕಾಶ ಬಸವರಾಜ ಪಾಪನಾಶಿ, ಶೇ 98.24 ರಷ್ಟು ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಹಾಗೂ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾನೆ.
ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿರುವ ಜನತಾ ವಿದ್ಯಾವರ್ಧಕ ಸಂಸ್ಥೆಯ ಬಿ.ಎಚ್. ಪಾಟೀಲ ಪ್ರೌಢಶಾಲೆಯ ವಿದ್ಯಾರ್ಥಿ, ದಿನ ಪತ್ರಿಕೆ ಹಂಚುವ ಹುಡುಗ, ಬಡ ರೈತನ ಮಗ ಪ್ರಕಾಶ ಬಸವರಾಜ ಪಾಪನಾಶಿ, ಶೇ 98.24 ರಷ್ಟು ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಹಾಗೂ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾನೆ.
625ಕ್ಕೆ 614 ಅಂಕ ಗಳಿಸಿದ ವಿದ್ಯಾರ್ಥಿಯ ಈ ಸಾಧನೆ ಶಾಲೆಯ ಇತಿಹಾಸದಲ್ಲಿಯೇ ಹೊಸ ಮೈಲುಗಲ್ಲಾಗಿ ದಾಖಲಾಗಿದೆ. ಈ ಹಿಂದೆ 2015ರಲ್ಲಿ ಮಳಗಿ ಎಂಬ ವಿದ್ಯಾರ್ಥಿ ಶೇ 92 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದು ಇದುವರೆಗೂ ಶಾಲೆಯಲ್ಲಿ ದಾಖಲಾಗಿತ್ತು. ಉತ್ತಮ ಫಲಿತಾಂಶ ಪಡೆದಿರುವ ವಿದ್ಯಾರ್ಥಿ ಪ್ರಕಾಶ ಬಸವರಾಜ ಪಾಪನಾಶಿ ತನ್ನ ತಂದೆಯ ಕೃಷಿ ಕೆಲಸದಲ್ಲಿ ಸಹಾಯ ಮಾಡುತ್ತಾ ಬೆಳಗ್ಗೆ 6ಕ್ಕೆ ಗ್ರಾಮದಲ್ಲಿನ ಪತ್ರಿಕೆ ಎಜೆನ್ಸಿಯವರಿಂದ ಪತ್ರಿಕೆ ಪಡೆದು ಗ್ರಾಮದ ಮನೆ ಮನೆಗೆ ಪತ್ರಿಕೆ ಹಂಚಿ ಶ್ರದ್ಧೆಯಿಂದ ಶಾಲೆಗೆ ಹೋಗಿ ಅತ್ಯುತ್ತಮವಾಗಿ ಫಲಿತಾಂಶ ಪಡೆದಿದ್ದಾನೆ.ಕನ್ನಡ, ಗಣಿತ, ಹಿಂದಿ ವಿಷಯದಲ್ಲಿ 100 ಅಂಕ. ಇಂಗ್ಲಿಷ್ 99, ವಿಜ್ಞಾನ 93, ಸಾಮಾಜಿಕ ವಿಜ್ಞಾನ 97 ಅಂಕ ಪಡೆದಿರುವುದು ಕೂಡಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಗ್ರಾಮದ ಬಿ.ಎಚ್.ಪಾಟೀಲ ಎಸ್ಸೆಸ್ಸೆಲ್ಸಿ ಫಲಿತಾಂಶವು ಶೇ 59.09ರಷ್ಟು ಆಗಿದೆ. ಇಬ್ಬರು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, 11 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 8 ವಿದ್ಯಾರ್ಥಿಗಳು ದ್ವಿತೀಯ, 5 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಪ್ರಕಾಶ ಪಾಪನಾಶಿ ಶೇ 98.24 ಪ್ರಥಮ, ಲಕ್ಷ್ಮಣ ಒಂಟಿ ಶೇ 92.80 ದ್ವಿತೀಯ ಹಾಗೂ ಶಿವರಾಜ ಹೊಟ್ಟಿ ಶೇ 78.08 ತೃತೀಯ ಸ್ಥಾನ ಪಡೆದಿದ್ದಾರೆ.