ನಿತ್ಯವೂ ತಪ್ಪದೇ ಮನೆ-ಮನೆಗಳಿಗೆ ಪತ್ರಿಕೆ ಹಂಚುವ ವಿತಕರಿಗೆ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ. ಕಡಿಮೆ ಗೌರವ ಧನದಲ್ಲಿ ಈ ಸೇವಾ ಕಾರ್ಯ ಮಾಡುತ್ತಿರುವ ಈ ವೃತ್ತಿಯ ಸಮುದಾಯಕ್ಕೂ ಆದ್ಯತೆ ನೀಡಿ, ಸೌಲಭ್ಯಗಳನ್ನು ಒದಗಿಸುವ ಕೆಲಸ ಆಗಬೇಕು.
ಧಾರವಾಡ:
ಓದುಗರಿಗೆ ಪತ್ರಿಕೆ ಮುಟ್ಟಿಸುವ ಪತ್ರಿಕಾ ವಿತರಕರ ಸೇವಾ ಕಾರ್ಯ ಪರಿಗಣಿಸಿ ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಕರ್ನಾಟಕ ಪತ್ರಿಕಾ ವಿತರಕರ ಒಕ್ಕೂಟದ ಉಪಾಧ್ಯಕ್ಷ ಪ್ರಶಾಂತಕುಮಾರ ಎನ್. ಹೇಳಿದರು.ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಮೂರುಸಾವಿರ ವಿರಕ್ತಮಠದ ಆವರಣದಲ್ಲಿ ಶ್ರೀಕುಮಾರ ವಿರೂಪಾಕ್ಷ ಸ್ವಾಮೀಜಿ ಅವರ ಪಟ್ಟಾಧಿಕಾರದ ರಜತ ಮಹೋತ್ಸವ ಪ್ರಯುಕ್ತ ಉಪ್ಪಿನಬೆಟಗೇರಿ ಪತ್ರಿಕಾ ವಿತರಕರ ಒಕ್ಕೂಟವು ಹಮ್ಮಿಕೊಂಡಿದ್ದ ಪತ್ರಿಕಾ ವಿತರಕರ ದಿನಾಚರಣೆ ಹಾಗೂ ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಿತ್ಯವೂ ತಪ್ಪದೇ ಮನೆ-ಮನೆಗಳಿಗೆ ಪತ್ರಿಕೆ ಹಂಚುವ ವಿತಕರಿಗೆ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ. ಕಡಿಮೆ ಗೌರವ ಧನದಲ್ಲಿ ಈ ಸೇವಾ ಕಾರ್ಯ ಮಾಡುತ್ತಿರುವ ಈ ವೃತ್ತಿಯ ಸಮುದಾಯಕ್ಕೂ ಆದ್ಯತೆ ನೀಡಿ, ಸೌಲಭ್ಯಗಳನ್ನು ಒದಗಿಸುವ ಕೆಲಸ ಆಗಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಮಾಜಿ ಸದಸ್ಯ ತವನಪ್ಪ ಅಷ್ಟಗಿ, ಬೆಳಗಿನ ಜಾವದಲ್ಲಿ ಓದುಗರಿಗೆ ಮೊದಲು ಪತ್ರಿಕೆ ಅವಶ್ಯಕ. ಇದಕ್ಕಾಗಿ ಪತ್ರಿಕೆ ವಿತರಕರು ಗಾಳಿ, ಮಳೆ, ಚಳಿ ಲೆಕ್ಕಿಸದೆ ಓದುಗರಿಗೆ ಚಹಾ ಸೇವನೆ ಮಾಡುವ ಮೊದಲೇ ಪತ್ರಿಕೆ ಮುಟ್ಟಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸಾನ್ನಿಧ್ಯ ವಹಿಸಿದ್ದ ಕುಮಾರ ವಿರೂಪಾಕ್ಷ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಕಣ್ಣು ಅಮೂಲ್ಯ. ನಿಷ್ಕಾಳಜಿ ವಹಿಸಿದರೆ ಅಂಧತ್ವದ ಅಪಾಯವುಂಟು. ಕಣ್ಣು ಪರೀಕ್ಷೆ ಪ್ರತಿಯೊಬ್ಬರ ಜವಾಬ್ದಾರಿ. ಹೀಗಾಗಿ ಉಚಿತ ನೇತ್ರ ಶಿಬಿರದಲ್ಲಿ ತಪಾಸಣೆಯಲ್ಲಿ ಪಾಲ್ಗೊಂಡು ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಜಿಪಂ ಮಾಜಿ ಉಪಾಧ್ಯಕ್ಷ ನಿಜನಗೌಡ ಪಾಟೀಲ, ಮಂಜುನಾಥ ಸಂಕಣ್ಣವರ, ಗ್ರಾಪಂ ಆಡಳಿತಾಧಿಕಾರಿ ಚಂದ್ರು ಪೂಜಾರ, ಈರಣ್ಣ ಸಿಂಧಗಿಮಠ, ಹರೀಶ ಎಂ. ಮಾತನಾಡಿದರು. ಧಾರವಾಡ ಪತ್ರಿಕಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು.
ಪತ್ರಕರ್ತ ಶ್ರೀಶೈಲ ಗೌರಿಮಠ ಅಧ್ಯಕ್ಷತೆ ವಹಿಸಿದ್ದರು. ವರ್ಧಮಾನ ಅಷ್ಟಗಿ, ಗಂಗಾಧರ ಹೂಲಿ, ಮಂಜುನಾಥ ಹಿರೇಮಠ, ಪತ್ರಕರ್ತರಾದ ಶಶಿಧರ ಬುದ್ನಿ, ಶಿವಪ್ರಭು ಈಸರಗೊಂಡ, ರಮೇಶ ಓರಣಕರ, ಸುರೇಶಬಾಬು ತಳವಾರ, ಅಣ್ಣಪ್ಪ ನೀಲವಾಣಿ ಇದ್ದರು. ಬಸಲಿಂಗಪ್ಪ ಮಂಗಳಗಟ್ಟಿ, ಶಿವರಾಮ ಶಿರಗುಪ್ಪಿ, ಸವಿತಾ ಮೊಗಯ್ಯನವರ ಇದ್ದರು. ಮುಖ್ಯ ಶಿಕ್ಷಕ ಎಸ್.ಕೆ. ಕೊಡಿ ನಿರೂಪಿಸಿ, ವಂದಿಸಿದರು.ಶ್ರೀಕುಮಾರ ವಿರೂಪಾಕ್ಷ ಸ್ವಾಮೀಜಿಯವರ ಪಟ್ಟಾಧಿಕಾರದ ರಜತ ಮಹೋತ್ಸವ ಪ್ರಯುಕ್ತ ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಧಾರವಾಡ ಶಾಖೆಯಿಂದ ಶ್ರೀಮಠದ ಆವರಣದಲ್ಲಿ 100ಕ್ಕೂ ಹೆಚ್ಚು ಜನರ ನೇತ್ರ ತಪಾಸಣೆ ಮಾಡಲಾಯಿತು. ಇದಲ್ಲದೇ ಪತ್ರಿಕಾ ವಿತರಕರ ದಿನಾಚರಣೆ ಪ್ರಯುಕ್ತ ವಿತಕರನ್ನು ಶ್ರೀಮಠದಿಂದ ಸನ್ಮಾನಿಸಿ, ಗೌರವಿಸಿಲ್ಲದೇ ಒಕ್ಕೂಟದಿಂದ ಬ್ಯಾಗ್ ವಿತರಿಸಲಾಯಿತು. ಈ ವೇಳೆ ಉಪ್ಪಿನಬೆಟಗೇರಿ ಪತ್ರಿಕಾ ವಿತರಕರ ಒಕ್ಕೂಟದಿಂದ ಶ್ರೀಮಠದಿಂದ ನಿರ್ಮಾಣ ಆಗುತ್ತಿರುವ ನೂತನ ತೇರಿಗೆ ಅಲ್ಪ ದೇಣಿಗೆಯ ಕಾಣಿಕೆ ಸಲ್ಲಿಸಿದ್ದು ವಿಶೇಷವಾಗಿತ್ತು. ಉಪ್ಪಿನಬೆಟಗೇರಿಯ ಮೂರುಸಾವಿರ ವಿರಕ್ತಮಠದ ಆವರಣದಲ್ಲಿ ಶ್ರೀಕುಮಾರ ವಿರೂಪಾಕ್ಷ ಸ್ವಾಮೀಜಿ ಪಟ್ಟಾಧಿಕಾರದ ರಜತ ಮಹೋತ್ಸವ ಪ್ರಯುಕ್ತ ಪತ್ರಿಕಾ ವಿತರಕರ ದಿನಾಚರಣೆ ಹಾಗೂ ಉಚಿತ ನೇತ್ರ ತಪಾಸಣೆ ಶಿಬಿರ ಜರುಗಿತು.
