ಪತ್ರಿಕೆಗಳು ಜನಸಾಮಾನ್ಯರ ಜೀವನಾಡಿ

| Published : Jul 15 2024, 01:48 AM IST

ಸಾರಾಂಶ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಕೂಲ ಸಂದರ್ಭದಲ್ಲಿಯೂ ಸಹ ಸತ್ಯ ಹೊರಗೆಳೆಯುವ ಮೂಲಕ ಪತ್ರಿಕೆಗಳನ್ನು ತಮ್ಮ ಜವಾಬ್ದಾರಿ ನಿರ್ವಹಿಸುವ ಮೂಲಕ ಜನರಿಗೆ ಹತ್ತಿರುವಾಗುತ್ತಾ ಬಂದಿವೆ

ಗಜೇಂದ್ರಗಡ: ಸಮಾಜದ ವಿಶ್ವಾಸ ಹಾಗೂ ಪ್ರೀತಿ ಗಳಿಸಿಕೊಂಡಿರುವ ಪತ್ರಿಕೆಗಳು ಇಂದು ಜನಸಾಮಾನ್ಯರ ಜೀವನಾಡಿಗಳಾಗಿ ಕೆಲಸ ನಿರ್ವಹಿಸುತ್ತಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು.

ಪಟ್ಟಣದ ಗವಿಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಕೂಲ ಸಂದರ್ಭದಲ್ಲಿಯೂ ಸಹ ಸತ್ಯ ಹೊರಗೆಳೆಯುವ ಮೂಲಕ ಪತ್ರಿಕೆಗಳನ್ನು ತಮ್ಮ ಜವಾಬ್ದಾರಿ ನಿರ್ವಹಿಸುವ ಮೂಲಕ ಜನರಿಗೆ ಹತ್ತಿರುವಾಗುತ್ತಾ ಬಂದಿವೆ. ಹೀಗಾಗಿ ದೇಶದಲ್ಲಿ ಮಾಧ್ಯಮವನ್ನು ಪ್ರಜಾಪ್ರಭುತ್ವದ ೪ನೇ ಸ್ತಂಭ ಎಂದು ಕರೆಯಲಾಗುತ್ತಿದೆ. ಆದರೆ ಪ್ರತಿಕೋದ್ಯಮದ ರೀತಿ, ಸ್ವರೂಪ ಬದಲಾಗಿದ್ದರೂ ಸಹ ಪತ್ರಿಕೆಗಳನ್ನು ಓದುವ ಹವ್ಯಾಸಕ್ಕೆ ಬೇರೆ ಸರಿಸಮನಾದ ಹವ್ಯಾಸ ಮತ್ತೊಂದಿಲ್ಲ ಎಂದ ಅವರು, ಅಗಸ್ಟ್ ೩ನೇ ವಾರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಮ್ಮೇಳನ ನಡೆಸುವ ಕುರಿತು ಈಗಾಗಲೇ ಸಚಿವ ಎಚ್.ಕೆ. ಪಾಟೀಲ ಹಾಗೂ ಶಾಸಕ ಜಿ.ಎಸ್. ಪಾಟೀಲ ಅವರೊಂದಿಗೆ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಕಸಾಪ ಜಿಲ್ಲಾ ಸಮ್ಮೇಳನದ ದಿನಾಂಕ ಘೋಷಿಸುವದಾಗಿ ತಿಳಿಸಿದರು.

ನಿವೃತ್ತ ಉಪನ್ಯಾಸಕ ಬಿ.ಎ. ಕೆಂಚರಡ್ಡಿ ಮಾತನಾಡಿ, ಈ ಹಿಂದೆ ಪತ್ರಿಕೆಗಳಿಗೆ ಸುದ್ದಿ ಬರೆದು ಕುಳುಹಿಸುವುದು ಸಾಹಸದ ಕೆಲಸದ ಜತೆಗೆ ಜವಾಬ್ದಾರಿ ಮತ್ತು ಸಾರ್ಥಕತೆಯ ಕೆಲಸವಾಗಿತ್ತು. ಅಂದು ತಂತ್ರಜ್ಞಾನ ಬಳಕೆ ಇರದಿದ್ದರು ಸಹ ತಾಲೂಕಿನ ಅಂದಿನ ವರದಿಗಾರರು ಸಾಮಾಜಿಕ ನ್ಯಾಯ ಹಾಗೂ ಪಟ್ಟಣ ಸೇರಿದಂತೆ ಸುತ್ತಲು ನಡೆಯುವ ಘಟನೆಗಳ ವಸ್ತುನಿಷ್ಠ ವರದಿ ಮಾಡುವ ಮೂಲಕ ತಮ್ಮ ಬದ್ಧತೆ ಪ್ರದರ್ಶಿಸಿದ್ದ ಹತ್ತು ಹಲವು ಘಟನೆಗಳು ಇಂದಿಗೂ ಸಹ ಹಸಿರಾಗಿವೆ. ಆದರೆ ಪ್ರಸ್ತುತ ದಿನಮಾನದಲ್ಲಿ ಕ್ಷಣಾರ್ಧದಲ್ಲಿ ಸುದ್ದಿಗಳು ನಮ್ಮ ಕೈಬೆರಳಿನಲ್ಲಿ ಬಂದು ಕುಳಿತಿರುತ್ತವೆ. ತಾಲೂಕಿನಲ್ಲಿ ಪತ್ರಕರ್ತರಿಗೆ ವಿಶೇಷ ಗೌರವ ಹಾಗೂ ಸ್ಥಾನಮಾನ ಸಿಕ್ಕಿದ್ದು ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಪತ್ರಕರ್ತರ ಮೇಲಿದೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಶ್ರೀಶೈಲ ಕುಂಬಾರ ಮಾತನಾಡಿ, ಪಟ್ಟಣ ಹಾಗೂ ತಾಲೂಕಿನಲ್ಲಿ ಕೆಲ ಘಟನೆಗಳು ರಾಜ್ಯದ ಗಮನ ಸೆಳೆಯುವ ನಿಟ್ಟಿನ ವರದಿಗಳಾಗಿವೆ.ಇನ್ನೂ ಕೆಲವು ಸುದ್ದಿಗಳಿಗೆ ಬಂದ ಒತ್ತಡ ಬದಿಗೊತ್ತಿ ಘಟನೆ ವರದಿ ಮಾಡುವ ಮೂಲಕ ನಮ್ಮ ಕರ್ತವ್ಯ ನಿರ್ವಹಿಸುತ್ತಾ ಬರುತ್ತಿದ್ದೇವೆ. ಮೈಮರೆತು ವರದಿಗೆ ಮುಂದಾಗುವುದು ಅಪಾಯಕ್ಕೆ ಮೈಒಡ್ಡಿದ್ದಂತೆ. ಹೀಗಾಗಿ ಜವಾಬ್ದಾರಿ ಮತ್ತು ಕರ್ತವ್ಯ ಅರಿತು ಕೆಲಸ ಮಾಡಬೇಕಿದೆ ಎಂದರು.

ಹಿರಿಯ ಪತ್ರಕರ್ತ ರಾಘವೇಂದ್ರ ಕುಲಕರ್ಣಿ, ಪುಂಡಲಿಕ ಕಲ್ಲಿಗನೂರ, ಶೀತಲ ಓಲೆಕಾರ ಮಾತನಾಡಿದರು. ಕಸಾಪ ತಾಲೂಕಾಧ್ಯಕ್ಷ ಎ.ಪಿ. ಗಾಣಿಗೇರ, ಪತ್ರಕರ್ತ ಶಿವಕುಮಾರ ಶಶಿಮಠ, ಎಸ್.ಐ. ಪತ್ತಾರ, ಎಸ್.ಎಸ್. ನರೇಗಲ್, ಬಿ.ವಿ. ಮುನವಳ್ಳಿ, ಅರವಿಂದ ಕವಡಿಮಟ್ಟಿ, ಆರ್.ವಿ. ಡೊಳ್ಳಿನ, ಆರ್.ಜಿ. ಮ್ಯಾಜಲ್, ಬಿ.ಟಿ. ಹೊಸಮನಿ ಇದ್ದರು.