ಸಾರಾಂಶ
ಪತ್ರಿಕಾ ದಿನಾಚರಣೆ, ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ
ಕನ್ನಡಪ್ರಭ ವಾರ್ತೆ, ಕೊಪ್ಪದೃಶ್ಯ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳು ಹೆಚ್ಚು ಪ್ರಚಲಿತದಲ್ಲಿರುವ ಈ ದಿನಗಳಲ್ಲಿ ಪತ್ರಿಕೆಗಳು ತನ್ನ ನಿಖರ ವರದಿಗಳಿಂದ ಜೀವಂತಿಕೆ ಉಳಿಸಿಕೊಂಡಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಚಿಕ್ಕಮಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕೊಪ್ಪ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಯುನೈಟೆಡ್ ವರ್ಕಿಂಗ್ ಜರ್ನಲಿಸ್ಟ್ ಅಸೋಸಿಯೇಶನ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕೆಗಳು ಹಿಂದಿನಿಂದಲೂ ಲೇಖನ ಮತ್ತು ಸುದ್ದಿಗಳನ್ನು ಬಿತ್ತರಿಸುವ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದೆ.ಪತ್ರಿಕಾ ವರದಿಗಳು ಪಾರದರ್ಶಕವಾಗಿ ಇರಬೇಕು. ಮುದ್ರಣ ಮಾಧ್ಯಮಕ್ಕೆ ಅಳಿವಿಲ್ಲ ಎಂದ ಅವರು ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಹಳ್ಳಿಗಳಲ್ಲಿ ಸೇವೆ ಸಲ್ಲಿಸುವ ಪತ್ರಕರ್ತರ ಪರಿಸ್ಥಿತಿ ಉತ್ತಮವಾಗಿಲ್ಲ. ತಾಲೂಕುಗಳಲ್ಲಿ ಪತ್ರಕರ್ತರ ಭವಿಷ್ಯ ನಿಧಿಯನ್ನು ಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ನಾನು ಸಹಕಾರ ನೀಡಲು ಸಿದ್ಧ ಎಂದು ತಿಳಿಸಿದರು.
ಪತ್ರಕರ್ತ ವೈ.ಗ.ಜಗದೀಶ್ ಮಾತನಾಡಿ, ಪತ್ರಿಕೋದ್ಯಮ ಉದ್ಯಮವಲ್ಲ, ಅದೊಂದು ವ್ಯವಸಾಯ. ಸೇವಾ ಕಾರ್ಯವಾಗಿದೆ ಎಂದ ಅವರು ಪತ್ರಕರ್ತರಿಗೆ ಸರ್ಕಾರವನ್ನು ಬದಲಾಯಿಸುವ ಸಾರ್ಮಥ್ಯವಿರುತ್ತದೆ. ಪಿ.ಲಂಕೇಶ್‌ರವರು ಸರ್ಕಾರವನ್ನು ಬದಲಾಯಿಸಿ ತೋರಿಸಿದ್ದರು. ಪತ್ರಕರ್ತರು ಯಾವುದೇ ಮುಲಾಜಿಗೆ ಒಳಗಾಗದೇ ತಮ್ಮ ಕೆಲಸದಲ್ಲಿ ನಿಷ್ಟೆ ತೋರಿದಲ್ಲಿ ಪತ್ರಿಕಾರಂಗದಲ್ಲಿ ಹೊಸ ಭಾಷ್ಯ ಬರೆಯಲು ಸಾಧ್ಯವಿದೆ ಎಂದರು. ಸಾಮಾಜಿಕ ಜಾಲತಾಣಗಳಲ್ಲಿ ಸುದ್ಧಿ ಪ್ರಸಾರ ಆಗಲು ಶುರುವಾದಂದಿನಿಂದ ತಕ್ಷಣ ಸುದ್ದಿ ಪ್ರಕಟಿಸುವ ಭರದಲ್ಲಿ ಸುದ್ದಿಗಳ ಸತ್ಯಾಸತ್ಯತೆ ಅರಿಯದೇ ಪ್ರಕಟಿಸುವ ಪ್ರಕರಣ ಬಹಳವಾಗಿದೆ. ಇದೆಲ್ಲದರ ನಡುವೆ ಪತ್ರಿಕೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸತ್ಯ ಪ್ರಕಟಿಸುತ್ತಿರಬೇಕು. ಯಾರನ್ನೋ ಮೆಚ್ಚಿಸುವ ಭರದಲ್ಲಿ ಸತ್ಯ ಮುಚ್ಚಿಡುವ ಕೆಲಸ ಮಾಡಬಾರದು. ಕನಿಷ್ಠ ನಾವು ಕೊಡುವ ಸುದ್ದಿ ಸತ್ಯಯುತವಾದದು ಎಂದು ಪತ್ರಕರ್ತರು ಅರಿತಿರಬೇಕು. ತಂತ್ರಜ್ಞಾನ ಬೆಳೆದಂತೆ ನಮ್ಮ ವೈಯುಕ್ತಿಕ ಸಂಗತಿಗಳು ಸಿಗಬಾರದ ಜನರ ಕೈಗಳಿಗೆ ಸಿಗುತ್ತಿದೆ. ನಾವು ಉಪಯೋಗಿಸುವ ಮೊಬೈಲ್ ನಮ್ಮನ್ನು ಇಂದು ಜಗತ್ತಿನೆದುರು ಬೆತ್ತಲಾಗಿಸಿ ಬೀದಿಯಲ್ಲಿ ತಂದು ನಿಲ್ಲಿಸಿದೆ ಎಂದರು.ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ಪತ್ರಕರ್ತರಿಗೆ ಕಾಯ್ದೆ ರಚನೆಯಾಗಬೇಕು ಎಂಬುದು ಜಗತ್ತಿನ ಕೂಗಾಗಿದೆ. ಈ ಕೂಗಿನ ಜತೆ ನಾವು ದನಿಗೂಡಿಸಬೇಕಾಗಿದೆ. ವಕೀಲರಿಗೆ, ವೈದ್ಯರಿಗೆ ಕಾಯ್ದೆಗಳು ಇದೆ. ಪತ್ರಕರ್ತರನ್ನು ಕಟ್ಟಿ ಹಾಕಲು ಕಾಯ್ದೆಗಳು ಇವೆಯೇ ಹೊರತು, ಅವರನ್ನು ರಕ್ಷಿಸಲು ಕಾಯ್ದೆಗಳು ಇಲ್ಲ ಎಂದರು.
ಕಾರ್ಯಕ್ರಮದಲ್ಲಿ ಉತ್ತಮ ವರದಿ ಪ್ರಕಟಿಸಿದ ಪತ್ರಕರ್ತರಿಗೆ ಪ್ರಶಸ್ತಿ ನೀಡಲಾಯಿತು. ಪತ್ರಕರ್ತರಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಲಾಯಿತು.ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಿ.ಎಚ್.ಮೂರ್ತಿ, ತಾಲೂಕು ಅಧ್ಯಕ್ಷ ಜಿನೇಶ್ ಇರ್ವತ್ತೂರು, ಪತ್ರಕರ್ತರಾದ ವಿಶ್ವನಾಥ್ ಶೆಟ್ಟಿ, ಕೆ.ಜಯಕುಮಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೆ.ಎಸ್.ಸೋಮಶೇಖರ್, ಲೋಕೇಶಪ್ಪ, ಅರುಣ್ ಸಾಗರ್, ಹಮೀದ್. ಎಚ್.ಎಂ., ಸಂತೋಷ್ ಕುಲಾಸೋ, ಸಂತೋಷ್ ಕುಲಾಸೋ, ಎಚ್.ಕೆ.ಹಂಸ, ಕೆ.ಎನ್.ಪ್ರಸನ್ನ ಶೆಟ್ಟಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಪತ್ರಕರ್ತರು ಇದ್ದರು.