ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಪರಿಸರಕ್ಕೆ ಮಾರಕ ಆಗಲಿದೆ ಎಂಬ ಕಾರಣಕ್ಕೆ ಪರಿಸರ ಪ್ರೇಮಿಗಳಿಂದ ತೀವ್ರ ಆಕ್ಷೇಪಕ್ಕೆ ಕಾರಣವಾಗಿದ್ದ ಮಂಗಳೂರಿನ ನೇತ್ರಾವತಿ ವಾಟರ್ ಫ್ರಂಟ್ ಯೋಜನೆಯ ಕಾಮಗಾರಿಗೆ ಮುಂದಿನ ವಿಚಾರಣೆ ದಿನದವರೆಗೆ ತಡೆ ನೀಡಿ ಚೆನ್ನೈನ ರಾಷ್ಟ್ರೀಯ ಹಸಿರು ಪೀಠವು ಆದೇಶ ಹೊರಡಿಸಿದೆ.ಅಲ್ಲದೆ, ನಿಯಮ ಉಲ್ಲಂಘನೆ ಮುಂದುವರಿಸಿದರೆ ಇದುವರೆಗೆ ಮಾಡಲಾದ ಎಲ್ಲಾ ನಿರ್ಮಾಣಗಳನ್ನು ತೆಗೆದು ಹಾಕಬೇಕಾಗುತ್ತದೆ ಎಂದು ಹಸಿರು ನ್ಯಾಯಪೀಠ ಖಡಕ್ ಎಚ್ಚರಿಕೆ ನೀಡಿದೆ. ಹಸಿರು ಪೀಠದ ಈ ಆದೇಶವು ಪರಿಸರ ಪ್ರೇಮಿಗಳಿಗೆ ಸಂತಸ ತಂದಿದ್ದರೆ, ತರಾತುರಿಯಲ್ಲಿ ಯೋಜನೆ ಜಾರಿಗೊಳಿಸಲು ಹೊರಟ ಆಡಳಿತಕ್ಕೆ ಬಿಸಿ ಮುಟ್ಟಿಸಿದೆ.ವಾಟರ್‌ಫ್ರಂಟ್ ಯೋಜನೆಯಲ್ಲಿ ಅನೇಕ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ ಎಂದು ತಿಳಿಸಿರುವ ಎನ್‌ಜಿಟಿ, ಮುಂದಿನ ವಿಚಾರಣೆಯವರೆಗೆ ಇಲ್ಲಿ ಯಾವುದೇ ರೀತಿಯ ಕಾಮಗಾರಿಯನ್ನು ನಡೆಸಬಾರದು ಎಂದು ಸೂಚಿಸಿದೆ.
ನೇತ್ರಾವತಿ ನದಿ ದಡದಲ್ಲಿ ಮೋರ್ಗನ್ಸ್ ಗೇಟ್‌ನಿಂದ ಬೋಳಾರದವರೆಗೆ 2.1 ಕಿ.ಮೀ. ದೂರವನ್ನು ವಾಯುವಿಹಾರ ಪ್ರದೇಶವಾಗಿ ಅಭಿವೃದ್ಧಿಪಡಿಸುವುದು ಸೇರಿದಂತೆ ಕೆಲವು ಕಾಮಗಾರಿಗಳನ್ನು ವಾಟರ್‌ಫ್ರಂಟ್ ಯೋಜನೆ ಒಳಗೊಂಡಿತ್ತು. ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಈ ಯೋಜನೆ ಕೈಗೆತ್ತಿಕೊಂಡಿತ್ತು.ಕೆಲ ಸಮಯದ ಹಿಂದೆ ಪ್ರಗತಿ ಪರಿಶೀಲನೆಗೆ ಆಗಮಿಸಿದ ನಗರಾಭಿವೃದ್ಧಿ ಸಚಿವರು- ಕೇವಲ 2 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲು ಬರೋಬ್ಬರಿ 70 ಕೋಟಿ ಖರ್ಚು ಮಾಡುವ ವಾಟರ್ ಫ್ರಂಟ್ ಯೋಜನೆಯ ಪ್ಲ್ಯಾನ್ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಮರು ಪರಿಶೀಲನೆ ನಡೆಸುವಂತೆ ಸೂಚಿಸಿದ್ದರು. ಇದೀಗ ಸ್ವತಃ ಎನ್‌ಜಿಟಿಯು ನಿಯಮ ಮೀರಿ ಕಾಮಗಾರಿ ನಡೆಸಿರುವ ಬಗ್ಗೆ ಬೊಟ್ಟು ಮಾಡಿದ್ದಲ್ಲದೆ, ಕಾಮಗಾರಿಗೆ ತಡೆ ನೀಡಿರುವುದು ಗಮನಾರ್ಹ.
ಈ ನಡುವೆ ವಾಟರ್ ಫ್ರಂಟ್ ಯೋಜನೆ ಕುರಿತು ಮಾಧ್ಯಮ ವರದಿಗಳನ್ನೇ ಆಧರಿಸಿ ರಾಷ್ಟ್ರೀಯ ಹಸಿರು ನ್ಯಾಯಪೀಠದ ಪ್ರಧಾನ ಬೆಂಚ್ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.