ಎನ್‌ಐಎ ದಾಳಿ: ಶಂಕಿತ 8 ಜನ ಉಗ್ರರ ಪೈಕಿ ನಾಲ್ವರು ಬಳ್ಳಾರಿಯವರು!

| Published : Dec 20 2023, 01:15 AM IST

ಎನ್‌ಐಎ ದಾಳಿ: ಶಂಕಿತ 8 ಜನ ಉಗ್ರರ ಪೈಕಿ ನಾಲ್ವರು ಬಳ್ಳಾರಿಯವರು!
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ವಿವಿಧೆಡೆ ಏಕಕಾಲಕ್ಕೆ ದಾಳಿ ನಡೆಸಿ, ಒಟ್ಟು ಎಂಟು ಜನರನ್ನು ಬಂಧಿಸಿದ್ದಾರೆ. ಈ ಪೈಕಿ ಬಳ್ಳಾರಿಯಲ್ಲಿ ಇಬ್ಬರ ಬಂಧನವಾಗಿತ್ತು. ಬೆಂಗಳೂರು ಮತ್ತಿತರ ಕಡೆಗಳಲ್ಲಿ ಬಂಧನಕ್ಕೊಳಗಾದವರ ಪೈಕಿ ಇನ್ನಿಬ್ಬರು ಸಹ ಬಳ್ಳಾರಿ ನಿವಾಸಿಗಳು ಎಂಬುದು ಗೊತ್ತಾಗಿದೆ.

ಕೆ.ಎಂ. ಮಂಜುನಾಥ್

ಬಳ್ಳಾರಿ: ಐಎಸ್ (ಇಸ್ಲಾಮಿಕ್ ಸ್ಟೇಟ್) ಭಯೋತ್ಪಾದನಾ ಸಂಘಟನೆ ಜತೆ ಒಡನಾಟಕ್ಕಾಗಿ ಸೋಮವಾರ ಬಂಧಿತರಾದ 8 ಜನ ಶಂಕಿತ ಉಗ್ರರ ಪೈಕಿ ನಾಲ್ವರು ಬಳ್ಳಾರಿಯವರು ಎನ್ನುವುದು ಈ ಗಣಿನಾಡನ್ನು ಬೆಚ್ಚಿಬೀಳಿಸಿದೆ!

ಸುಧಾರಿತ ಬಾಂಬ್ (ಐಇಡಿ) ಬಳಸಿ ದೇಶದ ವಿವಿಧೆಡೆ ಸ್ಫೋಟಕ ಸಂಚು ರೂಪಿಸುತ್ತಿದ್ದ ತಂಡವನ್ನು ಸೋಮವಾರ ಪತ್ತೆ ಹಚ್ಚಿದ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಬಳ್ಳಾರಿ, ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಏಕಕಾಲಕ್ಕೆ ದಾಳಿ ನಡೆಸಿ, ಒಟ್ಟು ಎಂಟು ಜನರನ್ನು ಬಂಧಿಸಿದ್ದಾರೆ. ಈ ಪೈಕಿ ಬಳ್ಳಾರಿಯಲ್ಲಿ ಇಬ್ಬರ ಬಂಧನವಾಗಿತ್ತು. ಬೆಂಗಳೂರು ಮತ್ತಿತರ ಕಡೆಗಳಲ್ಲಿ ಬಂಧನಕ್ಕೊಳಗಾದವರ ಪೈಕಿ ಇನ್ನಿಬ್ಬರು ಸಹ ಬಳ್ಳಾರಿ ನಿವಾಸಿಗಳು ಎಂಬುದು ಗೊತ್ತಾಗಿದೆ.

ಬಂಧಿತರು ವಿದ್ಯಾರ್ಥಿಗಳು:

ಬಳ್ಳಾರಿಯಲ್ಲಿ ಬಂಧಿತರಾದ ಸೈಯದ್ ಸಮೀರ್ ನಗರದ ಕಾಲೇಜೊಂದರಲ್ಲಿ ಬಿಸಿಎ ಮೂರನೇ ಸೆಮಿಸ್ಟರ್ ವಿದ್ಯಾರ್ಥಿ, ಜಾಗೃತಿನಗರ ನಿವಾಸಿ. ಇತ್ತೀಚೆಗೆ ತಾನು ಓದುತ್ತಿದ್ದ ಕಾಲೇಜಿನಲ್ಲಿ ಉಪನ್ಯಾಸಕರ ವಿರುದ್ಧ ತಿರುಗಿ ಬಿದ್ದಿದ್ದನಲ್ಲದೆ, ಉಪನ್ಯಾಸಕ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಪಾಠ ಮಾಡಿದ್ದಾರೆ ಎಂದು ಆರೋಪಿಸಿದ್ದ. ಬಳಿಕ ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ಮೌಖಿಕ ದೂರು ಸಹ ನೀಡಿದ್ದ. ಸೈಯದ್ ಸಮೀರ್‌ನ ತಂದೆ ಬೀದಿಬದಿಯ ವ್ಯಾಪಾರಿಯಾಗಿದ್ದು, ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ.

ಬಂಧಿತ ಮಿನಾಜ್ ಅಲಿಯಾಸ್ ಮಹಮ್ಮದ್ ಸುಲೇಮಾನ್ ಬಳ್ಳಾರಿಯ ಕೌಲ್ ಬಜಾರ್ ಪ್ರದೇಶದ ನಿವಾಸಿ. ನಿಷೇಧಿತ ಸಂಘಟನೆ ಪಿಎಫ್‌ಐ ಕಾರ್ಯದರ್ಶಿಯಾಗಿ ಸಕ್ರಿಯವಾಗಿದ್ದ. ಈತ ಅನೇಕ ವಿದ್ಯಾರ್ಥಿಗಳೊಂದಿಗೆ ಸಂಘಟನೆ ಚಟುವಟಿಕೆಯನ್ನು ವಿಸ್ತರಿಸಿದ್ದ. ಬೇರೆ ಜಿಲ್ಲೆಯ ವಿದ್ಯಾರ್ಥಿಗಳು ಸಹ ಈತನ ಸಂಪರ್ಕದಲ್ಲಿದ್ದರು. ಮಹಮ್ಮದ್ ಸುಲೇಮಾನ್‌ನ ತಂದೆ ಕೌಲ್ ಬಜಾರ್ ಪ್ರದೇಶದಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಬಂಧಿತನಾಗಿರುವ ಸೈಯದ್ ಸಮೀವುಲ್ಲಾ ಬಳ್ಳಾರಿ ನಿವಾಸಿ. ಬೆಂಗಳೂರಿನ ಕಾಲೇಜೊಂದರಲ್ಲಿ ಕಾನೂನು ವಿದ್ಯಾರ್ಥಿ. ಬೇರೆಡೆ ಬಂಧಿತನಾಗಿರುವ ಮತ್ತೋರ್ವ ಸಹ ಬಳ್ಳಾರಿಯ ಕೌಲ್ ಬಜಾರ್ ಪ್ರದೇಶ ನಿವಾಸಿ ಎಂದು ತಿಳಿದುಬಂದಿದೆ. ಈತನ ಕುಟುಂಬದ ಬಗ್ಗೆ ಹೆಚ್ಚು ಮಾಹಿತಿಗಳು ಲಭ್ಯವಾಗಿಲ್ಲ. ಬಂಧಿತರಲ್ಲದೆ ಇನ್ನು ನಾಲ್ವರಿಗೆ ಎನ್‌ಐಎ ಅಧಿಕಾರಿಗಳು ನೊಟೀಸ್ ಜಾರಿ ಮಾಡಿದ್ದು, ಕರೆದಾಗ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಸಂಶಯಾಸ್ಪದರ ಮೇಲೆ ಪೊಲೀಸರು ನಿಗಾ ಇರಿಸಿದ್ದಾರೆ.

ಕುಖ್ಯಾತ ಉಗ್ರ ಸಂಘಟನೆ ಐಸಿಸ್ ಜತೆ ನಂಟು ಹೊಂದಿದ್ದ ಮಹ್ಮದ್ ಸುಲೇಮಾನ್ ಬಳ್ಳಾರಿಯನ್ನು ಕೇಂದ್ರವಾಗಿಟ್ಟುಕೊಂಡು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಎಂಬ ಸಂಗತಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ವರ್ಷದಲ್ಲಿ 3ನೇ ಬಾರಿ ದಾಳಿ:ಈ ಹಿಂದೆ ಅಕ್ರಮ ಗಣಿಗಾರಿಕೆ ಮೂಲಕ ಕುಖ್ಯಾತಿಗೆ ಒಳಗಾಗಿದ್ದ ಬಳ್ಳಾರಿಯೀಗ ವಿಧ್ವಂಸಕ ಕೃತ್ಯ ಎಸಗುವವರ ಕೇಂದ್ರ ಸ್ಥಾನವಾಗುತ್ತಿರುವುದು ಜನರಲ್ಲಿ ಅಭದ್ರತೆಯ ಭೀತಿ ಕಾಡಿದೆ.

ಕಳೆದ ಒಂದು ವರ್ಷದಿಂದ ಕೇಂದ್ರೀಯ ತನಿಖಾ ದಳದ ಅಧಿಕಾರಿಗಳು ಬಳ್ಳಾರಿಯ ಕಡೆ ನಿಗಾ ಇಟ್ಟಿದ್ದು, ಮೂರು ಬಾರಿ ದಾಳಿ ನಡೆಸಿದ್ದಾರೆ. ಖೋಟಾನೋಟು ಮುದ್ರಣ ಹಾಗೂ ಚಲಾವಣೆ, ನಿಷೇಧಿತ ಪಿಎಫ್‌ಐ ತರಬೇತುದಾರ ಮಹ್ಮದ್ ಯೂನಸ್ ಬಂಧನದ ಬಳಿಕ ಡಿ. 18ರಂದು ದೇಶದ ವಿವಿಧೆಡೆ ನಡೆದ ಏಕಕಾಲದ ದಾಳಿಯಲ್ಲಿ ಬಂಧಿತರಾದ ಎಂಟು ಜನರ ಪೈಕಿ ನಾಲ್ವರು ಬಳ್ಳಾರಿಯವರು ಎಂಬಂಶ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.