ನಿಡಗುಂದಿ ಮೆಗಾ ಮಾರುಕಟ್ಟೆಗೆ ಸಿದ್ದೇಶ್ವರ ಶ್ರೀಗಳ ಹೆಸರು

| Published : Jan 05 2025, 01:34 AM IST

ನಿಡಗುಂದಿ ಮೆಗಾ ಮಾರುಕಟ್ಟೆಗೆ ಸಿದ್ದೇಶ್ವರ ಶ್ರೀಗಳ ಹೆಸರು
Share this Article
  • FB
  • TW
  • Linkdin
  • Email

ಸಾರಾಂಶ

ಬಸವನಬಾಗೇವಾಡಿ ಮೆಗಾ ಮಾರುಕಟ್ಟೆಗೆ ಬಸವಣ್ಣನ ಹೆಸರಿಡಲಾಗಿದ್ದು, ನಿಡಗುಂದಿ ಮೆಗಾ ಮಾರುಕಟ್ಟೆಗೆ ಪರಮಪೂಜ್ಯ ಸಿದ್ದೇಶ್ವರ ಶ್ರೀಗಳ ಹೆಸರಿಡಲಾಗುವುದು ಎಂದು ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ನಿಡಗುಂದಿ

ಬಸವನಬಾಗೇವಾಡಿ ಮೆಗಾ ಮಾರುಕಟ್ಟೆಗೆ ಬಸವಣ್ಣನ ಹೆಸರಿಡಲಾಗಿದ್ದು, ನಿಡಗುಂದಿ ಮೆಗಾ ಮಾರುಕಟ್ಟೆಗೆ ಪರಮಪೂಜ್ಯ ಸಿದ್ದೇಶ್ವರ ಶ್ರೀಗಳ ಹೆಸರಿಡಲಾಗುವುದು ಎಂದು ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.ಪಟ್ಟಣದಲ್ಲಿ ವಾರ್ಡ್‌ ಸಂಖ್ಯೆ 8ರಲ್ಲಿ ನಮ್ಮ ಕ್ಲಿನಿಕ್, ವಾರ್ಡ ಸಂಖ್ಯೆ 14ರಲ್ಲಿ ಡ್ರೇನ್ ಕಾಮಗಾರಿ ಭೂಮಿಪೂಜೆ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಸಿಸ್ ಕೇಂದ್ರ ಉದ್ಘಾಟನೆ ಹಾಗೂ ಮೆಗಾ ಮಾರುಕಟ್ಟೆ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವನಬಾಗೇವಾಡಿ ಅಣ್ಣ ಬಸವಣ್ಣನ ಜನ್ಮಭೂಮಿಯಾದ ಕಾರಣ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅಲ್ಲಿಯ ಜನರ ಬೇಡಿಕೆಯಂತೆ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಿ ಅಭಿವೃದ್ಧಿಗೆ ಶ್ರಮಿಸಲಾಗಿದೆ ಎಂದರು.

ಜಿಲ್ಲೆಯ ಶಾಸ್ತ್ರೀ ಮಾರುಕಟ್ಟೆಯಂತೆ ನಿಡಗುಂದಿಯಲ್ಲಿ ₹3 ಕೋಟಿ ವೆಚ್ಚದಲ್ಲಿ ಮೆಗಾ ಮಾರುಕಟ್ಟೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಬರುವ ದಿನದಲ್ಲಿ ಮತ್ತಷ್ಟು ಹೆಚ್ಚಿನ ಅನುದಾನ ನೀಡಿ ಮಾದರಿ, ಮೆಗಾ ಮಾರುಕಟ್ಟೆ ಕಟ್ಟಲಾಗುವುದು. ವೇಗವಾಗಿ ಬೆಳೆಯುತ್ತಿರುವ ನಿಡಗುಂದಿಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ಅಭಿವೃದ್ಧಿಯ ವೇಗ ಹೆಚ್ಚಳಕ್ಕೆ ಸ್ಥಳೀಯ ಸಂಸ್ಥೆಗೆ ಹೆಚ್ಚಿನ ಆದಾಯ ತರುವ ನಿಟ್ಟಿನಲ್ಲಿ ಮೆಗಾ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ. ಸ್ಥಳೀಯ ಸಂಸ್ಥೆ ಸ್ವಂತ ಹೆಚ್ಚು ಆರ್ಥಿಕ ಶಕ್ತಿ ಹೊಂದಿ ಜನರಿಗೆ ಮೂಲ ಸೌಕರ್ಯ ಕೊಡಲು ಸಹಕಾರಿಯಾಗುವ ಜತೆಗೆ ಸರ್ಕಾರದ ಅನುದಾನಕ್ಕೆ ಕೈಚಾಚುವ ಸ್ಥಿತಿ ತಪ್ಪಿದಂತಾಗಲಿದೆ ಎಂದರು.ಬಡವರಿಗೆ ಹೆಚ್ಚಿನ ಅನುಕೂಲಕ್ಕಾಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಸಿಸ್ ಕೇಂದ್ರ ಸ್ಥಾಪಿಸಲಾಗಿದ್ದು, ಜನರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಿಡಗುಂದಿಯಲ್ಲಿ ಜಾತ್ಯಾತೀತವಾಗಿ ಜನ ಸಾಮರಸ್ಯೆದಿಂದ ಬದುಕು ನಡೆಸುತ್ತಿದ್ದಾರೆ. ರಾಜ್ಯದಲ್ಲಿ ನಿಡಗುಂದಿ ಅತ್ಯಂತ ವೇಗವಾಗಿ ಬೆಳೆಯುವ ಪಟ್ಟಣವಾಗಿದೆ. ವೇಗಕ್ಕೆ ತಕ್ಕಂತೆ ಅಭಿವೃದ್ದಿಯೂ ನಡೆಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ನಿಡಗುಂದಿಯಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡುವ ಮೂಲಕ ಸಬ್ ರಜಿಸ್ಟರ್‌ ಕಚೇರಿ ಸೇರಿದಂತೆ ತಾಲೂಕು ಕೇಂದ್ರದ ಎಲ್ಲ ಕಚೇರಿಗಳನ್ನು ತೆರೆಯಲು ಅನುಕೂಲ ಕಲ್ಪಿಸಲಾವುದು ಎಂದು ತಿಳಿಸಿದರು.ಕಾಂಗ್ರೆಸ್ ಮುಖಂಡ ಸಿದ್ದಣ್ಣ ನಾಗಠಾಣ, ಶೇಕಪ್ಪಣ್ಣ ಬಳಿಗಾರ ಮಾತನಾಡಿ, ಸಚಿವ ಶಿವಾನಂದ ಪಾಟೀಲರು ಆಯ್ಕೆಗೊಂಡ ದಿನದಿಂದ ನಿರಂತರ ಕ್ಷೇತದ ಅಭಿವೃದ್ಧಿ ಪಡಿಸಿದ್ದಾರೆ. ಪ್ರತಿ ಗ್ರಾಮ ಹಾಗೂ ಪಟ್ಟಣಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಸದ್ಯ ಭೂಮಿಪೂಜೆ ಕೈಗೊಂಡ ಮೆಗಾ ಮಾರುಕಟ್ಟೆ ಬೃಹತ್ ಕಟ್ಟಡವಾಗಿ ತಲೆಎತ್ತಿ ನಿಡಗುಂದಿಯ ಕಳೆ ಹೆಚ್ಚಿಸಲಿದೆ. ಮುಂಬರುವ ದಿನಗಳಲ್ಲಿ ನಿಡಗುಂದಿಯಲ್ಲಿ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ ಮಾಡಿ ತಾಲೂಕು ಮಟ್ಟದ ಎಲ್ಲ ಕಚೇರಿಗಳನ್ನು ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ವಿರೇಶ ಹಟ್ಟಿ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ನಿಡಗುಂದಿಗೆ ಸಚಿವರ ವಿಶೇಷ ಆದ್ಯತೆ ಪರಿಣಾಮ ₹3 ಕೋಟಿ ವೆಚ್ಚದ ಬೃಹತ್ ಮೆಗಾ ಮಾರುಕಟ್ಟೆ ನಿರ್ಮಾಣವಾಗುವ ಜತೆಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಸಿಸ್ ಕೇಂದ್ರ, ಪಟ್ಟಣದ ಸ್ಲಂ ಪ್ರದೇಶದಲ್ಲಿ ನಮ್ಮ ಕ್ಲಿನಿಕ್ ಉದ್ಘಾಟನೆಗೊಂಡು ಜನರ ಸೇವೆಗೆ ಲೋಕಾರ್ಪಣೆಯಾಗಿವೆ ಎಂದರು.ರುದ್ರೇಶ್ವರ ಸಂಸ್ಥಾನ ಮಠದ ರುದ್ರಮುನಿ ಶ್ರೀಗಳು, ಪ.ಪಂ ಅಧ್ಯಕ್ಷೆ ದೇಸಾಯಿ ಜಂಬಕ್ಕ, ತಹಸೀಲ್ದಾರ್ ಎ.ಡಿ ಅಮರವಾದಗಿ, ಮುಖಂಡರಾದ ಬಸಯ್ಯ ಸಾಲಿಮಠ, ಮೌಲಾಸಾಬ ಅತ್ತಾರ, ಗ್ಯಾರಂಟಿ ಸಮಿತಿ ಅಧ್ಯಕ್ಷ ಚಂದ್ರು ಹಳಮನಿ ಸೇರಿದಂತೆ ಪ.ಪಂ ಸದಸ್ಯರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.ನಿಡಗುಂದಿ ಆಲಮಟ್ಟಿ ಸೇರಿ ನಗರಸಭೆ ಮಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಿದ್ದೇನೆ. ಮುಂಬರುವ ದಿನದಲ್ಲಿ ನಗರಸಭೆಯಾಗುವ ಭರವಸೆ ಹೊಂದಲಾಗಿದೆ. ತಮ್ಮೆಲ್ಲರ ಸಹಮತದೊಂದಿಗೆ ನಿಡಗುಂದಿ ಮೆಗಾ ಮಾರುಕಟ್ಟೆಗೆ ಪರಮಪೂಜ್ಯ ಸಿದ್ದೇಶ್ವರ ಸ್ವಾಮಿಜೀಗಳ ಹೆಸರನ್ನು ಇಡಲಾಗುವುದು.

-ಶಿವಾನಂದ ಪಾಟೀಲ, ಸಚಿವ.