ನಿಡಸೋಸಿ ಶ್ರೀಗಳ ಕಿತ್ತಾಟ: 21ಕ್ಕೆ ಅಂತಿಮ ತೀರ್ಮಾನ

| Published : May 16 2025, 01:54 AM IST

ಸಾರಾಂಶ

ಉತ್ತರ ಕರ್ನಾಟಕದ ಪುರಾತನ ಇತಿಹಾಸ ಹೊಂದಿರುವ ಹಾಗೂ ದಾಸೋಹ ಪರಂಪರೆಯ ಜೊತೆಗೆ ಶಿಕ್ಷಣಕ್ಕೆ ಒತ್ತು ಕೊಟ್ಟು ಗಡಿಭಾಗದ ಭಕ್ತಿಯ ಶ್ರದ್ಧಾಕೇಂದ್ರವಾಗಿರುವ ಹುಕ್ಕೇರಿ ತಾಲೂಕಿನ ನಿಡಸೋಸಿಯ ಶ್ರೀ ದುರದುಂಡಿಶ್ವರ ಮಠದಲ್ಲಿ ಹಿರಿಯ ಮತ್ತು ಕಿರಿಯ ಶ್ರೀಗಳ ಪೀಠದ ಗುದ್ದಾಟಕ್ಕೆ ಸಮುದಾಯದ ಮುಖಂಡರು ತಾತ್ಕಾಲಿಕವಾಗಿ ಬ್ರೇಕ್‌ ಹಾಕಿದ್ದಾರೆ. ಮಾತ್ರವಲ್ಲ, ಪಟ್ಟಕ್ಕಾಗಿ ಪಟ್ಟು ಹಿಡಿದು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಕಿರಿಯ ಶ್ರೀಗಳಾದ ನಿಜಲಿಂಗೇಶ್ವರ ಶ್ರೀಗಳು ಸತ್ಯಾಗ್ರಹ ಕೈಬಿಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ/ ಸಂಕೇಶ್ವರ

ಉತ್ತರ ಕರ್ನಾಟಕದ ಪುರಾತನ ಇತಿಹಾಸ ಹೊಂದಿರುವ ಹಾಗೂ ದಾಸೋಹ ಪರಂಪರೆಯ ಜೊತೆಗೆ ಶಿಕ್ಷಣಕ್ಕೆ ಒತ್ತು ಕೊಟ್ಟು ಗಡಿಭಾಗದ ಭಕ್ತಿಯ ಶ್ರದ್ಧಾಕೇಂದ್ರವಾಗಿರುವ ಹುಕ್ಕೇರಿ ತಾಲೂಕಿನ ನಿಡಸೋಸಿಯ ಶ್ರೀ ದುರದುಂಡಿಶ್ವರ ಮಠದಲ್ಲಿ ಹಿರಿಯ ಮತ್ತು ಕಿರಿಯ ಶ್ರೀಗಳ ಪೀಠದ ಗುದ್ದಾಟಕ್ಕೆ ಸಮುದಾಯದ ಮುಖಂಡರು ತಾತ್ಕಾಲಿಕವಾಗಿ ಬ್ರೇಕ್‌ ಹಾಕಿದ್ದಾರೆ. ಮಾತ್ರವಲ್ಲ, ಪಟ್ಟಕ್ಕಾಗಿ ಪಟ್ಟು ಹಿಡಿದು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಕಿರಿಯ ಶ್ರೀಗಳಾದ ನಿಜಲಿಂಗೇಶ್ವರ ಶ್ರೀಗಳು ಸತ್ಯಾಗ್ರಹ ಕೈಬಿಟ್ಟಿದ್ದಾರೆ.

ನೂರಾರು ಕೋಟಿ ಆಸ್ತಿ ಹೊಂದಿರುವ ಮಠದ ಪಟ್ಟಕ್ಕಾಗಿ ಶ್ರೀಗಳ ನಡುವೆ ಹೋರಾಟ ನಡೆದಿತ್ತು. ನಿಡಸೋಸಿಯ ದುರದುಂಡೇಶ್ವರ ಸಿದ್ದಸಂಸ್ಥಾನ ‌ಮಠದ ಪಟ್ಟಕ್ಕಾಗಿ ‌ಹಿರಿ-ಕಿರಿ ಸ್ವಾಮೀಜಿಗಳ ನಡುವೆ ನಡೆಯುತ್ತಿದ್ದ ಅಂತರ್ಯುದ್ಧಕ್ಕೆ ಈಗ ಅಲ್ಪವಿರಾಮ ಬಿದ್ದಿದೆ. ಬೆಳಗಾವಿಯ ಜೀರಗೆ ಸಭಾಭವನದಲ್ಲಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ನೇತೃತ್ವದಲ್ಲಿ ಲಿಂಗಾಯತ ಸಮುದಾಯದ ನಾಯಕರ ಸಭೆ ಜರುಗಿತು. ಸಭೆಯಲ್ಲಿ ಶಾಸಕ ಗಣೇಶ ಹುಕ್ಕೇರಿ, ಮಾಜಿ ಸಚಿವ ಎ.ಬಿ.ಪಾಟೀಲ, ಮಾಜಿ ಸಂಸದ ರಮೇಶ ಕತ್ತಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಹಾಂತೇಶ ಕವಟಗಿಮಠ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.ಹಿರಿಯ ಮತ್ತು ಕಿರಿಯ ಶ್ರೀಗಳ ನಡುವೆ ಆರಂಭವಾಗಿರುವ ಕಿತ್ತಾಟಕ್ಕೆ ಬ್ರೇಕ್‌ ಬಿದ್ದಿದ್ದು ಮೇ 21ರಂದು ಇನ್ನೊಂದು ಸಭೆ ಮಾಡಲು ತೀರ್ಮಾನಿಸಲಾಗಿದೆ. ನಂತರ ಎಲ್ಲ ಮುಖಂಡರು ನೀಡಸೋಸಿ ಮಠಕ್ಕೆ ತೆರಳಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ನಿಜಲಿಂಗೇಶ್ವರ ಶ್ರೀಗಳಿಗೆ ಹಣ್ಣಿನ ರಸ ಕುಡಿಸುವ ಮೂಲಕ ಸತ್ಯಾಗ್ರಹಕ್ಕೆ ತೆರೆ ಎಳೆದರು. ನಿಜಲಿಂಗೇಶ್ವರ ಶ್ರೀಗಳ ಆರೋಪವೇನು?:

ಕಳೆದ 2023ರಲ್ಲಿ ನನ್ನನ್ನು ಉತ್ತರಾಧಿಕಾರಿಯಾಗಿ ಕರೆದುಕೊಂಡು ಬಂದಿದ್ದಾರೆ. ನನಗೆ ಅಧಿಕಾರ ಹಸ್ತಾಂತರ ಮಾಡದೆ ಕನಿಷ್ಠ ಸೌಜನ್ಯ ನಡವಳಿಕೆ ಅಥವಾ ಗೌರವ ನೀಡುತ್ತಿಲ್ಲ. ನನ್ನನ್ನು ನೌಕರನಂತೆ ನೋಡಿಕೊಳ್ಳತ್ತಿದ್ದಾರೆ. ನಾನು ಮಠಕ್ಕೆ ಬರುವಾಗ ಮಠದಲ್ಲಿನ ಚೆಕ್ ಮೇಲೆ ಸಹಿ ಸಮೇತವಾಗಿ ಎಲ್ಲ ಅಧಿಕಾರ ನೀಡುವುದಾಗಿ ಹೇಳಿದ್ದರು. ಪ್ರತಿ ತಿಂಗಳು ಒಂದು ಲಕ್ಷ ಹಣವನ್ನು ನನಗೆ ನೀಡುವುದಾಗಿ ಹೇಳಿದ್ದರು. ಆ ರೀತಿ ಕಾಗದ ಪತ್ರಗಳಲ್ಲಿ ನಮೂದಿಸಲಾಗಿದೆ. ಆದರೆ ಆ ರೀತಿ ನಡೆದುಕೊಳ್ಳುತ್ತಿಲ್ಲ. ಬಸವ ಜಯಂತಿ ಬಳಿಕ ಪಟ್ಟಾಧಿಕಾರ ಮಾಡುವುದಾಗಿ ಹೇಳಿದ್ದರು. ಹಿರಿಯ ಶ್ರೀಗಳು ಅವರು ಹೇಳಿದಂತೆ ನಡೆದುಕೊಳ್ಳಲಿ ಅಷ್ಟೇ ಸಾಕು ಎಂದು ಉತ್ತರಾಧಿಕಾರಿಯಾಗಿರುವ ನಿಜಲಿಂಗೇಶ್ವರ ಶ್ರೀಗಳು ಹೇಳಿದ್ದಾರೆ.ಹಿರಿಯ ಶ್ರೀಗಳು ಹೇಳಿದ್ದೇನು?:

ಹಿರಿಯ ಸ್ವಾಮಿಗಳಾದ ಶಿವಲಿಂಗೇಶ್ವರ ಶ್ರೀಗಳು ಹೇಳೋದು ಬೇರೆ. ಈ ಮಠದ ಪೀಠದಲ್ಲಿರುವ ಸ್ವಾಮಿಗಳು ಲಿಂಗೈಕ್ಯವಾದ ಬಳಿಕ ಕಿರಿಯರೊಬ್ಬರನ್ನು ಪಟ್ಟಕ್ಕೆ ಮಾಡುವ ಪರಂಪರೆಯನ್ನು ಶ್ರೀಮಠವು ಹೊಂದಿದೆ. ಆದರೆ ನಾವು ಮುಂದೆ ಒಂದು ಹೆಜ್ಜೆ ಇಟ್ಟು ಸಮಾಜ ದೊಡ್ಡದು ಎನ್ನುವ ದೃಷ್ಟಿಯಿಂದ ಕಿರಿಯರಾದ ನಿಜಲಿಂಗೇಶ್ವರ ಶ್ರೀಗಳನ್ನು ನೇಮಕ ಮಾಡಿದ್ದೇವೆ. ಆದರೆ ಅವರು ಯಾಕೋ ಇವಾಗ ಸ್ವಲ್ಪ ನಮ್ಮ ವಿರೋಧವಾಗಿ ನಡೆದುಕೊಳ್ಳುತ್ತಿದ್ದಾರೆ. ಜನರೊಳಗೆ ಬರುತ್ತಿಲ್ಲ. ಕಿರಿಯರು ನಮ್ಮ ಮೇಲೆ ವಿರೋಧವಾಗಿ ನಡೆದುಕೊಂಡ ಹಿನ್ನೆಲೆಯಲ್ಲಿ ನಾವು ಸ್ವಲ್ಪ ತಟಸ್ಥ ವಾಗಿ ಉಳಿದುಕೊಂಡಿದ್ದೇವೆ ಎಂದಿದ್ದಾರೆ.