12 ವರ್ಷಗಳ ನಂತರ ನೀಡಶೇಸಿ ಕೆರೆ ಭರ್ತಿ

| Published : Aug 10 2025, 01:33 AM IST

ಸಾರಾಂಶ

ಕೆರೆಯ ಸುತ್ತಲೂ ಹತ್ತಾರು ಗ್ರಾಮಗಳ ಸಾವಿರಾರು ಎಕರೆ ಜಮೀನುಗಳು ಇದ್ದು ಈ ಕೆರೆಯು ಭರ್ತಿ ಆಗಿರುವ ಹಿನ್ನೆಲೆಯಲ್ಲಿ ನೂರಾರು ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಲಿದೆ. ಈ ಮೂಲಕ ರೈತರ ಬಾಳು ಹಸನಾಗುತ್ತದೆ.

ಕುಷ್ಟಗಿ:

ಸುಮಾರು 12 ವರ್ಷಗಳ ನಂತರ ತಾಲೂಕಿನ ನೀಡಸೇಶಿ ಕೆರೆಯು ಮೈದುಂಬಿ ಕೊಡಿ ಹರಿದಿದ್ದು ಈ ಭಾಗದ ರೈತರ ಸಂತಸವೂ ಇಮ್ಮಡಿಯಾಗಿದೆ.

ಪಟ್ಟಣದಿಂದ ನಾಲ್ಕು ಕಿಲೋಮೀಟರ್ ದೂರದ ನಿಡಶೇಸಿ ಹಾಗೂ ಮದಲಗಟ್ಟಿಗೆ ಸೀಮಾಕ್ಕೆ ಹೊಂದಿಕೊಂಡಿರುವ ಈ ಕೆರೆಯು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ಬರುತ್ತಿದ್ದು ಇದು 327 ಎಕರೆ ವಿಸ್ತೀರ್ಣ ಹೊಂದಿದೆ. ಕಳೆದ ನಾಲ್ಕೈದು ದಿನಗಳಿಂದ ಸುರಿದ ಭಾರಿ ಮಳೆಗೆ ಕೆರೆಯ ಕೊಡಿ ತುಂಬಿ ಮೈದುಂಬಿ ಹರಿದಿದ್ದು ರೈತರಲ್ಲಿ ಸಂತಸಕ್ಕೆ ಕಾರಣವಾಯಿತು.

ಅಂತರ್ಜಲ ಹೆಚ್ಚಳ:

ಕೆರೆಯ ಸುತ್ತಲೂ ಹತ್ತಾರು ಗ್ರಾಮಗಳ ಸಾವಿರಾರು ಎಕರೆ ಜಮೀನುಗಳು ಇದ್ದು ಈ ಕೆರೆಯು ಭರ್ತಿ ಆಗಿರುವ ಹಿನ್ನೆಲೆಯಲ್ಲಿ ನೂರಾರು ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಲಿದೆ. ಈ ಮೂಲಕ ರೈತರ ಬಾಳು ಹಸನಾಗುತ್ತದೆ. 12 ವರ್ಷಗಳ ಬಳಿಕ ಕೆರೆ ತುಂಬಿದ್ದು ಸಂತಸದ ಸಂಗತಿ. ಆದರೆ, 327 ಎಕರೆ ವಿಸ್ತೀರ್ಣ ಹೊಂದಿರುವ ಕೆರೆಯಲ್ಲಿ ಬಹಳಷ್ಟು ಹೂಳು ತುಂಬಿಕೊಂಡಿದೆ. ಜತೆಗೆ ನಾನಾ ತರಹದ ಮುಳ್ಳು ಗಿಡಗಳು ಬೆಳೆದಿದ್ದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಕೆರೆಯ ಅಭಿವೃದ್ಧಿಗೆ ಮುಂದಾಗಬೇಕು. ನೀರು ಹಿಡಿದುಕೊಳ್ಳುವ ಕೆಲಸ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಕೆರೆಗೆ ಬಾಗಿನ:

ನಿಡಶೇಸಿ ಕೆರೆಗೆ ಶನಿವಾರ ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ನಿಡಶೇಸಿ ಅಭಿನವ ಕರಿಬಸವಶ್ರೀ ಬಾಗಿನ ಅರ್ಪಿಸಿದರು. ಶಾಸಕರು ಮಾತನಾಡಿ, ತುಂಬಿದ ಕೆರೆ, ಕಟ್ಟೆ, ಹಳ್ಳ-ಕೊಳ್ಳ, ನದಿಗಳಿಗೆ ಕೃತಜ್ಞತಾ ಅರ್ಪಣಾ ಮನೋಭಾವದಿಂದ ಪೂಜೆ ಸಲ್ಲಿಸುವುದು ಭಾರತೀಯ ಸಂಸ್ಕೃತಿಯಾಗಿದೆ ಎಂದರು.

ತಾಲೂಕಿನ ದೊಡ್ಡ ಕೆರೆ ಎಂದು ಹೆಸರು ವಾಸಿಯಾದ ನೀಡಶೇಸಿ ಕೆರೆ 12 ವರ್ಷ ಬಳಿಕ ತುಂಬಿರುವುದು ಸಂತಸದ ಸಂಗತಿ ಎಂದರು.

ಕೆರೆ ತುಂಬಿದರೆ ರೈತರ ಬದುಕು ಹಸನಾಗುತ್ತದೆ. ಅಂತರ್ಜಲ ಅಭಿವೃದ್ಧಿಯಾಗುತ್ತದೆ. ಸಕಾಲಕ್ಕೆ ಮಳೆ ಹೆಚ್ಚು ಬರುವಂತೆ ಮಾಡಲು ನಾವು ಪರಿಸರ ರಕ್ಷಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಕುಷ್ಟಗಿ ರೈಲ್ವೆ ಹೋರಾಟ ಸಮಿತಿ ಕಾರ್ಯದರ್ಶಿ ವೀರೇಶ ಬಂಗಾರಶೆಟ್ಟರ ಮಾತನಾಡಿ, ಆರು ವರ್ಷಗಳ ಹಿಂದೆ ತಾಲೂಕಿನ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕೆರೆ ಹೂಳೆತ್ತುವ ಕೆಲಸ ಮಾಡಲಾಗಿತ್ತು. ಈಗ ಕೆರೆ ತುಂಬಿರುವುದು ನಮ್ಮೆಲ್ಲರ ಸುದೈವವಾಗಿದೆ. ಈ ಕೆರೆಯಿಂದ ಸುತ್ತಲಿನ ಗ್ರಾಮಗಳ ಜಮೀನು, ಪ್ರಾಣಿ-ಪಕ್ಷಿಗಳಿಗೆ ಅನುಕೂಲವಾಗಲಿದೆ. ಕೆರೆ ಸಮೀಪ ಇರುವ ಎಡದಂಡೆ ಹಾಗೂ ಬಲದಂಡೆ ಕಾಲುವೆಯನ್ನು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಅಭಿವೃದ್ಧಿಪಡಿಸುವ ಮೂಲಕ ಬೇಸಿಗೆ ಸಮಯದಲ್ಲಿ ರೈತರಿಗೆ ನೀರು ಕೊಡುವ ಕೆಲಸ ಮಾಡಬೇಕು ಎಂದರು.

ಈ ವೇಳೆ ನಿಡಶೇಸಿಯ ಅಭಿನವ ಕರಿಬಸವ ಶ್ರೀ, ತಹಸೀಲ್ದಾರ್‌ ಅಶೋಕ ಶಿಗ್ಗಾಂವಿ, ಪುರಸಭೆ ಅಧ್ಯಕ್ಷ ಮಹಾಂತೇಶ ಕಲಭಾವಿ, ದೊಡ್ಡಬಸವನಗೌಡ ಬಯ್ಯಾಪುರು, ದೇವೇಂದ್ರಪ್ಪ ಬಳೂಟಗಿ, ಫಕೀರಪ್ಪ ವಕೀಲರು, ಪರಸಪ್ಪ ಕತ್ತಿ, ವೀರೇಶ ಬಂಗಾರಶೆಟ್ಟರ, ಜಗನ್ನಾಥ ಗೋತಗಿ, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಗಿರಿಜಾ ಮಾಲಿಪಾಟೀಲ, ಉಪಾಧ್ಯಕ್ಷೆ ಶಾರದಾ ಶೆಟ್ಟರ್‌ ಹಾಗೂ ಪದಾಧಿಕಾರಿಗಳು, ನೀರಾವರಿ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.