ನಿಡಿಗಲ್‌ ಸೇತುವೆ ತ್ಯಾಜ್ಯ ವಿಲೇವಾರಿ ಕಾರ್ಯಕ್ರಮ ಶುರು

| Published : Feb 28 2025, 12:45 AM IST

ಸಾರಾಂಶ

ನಿಡಿಗಲ್‌ನಲ್ಲಿ ಹಳೆ ಹಾಗೂ ಹೊಸ ಸೇತುವೆಗಳಲ್ಲಿ ಭಾರಿ ತ್ಯಾಜ್ಯ ತುಂಬಿದ್ದು, ಇದು ಕಿಂಡಿಅಣೆಕಟ್ಟಿನ ನೀರನ್ನು ಸೇರುವ ಸಾಧ್ಯತೆ ಕುರಿತು ಫೆ.20ರ ‘ಕನ್ನಡಪ್ರಭ’ ವಿಶೇಷ ವರದಿ ಪ್ರಕಟಿಸಿ ಆಡಳಿತದ ಗಮನ ಸೆಳೆದಿತ್ತು. ಇದೀಗ ತೆರವು ಕಾರ್ಯಾಚರಣೆ ಶುರುವಾಗಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ನಿಡಿಗಲ್‌ನಲ್ಲಿರುವ ಸೇತುವೆಗಳ ತ್ಯಾಜ್ಯ ವಿಲೇ ಕಾರ್ಯಕ್ರಮ ಮಂಗಳವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಮುಂಡಾಜೆ ಗ್ರಾಪಂ ಅಧ್ಯಕ್ಷ ಗಣೇಶ ಬಂಗೇರ ಮಾತನಾಡಿ, ಇಲ್ಲಿನ ಹಳೆ ಹಾಗೂ ಹೊಸ ಸೇತುವೆ ಸಹಿತ ಸುತ್ತಮುತ್ತ ತುಂಬಿರುವ ತ್ಯಾಜ್ಯವನ್ನು ಕಲ್ಮಂಜ ಪಂಚಾಯಿತಿಯ ಸಹಯೋಗದಲ್ಲಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಸ್ಥಳೀಯರ ಸಹಕಾರದಲ್ಲಿ ವಿಲೇವಾರಿ ಮಾಡುವ ಕಾರ್ಯ ಕೈಗೊಂಡಿದ್ದೇವೆ. ಸೇತುವೆ ಪರಿಸರ ಸಹಿತ ಮುಂಡಾಜೆ ಮಸೀದಿ ಹತ್ತಿರ, ಸೀಟು ಅರಣ್ಯ ಪ್ರದೇಶ, ಕಾಪು ಕಿಂಡಿ ಅಣೆಕಟ್ಟಿನ ಬಳಿ ಸೋಲಾ‌ರ್ ಸಿಸಿಟಿವಿ ವ್ಯವಸ್ಥೆ ವಾರದೊಳಗೆ ಅಳವಡಿಸಲಾಗುವುದು ಎಂದರು.

ಕಲ್ಮಂಜ ಗ್ರಾಮದ ಅಧ್ಯಕ್ಷೆ ವಿಮಲಾ ಮಾತನಾಡಿ, ಎರಡು ಪಂಚಾಯಿತಿಗಳ ವ್ಯಾಪ್ತಿಗೆ ಬರುವ ಈ ಸೇತುವೆ ಪರಿಸರದಲ್ಲಿ ತ್ಯಾಜ್ಯ ತಂದು ಹಾಕುವವರಿಗೆ ಕಡಿವಾಣ ಹಾಕುವ ಉದ್ದೇಶದಿಂದ ಹಳೆ ಸೇತುವೆಯ ಎರಡು ಭಾಗಗಳಿಗೆ ಗೇಟು ಅಳವಡಿಸಲು ಚಿಂತಿಸಲಾಗಿದೆ ಎಂದರು.

ಮುಂಡಾಜೆ ಗ್ರಾಪಂ ಪಿಡಿಒ ಗಾಯತ್ರಿ, ಮಾಜಿ ಅಧ್ಯಕ್ಷೆ ದಿಶಾ ಪಟವರ್ಧನ್, ಕಲ್ಮಂಜ ಗ್ರಾಪಂ ಉಪಾಧ್ಯಕ್ಷೆ ಪೂರ್ಣಿಮಾ, ಕಾರ್ಯದರ್ಶಿ ಸರೋಜಿನಿ, ಮಾಜಿ ಅಧ್ಯಕ್ಷ ಶ್ರೀಧರ ನಿಡಿಗಲ್, ಸದಸ್ಯರು ಹಾಗೂ ಸ್ಥಳೀಯರು ಇದ್ದರು.

ಗ್ರಾಮ ಸಭೆಯಲ್ಲಿ ಚರ್ಚೆ:

ಸೇತುವೆಗಳಲ್ಲಿ ತ್ಯಾಜ್ಯ ತುಂಬಿರುವ ಕುರಿತು ಈ ತಿಂಗಳಲ್ಲಿ ನಡೆದ ಕಲ್ಮಂಜ ಹಾಗೂ ಮುಂಡಾಜೆ ಗ್ರಾಪಂ ಗ್ರಾಮ ಸಭೆಗಳಲ್ಲಿ ಭಾರಿ ಚರ್ಚೆ ನಡೆದಿತ್ತು. ಇದೀಗ ಎರಡು ಪಂಚಾಯಿತಿಗಳು ಸೇತುವೆಗಳ ಸ್ವಚ್ಛತೆಗೆ ಒತ್ತು ನೀಡಿ ಹೆಚ್ಚಿನ ಕ್ರಮಗಳಿಗೆ ಮುಂದಾಗಿವೆ.

ಇಲ್ಲಿನ ಕಿಂಡಿ ಅಣೆಕಟ್ಟಿನಲ್ಲಿ ತುಂಬಿರುವ ನೀರು ಸ್ಥಳೀಯರ ಕೃಷಿ ತೋಟ ಸಹಿತ ದಿನನಿತ್ಯದ ಉಪಯೋಗಕ್ಕೂ ಬಳಕೆಯಾಗುತ್ತಿದೆ. ಸೇತುವೆಗಳಲ್ಲಿ ಪ್ಲಾಸ್ಟಿಕ್, ಬಾಟಲಿ, ಮಾಂಸ, ಹಳೆ ಕಟ್ಟಡಗಳ ಅವಶೇಷ ಸಹಿತ ಭಾರಿ ತ್ಯಾಜ್ಯ ಸಂಗ್ರಹ ಗೊಂಡಿತ್ತು. ಸ್ವಚ್ಛತೆ ನಡೆದ ಕಾರಣ ತ್ಯಾಜ್ಯ ನದಿ ನೀರನ್ನು ಸೇರುವ ಆತಂಕ ದೂರ ವಾಗಿದೆ. ಅಲ್ಲದೆ ನೇತ್ರಾವತಿ ನದಿಯ ನಿಡಿಗಲ್ ಸೇತುವೆಗಳಿಗೆ ಕಲ್ಮಂಜ ಗ್ರಾಮ ಪಂಚಾಯಿತಿ ವತಿಯಿಂದ ಸಿಸಿಟಿವಿ ಅಳವಡಿಸಲಾಗಿದೆ.

ಎರಡು ಗ್ರಾಮ ಪಂಚಾಯಿತಿಗಳ ವತಿಯಿಂದ ಮಂಗಳವಾರ ಇಲ್ಲಿ ಸ್ವಚ್ಛತೆ ಕಾರ್ಯ ನಡೆದ ಬಳಿಕ ಕಲ್ಮಂಜ ಗ್ರಾಮ ಪಂಚಾಯಿತಿ ವತಿಯಿಂದ ಸೇತುವೆಗಳ ವ್ಯಾಪ್ತಿಗೆ ಸಿಸಿಟಿವಿ ಅಳವಡಿಸಲಾಗಿದೆ. ಇದರ ಚಿತ್ರಣಗಳು ಪಂಚಾಯಿತಿ ಹಾಗೂ ಅಗತ್ಯ ಸಿಬ್ಬಂದಿಗೆ ರವಾನೆಯಾಗುತ್ತವೆ. ಇದು ತ್ಯಾಜ್ಯ ತಂದು ಸುರಿಯುವವರ ವಿರುದ್ಧ ಕ್ರಮ ಕೈಗೊಳ್ಳಲು ಮಾಡಿರುವ ವ್ಯವಸ್ಥೆಯಾಗಿದ್ದು, ನದಿಯಲ್ಲಿ ಸಂಗ್ರಹಗೊಂಡಿರುವ ನೀರನ್ನು ಕಲುಷಿತಗೊಳ್ಳದಂತೆ ಕಾಪಾಡುವುದು ಪಂಚಾಯಿತಿಯ ಕರ್ತವ್ಯವಾಗಿದೆ ಎಂದು ಕಲ್ಮಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಮಲಾ ತಿಳಿಸಿದ್ದಾರೆ.

ನಿಡಿಗಲ್ ಸೇತುವೆ ಕಲ್ಮಂಜ ಮತ್ತು ಮುಂಡಾಜೆ ಗ್ರಾಪಂ ವ್ಯಾಪ್ತಿಯಲ್ಲಿದ್ದು, ಇಲ್ಲಿ ಕಾಯರ್ತೋಡಿ ವಾಳ್ಯಸ್ಥರ ಕೃಷಿ ನೀರಿನ ಕಿಂಡಿ ಅಣೆಕಟ್ಟು ಇದೆ.

ಇಲ್ಲಿ ಹಲಗೆ ಇಳಿಸಿ ನೀರು ಸಂಗ್ರಹಿಸಲಾಗಿದೆ. ನಿಡಿಗಲ್‌ನಲ್ಲಿ ಹಳೆ ಹಾಗೂ ಹೊಸ ಸೇತುವೆಗಳಲ್ಲಿ ಭಾರಿ ತ್ಯಾಜ್ಯ ತುಂಬಿದ್ದು, ಇದು ಕಿಂಡಿಅಣೆಕಟ್ಟಿನ ನೀರನ್ನು ಸೇರುವ ಸಾಧ್ಯತೆ ಕುರಿತು ಫೆ.20ರ ‘ಕನ್ನಡಪ್ರಭ’ ವಿಶೇಷ ವರದಿ ಪ್ರಕಟಿಸಿ ಆಡಳಿತದ ಗಮನ ಸೆಳೆದಿತ್ತು.