ಕೊಬ್ಬರಿ ಖರೀದಿ ನೋಂದಣಿಗಾಗಿ ರೈತರಿಂದ ರಾತ್ರಿಯಿಡಿ ಜಾಗರಣೆ

| Published : Mar 05 2024, 01:38 AM IST

ಸಾರಾಂಶ

ನಾಫೆಡ್ ಮೂಲಕ ಕೊಬರಿ ಖರೀದಿಸಲಾಗುವುದು ಎಂಬ ಸರ್ಕಾರಿ ಸುತ್ತೋಲೆಯಿಂದ ರೈತರಿಗೆ ಒಂದೆಡೆ ಸಂತಸವಾದರೆ, ಇನ್ನೊಂದೆಡೆ ನೋದಣಿ ಮಾಡಿಸುವುದು ದೊಡ್ಡ ಸವಾಲಾಗಿದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ನಾಫೆಡ್ ಮೂಲಕ ಕೊಬರಿ ಖರೀದಿಸಲಾಗುವುದು ಎಂಬ ಸರ್ಕಾರಿ ಸುತ್ತೋಲೆಯಿಂದ ರೈತರಿಗೆ ಒಂದೆಡೆ ಸಂತಸವಾದರೆ, ಇನ್ನೊಂದೆಡೆ ನೋದಣಿ ಮಾಡಿಸುವುದು ದೊಡ್ಡ ಸವಾಲಾಗಿದೆ. ರಾಜ್ಯದ ಸುಮಾರು ೧೩ ಜಿಲ್ಲೆಗಳಲ್ಲಿ ತೆಂಗು ಬೆಳೆಯುತ್ತಿದ್ದು, ತುಮಕೂರು ಮತ್ತು ಹಾಸನ ಜಿಲ್ಲೆಯಲ್ಲಿ ತೆಂಗು ಉತ್ಪಾದನೆ ಹೆಚ್ಚಿದೆ. ಕೇಂದ್ರ ಸರ್ಕಾರ ಈ ಎಲ್ಲಾ ಜಿಲ್ಲೆಗಳಿಂದ ಸುಮಾರು ೭೦ ಸಾವಿರ ಮೆಟ್ರಿಕ್ ಟನ್ ಕೊಬರಿ ನಾಫೆಡ್ ಮೂಲಕ ಕೊಳ್ಳಲು ಮುಂದಾಗಿದೆ. ತುಮಕೂರು ಜಿಲ್ಲೆಯಿಂದ ಸುಮಾರು ೧೫೦೦೦ ಮೆಟ್ರಿಕ್ ಟನ್ ಕೊಬರಿಯನ್ನು ಖರೀದಿಸಲು ಸೂಚನೆ ನೀಡಿದೆ.

ಸೋಮವಾರದಿಂದ ನೋಂದಣಿ ಕಾರ್ಯ ಆರಂಭವಾಗಿರುವುದರಿಂದ ರೈತರು ಭಾನುವಾರ ಬೆಳಗ್ಗೆಯಿಂದಲೇ ನೋಂದಣಿ ಕೇಂದ್ರಗಳ ಬಳಿ ಜಮಾಯಿಸಿದರು. ಮಧ್ಯಾಹ್ನವೂ ಬಿಸಿಲನ್ನು ಲೆಕ್ಕಿಸದೇ ನೋಂದಣಿ ಮಾಡಿಸಲು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಸೊಳ್ಳೆ, ಚಳಿಯ ಕಾಟದಲ್ಲೂ ಸಹ ನೋದಣಿಗಾಗಿ ರಾತ್ರಿಯಿಡೀ ಕಾದು ಕುಳಿತುಕೊಳ್ಳತೊಡಗಿದ್ದಾರೆ. ಜಮೀನು ಯಾರ ಹೆಸರಿನಲ್ಲಿ ಇರುತ್ತದೆಯೋ ಅವರೇ ನೋಂದಣಿ ಕೇಂದ್ರಕ್ಕೆ ಹಾಜರಾಗಿ ನೋಂದಣಿ ಮಾಡಿಸಬೇಕಾಗಿರುವುದರಿಂದ ಮಹಿಳೆಯರೂ ಸಹ ರಾತಿ ಇಡೀ ಕೇಂದ್ರದ ಬಳಿ ಕಾದು ಕುಳಿತ್ತಿದ್ದ ದೃಶ್ಯ ಕಂಡು ಬಂತು. ನೀರು ನೆರಳಿಲ್ಲದೆ ಹೈರಾಣು:

ಭಾನುವಾರ ಮಧ್ಯಾಹ್ನದಿಂದಲೇ ಕಾದು ಕುಳಿತಿರುವ ರೈತರು, ನೆರಳು, ನೀರು, ಶೌಚಾಲಯದ ವ್ಯವಸ್ಥೆ, ಹೋಟೆಲ್ ಯಾವುದೇ ಸೌಕರ್ಯವಿಲ್ಲ ದೇ ಹೈರಾಣಾಗಿ ಹೋಗಿದ್ದಾರೆ. ಸೋಮವಾರ ಬೆಳಗ್ಗೆ ನೋಂದಣಿ ಕಾರ್ಯ ಆರಂಭಗೊಳ್ಳುತ್ತಿದ್ದಂತೆ ಜನಜಂಗುಳಿ ಹೆಚ್ಚಿದೆ. ತಾಲೂಕಿನ ನಾಲ್ಕು ಹೋಬಳಿ ಕೇಂದ್ರಗಳಲ್ಲೂ ನೋಂದಣಿ ಕಾರ್ಯ ಮಾಡಲಾಗುತ್ತಿದೆ. ಎಲ್ಲಾ ಕೇಂದ್ರಗಳಲ್ಲೂ ನೂಕುನುಗ್ಗಲು. ಮಹಿಳೆಯರೂ ಸಹ ನೋಂದಣಿ ಮಾಡಿಸಿಕೊಳ್ಳಲು ಆಗಮಿಸಿದ್ದರೂ ಸಹ ಅದು ಸಾಧ್ಯವಾಗದೇ ಎಷ್ಟೋ ರೈತ ಮಹಿಳೆಯರು ವಾಪಸ್ಸು ಹೋದರು. ನ್ಯಾಫೆಡ್ ಗೆ ಕೊಬರಿ ಬಿಡುವುದೂ ಬೇಡ, ಅವರ ದುಡ್ಡೂ ಬೇಡ. ಸದ್ಯ ಜೀವ ಉಳಿದರೆ ಸಾಕು ಎಂದು ಗುಡ್ಡೇನಹಳ್ಳಿಯ ಸಾವಿತ್ರಮ್ಮ ಎಂಬುವವರು ಕೈ ಮುಗಿದು ಮನೆಯತ್ತ ಹೊರಟೇ ಬಿಟ್ಟರು.

ಕೊಬರಿ ಬೆಲೆ ಸಂಪೂರ್ಣವಾಗಿ ನೆಲ ಕಚ್ಚಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಪ್ರೋತ್ಸಾಹ ಧನವನ್ನು ರೈತರ ಬೆಳೆ ಆಧರಿಸಿ ಅವರ ಖಾತೆಗೆ ನೇರವಾಗಿ ಜಮಾ ಮಾಡಬೇಕು. ತಾಲೂಕಿನ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಆದರೆ ರೈತಾಪಿಗಳಿಗೆ ಸೂಕ್ತ ಮೂಲಭೂತ ವ್ಯವಸ್ಥೆ ಕಲ್ಪಿಸದೇ ಅನ್ನದಾತರನ್ನು ನಿರ್ಲಕ್ಷ್ಯ ಮಾಡಲಾಗಿದೆ. ಕನಿಷ್ಠ ಗೌರವವೂ ಸಿಗದಂತಾಗಿದೆ. ಕೂಡಲೇ ಅಗತ್ಯ ಮೂಲಭೂತ ಸೌಕರ್ಯವನ್ನೂ ನೀಡದಿದ್ದಲ್ಲಿ ತಾಲೂಕು ಆಡಳಿತದ ವಿರುದ್ಧ ಪ್ರತಿಭಟನೆ ಮಾಡಬೇಕಾದೀತು ತಾಲೂಕು ತೆಂಗು ಮತ್ತು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಎನ್.ಆರ್.ಜಯರಾಮ್ ಎಚ್ಚರಿಸಿದ್ದಾರೆ.