ಸಾರಾಂಶ
ಶಿವಮೊಗ್ಗ: ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜು.23ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳ್ ಗೋಪಾಲ್ ಹೇಳಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪಕ್ಷವನ್ನು ಸದೃಢವಾಗಿ ಕಟ್ಟಲು, ಜನರೊಂದಿಗೆ ಜನತಾದಳ ಧ್ಯೇಯ ವಾಕ್ಯದೊಂದಿಗೆ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು, ಈಗಾಗಲೇ 12 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, 23ರಂದು ಜಿಲ್ಲೆಗೆ ಆಗಮಿಸುವ ಅವರು ಜಿಲ್ಲೆಯ 3 ವಿಧಾನಸಭಾ ಕ್ಷೇತ್ರಗಳಲ್ಲಿ ಭೇಟಿ ನೀಡಿ ಪಕ್ಷ ಸಂಘಟನೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದರು.ಅಂದು ಬೆಳಗ್ಗೆ 10.30ಕ್ಕೆ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಲ್ಲಾಪುರ ಗ್ರಾಮದ ಗುಡ್ಡದ ಮಲ್ಲೇಶ್ವರ ಸಮುದಾಯ ಭವನದಲ್ಲಿ ಕಾರ್ಯಕರ್ತರ ಸಮಾವೇಶವು ಶಾಸಕಿ ಶಾರದಾ ಪೂರ್ಯಾನಾಯ್ಕ ಅವರ ನೇತೃತ್ವದಲ್ಲಿ, ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಕಾರ್ಯಕರ್ತರ ಸಮಾವೇಶ ಪಕ್ಷದ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ನೇತೃತ್ವದಲ್ಲಿ ಹಾಗೂ ಸಂಜೆ 5.30ಕ್ಕೆ ಭದ್ರಾವತಿಯ ಮಂಜುನಾಥ ಕಲ್ಯಾಣ ಮಂದಿರದಲ್ಲಿ ಕಾರ್ಯಕರ್ತರ ಸಮಾವೇಶ ಪಕ್ಷದ ನಾಯಕಿ ಶಾರದಾ ಅಪ್ಪಾಜಿ ನೇತೃತ್ವದಲ್ಲಿ ಜರುಗಲಿದ್ದು, ಈ ಎಲ್ಲಾ ಸಮಾವೇಶಗಳಲ್ಲಿ ಜೆಡಿಎಸ್ ಶಾಸಕರಾದ ಸಿ.ಎಸ್.ಸುರೇಶ್ ಬಾಬು, ಭೋಜೇಗೌಡ, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ ಸೇರಿದಂತೆ ರಾಜ್ಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಕಾರ್ಯಕರ್ತರೊಂದಿಗೆ ಪಕ್ಷದ ಸಂಘಟನೆ ಬಗ್ಗೆ ಚರ್ಚೆ, ಸದಸ್ಯತ್ವ ನೋಂದಣಿ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ಸಮಾವೇಶಗಳಲ್ಲಿ ಪಕ್ಷದ ಜಿಲ್ಲೆಯ ಮುಖಂಡರು, ಯುವ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆ, ನಾಗರಿಕರ ಸಮಸ್ಯೆ, ಯಾವ ತಾಲೂಕಿನಲ್ಲಿ ಅಭಿವೃದ್ಧಿಯಾಗಬೇಕು ಎಂಬ ಬಗ್ಗೆ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ನಿಖಿಲ್ ಕುಮಾರಸ್ವಾಮಿ ಚರ್ಚೆ ನಡೆಸುವುದರಲ್ಲದೇ, ಪಕ್ಷವನ್ನು ಸದೃಢವಾಗಿ ಕಟ್ಟಲು ಹಾಗೂ ಜನರ ಆಶೋತ್ತರಗಳಿಗೆ ಸ್ಪಂದಿಸಲಿದ್ದಾರೆ ಎಂದು ಹೇಳಿದರು.ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್ ಮಾತನಾಡಿ, ಭದ್ರಾವತಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಯುವ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿಡ ಅವರು, ಸುಮಾರು ೫ ಸಾವಿರಕ್ಕೂ ಅಧಿಕ ಕಾರ್ಯಕರ್ತರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ನಗರ ಜೆಡಿಎಸ್ ಘಟಕದ ಅಧ್ಯಕ್ಷ ದೀಪಕ್ ಸಿಂಗ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ಪ್ರಮುಖರಾದ ಕೆ.ಎನ್.ರಾಮಕೃಷ್ಣ, ತ್ಯಾಗರಾಜ್, ನಾಗೇಶ್, ಎಚ್.ಎಂ.ಸಂಗಯ್ಯ, ಅಬ್ದುಲ್ ವಾಜಿದ್, ಸಂಜಯ್ ಕಶ್ಯಪ್, ರಾಕೇಶ್ ಡಿಸೋಜ, ನರಸಿಂಹ ಗಂಧದಮನೆ, ಜಯಣ್ಣ, ಲೋಹಿತ್, ಯೋಗೇಶ್ ಇನ್ನಿತರರು ಉಪಸ್ಥಿತರಿದ್ದರು.