ಅಂಬೇಡ್ಕರ್‌ ಅಧ್ಯಯನ ಸಂಸ್ಥೆಗೆ ಜಾಗ ಮಂಜೂರಿಗೆ ನಿಂಗಯ್ಯ ಒತ್ತಾಯ

| Published : Jul 12 2024, 01:36 AM IST

ಅಂಬೇಡ್ಕರ್‌ ಅಧ್ಯಯನ ಸಂಸ್ಥೆಗೆ ಜಾಗ ಮಂಜೂರಿಗೆ ನಿಂಗಯ್ಯ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಎಸ್ಸಿ, ಎಸ್ಟಿ ಸಮುದಾಯಗಳ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಸಂಸ್ಥೆಗೆ ಜಾಗವನ್ನು ಮಂಜೂರು ಮಾಡಬೇಕೆಂದು ಸಂಸ್ಥೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಿ.ಬಿ. ನಿಂಗಯ್ಯ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ನಿಯೋಗದಿಂದ ಶಾಸಕ ಎಚ್.ಡಿ. ತಮ್ಮಯ್ಯ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಎಸ್ಸಿ, ಎಸ್ಟಿ ಸಮುದಾಯಗಳ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಸಂಸ್ಥೆಗೆ ಜಾಗವನ್ನು ಮಂಜೂರು ಮಾಡಬೇಕೆಂದು ಸಂಸ್ಥೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಿ.ಬಿ. ನಿಂಗಯ್ಯ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್.ಡಿ. ತಮ್ಮಯ್ಯ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ನಿಯೋಗದ ಮೂಲಕ ಭೇಟಿ ಮಾಡಿ ಆಗ್ರಹಿಸಲಾಗುವುದು ಎಂದು ಹೇಳಿದರು.

ಎಸ್ಸಿ, ಎಸ್ಟಿ. ಸಮುದಾಯಗಳ ಶ್ರೇಯೋಭಿವೃದ್ಧಿ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಶೋಷಿತ ವರ್ಗಗಳ ಪರವಾಗಿ ಜಾಗೃತಿ ಮೂಡಿಸುವ ಹಲವಾರು ಉದ್ದೇಶಗಳೊಂದಿಗೆ ಕೆಲವು ಸಮಾನ ಮನಸ್ಕ ಮುಖಂಡರು ಸೇರಿ ಸುಮಾರು 10 ವರ್ಷಗಳ ಹಿಂದೆ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಸಂಸ್ಥೆಯನ್ನು ಮೂಡಿಗೆರೆಯಲ್ಲಿ ಸ್ಥಾಪನೆ ಮಾಡಲಾಯಿತು ಎಂದರು.

ಚಿಕ್ಕಮಗಳೂರು ಜಿಲ್ಲೆಯನ್ನು ಕೇಂದ್ರವಾಗಿಕೊಂಡು ಹಾಸನ, ಮಡಿಕೇರಿ, ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯನ್ನು ಈ ಸಂಸ್ಥೆ ಹೊಂದಿದೆ. ಸಹಕಾರ ಇಲಾಖೆ ಕಾಯ್ದೆ ಅಡಿ ನೋಂದಾಯಿಸಿದ ಸಂಸ್ಥೆಯಾಗಿದೆ. ನಗರ ಸಮೀಪದ ತೇಗೂರಿನಲ್ಲಿ ಗುರುತಿಸಿ ಕೊಂಡಿರುವ ಸರ್ಕಾರಿ ಜಾಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಭಗವಾನ್ ಬುದ್ಧರ ಮೂರ್ತಿ ಪ್ರತಿಷ್ಠಾಪನೆ ಮಾಡಿ ಬುದ್ಧ ವಿಹಾರ ಆರಂಭಿಸಲಾಗಿದ್ದು, ಇದೇ ಸ್ಥಳದಲ್ಲಿ ಅಂಬೇಡ್ಕರ್, ಬಸವೇಶ್ವರ ಹಾಗೂ ಬುದ್ಧ ಪೂರ್ಣಿಮಾ ಕಾರ್ಯಕ್ರಮ ನಡೆಸಿ ಕೊಂಡು ಬರಲಾಗಿದೆ. ಈ ಸ್ಥಳವನ್ನು ಸಂಸ್ಥೆಗೆ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತವೆ ಎಂದು ಹೇಳಿದರು.

ಸಂಸ್ಥೆ ಮುಂದಿನ ದಿನಗಳಲ್ಲಿ ಹಲವಾರು ಕಾರ್ಯ ಚಟುವಟಿಕೆ ನಡೆಸುವ ಉದ್ದೇಶದಿಂದ ತರಬೇತಿ ಸಮಿತಿ, ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಸಮಿತಿ, ಅಪಮಾನಕ್ಕೆ ಒಳಗಾದ ಜನರಿಗೆ ತಿಳುವಳಿಕೆಗೆ ಧಾರ್ಮಿಕ ಸಮಿತಿ, ಸಾಂಸ್ಕೃತಿಕ ಸಮಿತಿ ರಚನೆ ಹಾಗೂ ಮುಂದಿನ ದಿನಗಳಲ್ಲಿ ಸದಸ್ಯತ್ವ ಆಂದೋಲನ ಮಾಡುವ ಉದ್ದೇಶವಿದೆ ಎಂದು ತಿಳಿಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡಿ ಅತಿ ಹೆಚ್ಚು ಅಂಕ ಪಡೆದು ಜಿಲ್ಲೆಗೆ ಟಾಪರ್ ಆಗಿರುವ ಎಲ್ಲಾ ಜನಾಂಗದ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಪ್ರತಿಭಾ ಪುರಸ್ಕಾರ ನೀಡಲು ಉದ್ದೇಶಿಸಲಾಗಿದೆ. ಈ ತಿಂಗಳ ಅಂತ್ಯದಲ್ಲಿ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ದಂಟರಮಕ್ಕಿ ಶ್ರೀನಿವಾಸ್‌, ಮರ್ಲೆ ಅಣ್ಣಯ್ಯ, ಮಲ್ಲೇಶ್‌ಸ್ವಾಮಿ, ನಿಖಿಲ್ ಚಕ್ರವರ್ತಿ, ರಘು, ಲಕ್ಷ್ಮಣ್‌, ಹರೀಶ್‌ ಮಿತ್ರಾ ಇದ್ದರು.ಪೋಟೋ ಫೈಲ್‌ ನೇಮ್‌ 11 ಕೆಸಿಕೆಎಂ 2