ನೀರಲ್ಲಿ ನಿಂತು ನೀರಗುಂದ ಗ್ರಾಮಸ್ಥರ ಪ್ರತಿಭಟನೆ

| Published : Jan 18 2025, 12:47 AM IST

ಸಾರಾಂಶ

ಸ್ವಾಮಿ ನಮ್ಮೂರ ರಸ್ತೆ ಮತ್ತು ಸೇತುವೆ ಮಾಡ್ಸಿ ಅಂತ ಹತ್ತಾರು ವರ್ಷದಿಂದ ಕೇಳ್ತಾನೇ ಇದ್ದೀವಿ. ಇದುವರೆಗೂ ಯಾರೂ ತಲೆಕೆಡೆಸಿಕೊಂಡಿಲ್ಲ. ಪ್ರತಿದಿನ ಜನರು ಪ್ರಾಣ ಬಿಗಿಹಿಡಿದೇ ಓಡಾಡುವ ಸ್ಥಿತಿ ಬಂದಿದೆ. ಕೂಡಲೇ ರಸ್ತೆ ಮತ್ತು ಸೇತುವೆ ನಿರ್ಮಾಣ ಮಾಡದಿದ್ದರೆ ಹೆದ್ದಾರಿ ತಡೆದು ಪ್ರತಿಭಟನೆ ಮಾಡುವುದಂತೂ ಗ್ಯಾರಂಟಿ ಎನ್ನುತ್ತಾರೆ ನೀರಗುಂದ ಗ್ರಾಮದ ನಿವಾಸಿಗಳು.

ಕನ್ನಡಪ್ರಭವಾರ್ತೆ ತುರುವೇಕೆರೆ

ಸ್ವಾಮಿ ನಮ್ಮೂರ ರಸ್ತೆ ಮತ್ತು ಸೇತುವೆ ಮಾಡ್ಸಿ ಅಂತ ಹತ್ತಾರು ವರ್ಷದಿಂದ ಕೇಳ್ತಾನೇ ಇದ್ದೀವಿ. ಇದುವರೆಗೂ ಯಾರೂ ತಲೆಕೆಡೆಸಿಕೊಂಡಿಲ್ಲ. ಪ್ರತಿದಿನ ಜನರು ಪ್ರಾಣ ಬಿಗಿಹಿಡಿದೇ ಓಡಾಡುವ ಸ್ಥಿತಿ ಬಂದಿದೆ. ಕೂಡಲೇ ರಸ್ತೆ ಮತ್ತು ಸೇತುವೆ ನಿರ್ಮಾಣ ಮಾಡದಿದ್ದರೆ ಹೆದ್ದಾರಿ ತಡೆದು ಪ್ರತಿಭಟನೆ ಮಾಡುವುದಂತೂ ಗ್ಯಾರಂಟಿ ಎನ್ನುತ್ತಾರೆ ನೀರಗುಂದ ಗ್ರಾಮದ ನಿವಾಸಿಗಳು.

ಗ್ರಾಮದ ಕೆರೆಯ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಹತ್ತಾರು ವರ್ಷಗಳಿಂದ ಈ ರಸ್ತೆಯನ್ನು ದುರಸ್ತಿಪಡಿಸಿ, ಸೇತುವೆ ನಿರ್ಮಾಣ ಮಾಡಿ ಎಂದು ಸಾಕಷ್ಟು ಬಾರಿ ಕೇಳಿಕೊಂಡರೂ ಪ್ರಯೋಜನವಾಗಿಲ್ಲ. ಪ್ರತಿದಿನ ಜನರು ಓಡಾಡಲೂ ಅಸಾಧ್ಯವಾಗಿದೆ. ರಸ್ತೆ ತುಂಬಾ ನೀರು ನಿಂತಿರುತ್ತದೆ. ಗುಂಡಿಗಳು ತುಂಬಿವೆ. ಮಳೆಗಾಲದಲ್ಲಂತೂ ಈ ಪ್ರದೇಶದಲ್ಲಿ ಓಡಾಡಲು ಸಾಧ್ಯವೇ ಇಲ್ಲ. ಮುನ್ನೂರು ಮೀಟರ್ ದೂರ ಕ್ರಮಿಸುವ ರಸ್ತೆ ಸರಿಯಿಲ್ಲದ ಕಾರಣ ಸುಮಾರು ಐದು ಕಿಮೀ ದೂರ ಸಾಗಬೇಕಿದೆ. ರಸ್ತೆಯ ಮಧ್ಯೆ ನೀರು ತುಂಬಿರುವ ಕಾರಣ ಮತ್ತು ಗುಂಡಿಗಳು ಇರುವ ಕಾರಣಕ್ಕೆ ದ್ವಿ ಚಕ್ರ ವಾಹನಗಳು ಓಡಾಡಲು ಕಷ್ಟವಾಗಿದೆ. ರಸ್ತೆ ಮಧ್ಯೆ ಹಾಕಿರುವ ಚಪ್ಪಡಿ ಕಲ್ಲುಗಳು ಒಡೆದು ಹೋಗಿರುವುದರಿಂದ ವಾಹನಗಳನ್ನು ಸರಾಗವಾಗಿ ಚಾಲನೆ ಮಾಡಲು ಅಸಾಧ್ಯವಾಗಿದೆ. ಇನ್ನು ನಡೆದಾಡಿಕೊಂಡು ಹೋಗುವವರ ಸ್ಥಿತಿಯಂತೂ ಕೇಳುವ ಹಾಗೇ ಇಲ್ಲ. ಅದೆಷ್ಟೋ ಮಂದಿ ವಾಹನದಿಂದ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆಂದು ಲೋಕಮ್ಮನಹಳ್ಳಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷರೂ ಹಾಗೂ ಈ ನೀರಗುಂದ ಕ್ಷೇತ್ರದ ಗ್ರಾಮ ಪಂಚಾಯ್ತಿ ಸದಸ್ಯರೂ ಆಗಿರುವ ಆರ್.ಅಲ್ಲಪ್ಪ ಕಳವಳ ವ್ಯಕ್ತಪಡಿಸಿದ್ದಾರೆ.ಗ್ರಾಮಕ್ಕೆ ಕೆಎಸ್ ಆರ್ ಟಿಸಿ ಬಸ್ ಬಂದು ಎಷ್ಟೋ ವರ್ಷಗಳು ಆಗಿವೆ. ಇಲ್ಲಿಯ ರಸ್ತೆ ಸರಿಯಿಲ್ಲದ ಕಾರಣ ಬಸ್ ಇಲ್ಲಿಗೆ ಬರುತ್ತಿಲ್ಲ. ಪ್ರತಿದಿನಾ ಶಾಲಾ ಕಾಲೇಜಿಗೆ ಹೋಗುವ ಮಕ್ಕಳನ್ನು ಪೋಷಕರು ತಮ್ಮ ವಾಹನಗಳಲ್ಲಿ ಕರೆ ತರಬೇಕಿದೆ. ರಸ್ತೆ ಸರಿಯಿಲ್ಲದ ಕಾರಣ ಬಸ್ ಓಡಿಸಲು ಸಾಧ್ಯವಿಲ್ಲ ಎಂದು ಕೆ ಎಸ್ ಆರ್ ಟಿ ಸಿ ಯ ಅಧಿಕಾರಿಗಳು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಗ್ರಾಮದಲ್ಲಿ ಯಾರಿಗಾದರೂ ಆರೋಗ್ಯ ತಪ್ಪಿದರೆ ಅವರನ್ನು ಪಟ್ಟಣಕ್ಕೆ ಕರೆದುಕೊಂಡು ಹೋಗುವುದಂತೂ ಅಸಾಧ್ಯದ ಮಾತಾಗಿದೆ. ರಸ್ತೆ ಸರಿಯಿಲ್ಲದ ಕಾರಣ ನೀರಗುಂದ, ಅಜ್ಜೇನಹಳ್ಳಿ, ಗೊಲ್ಲರಹಟ್ಟಿ, ಸೋಮಲಾಪುರ, ಅರಳಗುಪ್ಪೆ, ಹೊಸಳ್ಳಿ, ವೆಂಕಟಾಪುರ, ಮುದ್ಲಾಪುರ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಸಂಚರಿಸಲು ತೊಂದರೆಯಾಗಿದೆ

ಮುಂದೂಡಿಕೆ: ಈ ಗ್ರಾಮದಲ್ಲಿ ರಸ್ತೆ ಮತ್ತು ಸೇತುವೆ ಮಾಡಲು ಎರಡು ಮೂರು ಬಾರಿ ಭೂಮಿ ಪೂಜೆ ಮಾಡಲಾಗಿತ್ತು. ಆದರೂ ಸಹ ಇನ್ನೂ ಕಾಮಗಾರಿ ಆರಂಭವೇ ಆಗಿಲ್ಲ. ಇಲ್ಲಿನ ಸಮಸ್ಯೆ ಗೊತ್ತಿದ್ದೂ ಸಹ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜಾಣಕುರುಡರಂತೆ ವರ್ತಿಸುತ್ತಿದ್ದಾರೆಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಈ ರಸ್ತೆಯ ಮೇಲೆ ಚರಂಡಿಯ ನೀರೂ ಹರಿಯುತ್ತಿದೆ. ಚರಂಡಿಯ ನೀರು ಸರಾಗವಾಗಿ ಬೇರೆಡೆ ಹೋಗದ ಕಾರಣ ರಸ್ತೆಯ ಮೇಲೆ ನಿಂತು ದಾರಿ ಹೋಕರ ಮೇಲೆಲ್ಲಾ ಬೀಳುತ್ತಿದೆ.

ಗ್ರಾಮಕ್ಕೆ ರಸ್ತೆ ಮತ್ತು ಸೇತುವೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಗ್ರಾಮದ ಹಲವಾರು ಮಂದಿ ಕೆಲ ಕಾಲ ನೀರಿನೊಳಗೇ ನಿಂತು ಘೋಷಣೆ ಕೂಗಿದರು. ಶೀಘ್ರವಾಗಿ ಕಾಮಗಾರಿ ಕೈಗೊಳ್ಳದಿದ್ದಲ್ಲಿ ತುರುವೇಕೆರೆಯಿಂದ ಕೆಬಿ ಕ್ರಾಸ್ ಕಡೆ ತೆರಳುವ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ಮಾಡುವುದು ಅನಿವಾರ್ಯವಾಗಲಿದೆ ಎಂದೂ ಸಹ ಗ್ರಾಮಸ್ಥರು ಎಚ್ಚರಿಕೆ ನೀಡಿದರು. ಈ ಸಂಧರ್ಭದಲ್ಲಿ ಗ್ರಾಮದ ಮುಖಂಡರಾದ ಶಿವಲಿಂಗಪ್ಪ, ಮಹಲಿಂಗಪ್ಪ, ಚಂದ್ರಪ್ಪ, ನಟರಾಜ್, ಓಂ ಶಿವಯ್ಯ, ಶಂಕರಣ್ಣ, ರಮೇಶ್, ಪಟೇಲ್ ದಯಾನಂದ್ ಸೇರಿದಂತೆ ಹಲವಾರು ಮಂದಿ ಇದ್ದರು.