ರೈತರ ಶ್ರೇಯೋಭಿವೃದ್ಧಿಗಾಗಿ ನಿರಾಣಿ ಸಮೂಹ ಸಂಸ್ಥೆ

| Published : Nov 05 2024, 01:31 AM IST / Updated: Nov 05 2024, 01:32 AM IST

ಸಾರಾಂಶ

ರೈತರ ಶ್ರೇಯೋಭಿವೃದ್ಧಿಗೆ ನಿರಾಣಿ ಸಮೂಹ ಸಂಸ್ಥೆಯು ನಿರಂತರ ಶ್ರಮಿಸುತ್ತಿದ್ದು, ನಿಮ್ಮೊಡನೆ ನಾವು ಅಭಿವೃದ್ಧಿಯೆಡೆಗೆ ಹೆಜ್ಜೆ ಹಾಕುತ್ತಿದ್ದೇವೆ ಎಂದು ನಿರಾಣಿ ಸಮೂಹ ಸಂಸ್ಥೆಯ ಸಂಸ್ಥಾಪಕ, ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ರೈತರ ಶ್ರೇಯೋಭಿವೃದ್ಧಿಗೆ ನಿರಾಣಿ ಸಮೂಹ ಸಂಸ್ಥೆಯು ನಿರಂತರ ಶ್ರಮಿಸುತ್ತಿದ್ದು, ನಿಮ್ಮೊಡನೆ ನಾವು ಅಭಿವೃದ್ಧಿಯೆಡೆಗೆ ಹೆಜ್ಜೆ ಹಾಕುತ್ತಿದ್ದೇವೆ ಎಂದು ನಿರಾಣಿ ಸಮೂಹ ಸಂಸ್ಥೆಯ ಸಂಸ್ಥಾಪಕ, ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ನಗರದ ನಿರಾಣಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವ ಬಾಯ್ಲರ್ ಪ್ರದೀಪನ ಹಾಗೂ ಮುರುಗೇಶ ನಿರಾಣಿ ಅವರ ಮೊಮ್ಮಗ ಸಮರ್ಥ ವಿಜಯ ನಿರಾಣಿ ತನ್ನ 3ನೇ ವರ್ಷದಲ್ಲಿ ಗಾಲ್ಫ್ ಕಾರ್ಟ್ ಓಡಿಸಿ ದಾಖಲೆ ಬರೆದ ಹಿನ್ನೆಲೆಯಲ್ಲಿ ಇಂಟರ್‌ನ್ಯಾಷನಲ್ ಯಂಗೆಸ್ಟ್‌ ಡ್ರೈವರ್ ಅವಾರ್ಡ್ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹಲವಾರು ದಶಕದಿಂದ ಸಕ್ಕರೆ ಉದ್ಯಮದಲ್ಲಿ ತೊಡಗಿಕೊಂಡಿರುವ ನಿರಾಣಿ ಕುಟುಂಬವನ್ನು ರೈತಕುಲ ತಮ್ಮವರೆಂದು ಬೆಳೆಸಿಕೊಂಡು ಬಂದಿದೆ. ನಿಮ್ಮ ಸಹಕಾರದಿಂದ ಇಂದು‌ ಬಾಗಲಕೋಟೆ ಜಿಲ್ಲೆ ಅದರಲ್ಲೂ ಮುಧೋಳ ತಾಲೂಕು ಸಕ್ಕರೆ ಉದ್ಯಮದಲ್ಲಿ ಬೃಹದ್ದಾಕಾರವಾಗಿ ಬೆಳೆದು ನಿಂತಿದೆ. ನಿಮ್ಮ ಬೆಂಬಲ ಇದೇ ರೀತಿ ಮುಂದುವರೆಯಲಿ ಎಂದರು.ಮಾಜಿಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರ ಏಳಿಗೆಗಾಗಿ ಬಾಗಲಕೋಟೆ ಹಾಗೂ ಮುಧೋಳ ಭಾಗದಲ್ಲಿ ನಿರಾಣಿ ಕುಟುಂಬ ನೀಡಿರುವ ಸೇವೆ ಅಪಾರವಾದದು. ಚಿಕ್ಕ ವಯಸ್ಸಿನಲ್ಲಿಯೇ ಕಾರ್ಖಾನೆ ಆರಂಭಿಸಿ ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ. ಸ್ವಾಭಿಮಾನ, ಶ್ರದ್ಧೆ, ಪರಿಶ್ರಮದಿಂದ ಮುರುಗೇಶ ನಿರಾಣಿಯವರು ಮುಗಿಲೆತ್ತರಕ್ಕೆ ಬೆಳೆದಿದ್ದಾರೆ. ಹಿಡಿದಿರುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಛಾತಿ ನಿರಾಣಿಯವರಿಗೆ ಇದೆ. ರೈತರ ಅಭಿವೃದ್ಧಿಯಲ್ಲಿ ಹೆಚ್ಚಿನ ಶ್ರಮವಹಿಸಿದ್ದಾರೆ ಎಂದರು.ನಿರಾಣಿ ಸಮೂಹ ಸಂಸ್ಥೆಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಸಂಗಮೇಶ ನಿರಾಣಿ ಮಾತನಾಡಿ, ಪ್ರಸಕ್ತ ಸಾಲಿನ ಹಂಗಾಮಿಗೆ ನಿಮ್ಮೆಲ್ಲರ ಸಮ್ಮುಖದಲ್ಲಿ ಅಗ್ನಿ ಪ್ರದೀಪನ ಯಶಸ್ವಿಯಾಗಿ ಜರುಗಿದೆ. ಸಕ್ಕರೆ ಕಾರ್ಖಾನೆ ಹಾಗೂ ಘಟಪ್ರಭಾ ನದಿಯಿಂದ ಮುಧೋಳ ನಾಗಾಲೋಟದಿಂದ ಬೆಳೆಯುತ್ತಿದೆ. ನಿಮ್ಮೆಲ್ಲರ ಸಹಕಾರದಿಂದ ಕಾರ್ಖಾನೆ ಬೆಳೆಯುತ್ತಿದೆ. ನಿಮ್ಮ ಸಹಕಾರ ಇದೇ ರೀತಿ ಇರಲಿ. ಕಳೆದ ವರ್ಷ ರೈತರ ಇಚ್ಛೆಯ ಪ್ರಕಾರ ಬಿಲ್ ನೀಡಿದ್ದೇವೆ. ಹಿಂದಿನ ಬಾಕಿ ನೀಡಲು ಎಲ್ಲರೂ ಕೂಡಿ‌ ಶೀಘ್ರದಲ್ಲಿಯೇ ಸಭೆ ಸೇರಿ ಚರ್ಚಿಸೋಣ ಎಂದರು.ನಿರಾಣಿ ಗ್ರುಪ್‌ನ ವ್ಯವಸ್ಥಾಪಕ ನಿರ್ದೇಶಕ ವಿಜಯ ನಿರಾಣಿ ಮಾತನಾಡಿ, ರೈತ ಕುಟುಂಬದ ಹಿನ್ನೆಲೆಯಿಂದ ಹಂತ, ಹಂತವಾಗಿ ಬೆಳೆದು ರೈತರೊಂದಿಗೆ ಸಮವಾಗಿ ಹೆಜ್ಜೆ ಹಾಕುತ್ತಿರುವ ನಿರಾಣಿಯವರು ಎಲ್ಲರೊಂದಿಗೆ ಬೆಳವಣಿಗೆ ಸಾಧಿಸುತ್ತಿರುವುದು ಸಂತಸ ಹೆಚ್ಚಿಸಿದೆ. ರೈತರ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಶ್ರಮಿಸುವ ನಿರಾಣಿಯವರು ರೈತರ ಜತೆ ನಿಲ್ಲುತ್ತಾರೆ ಎಂದರು.ಇಂಡಿಯಾ ಬುಕ್ ಆಫ್ ರೆಕಾರ್ಡ್‌ನ ತೀರ್ಪುಗಾರ ಹರೀಶ ಶರ್ಮಾ ಮಾತನಾಡಿ, 2022ರಲ್ಲಿ ಮುರುಗೇಶ ನಿರಾಣಿಯವರು ಹಮ್ಮಿಕೊಂಡಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶದಿಂದ ಕರ್ನಾಟಕಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ. ಮುರುಗೇಶ ಅವರು ರೈತರ ಏಳಿಗೆಗಾಗಿ ಹಲವಾರು ಯೋಜನೆ ಜಾರಿಗೊಳಿಸಿ ಹೆಸರುವಾಸಿಯಾಗಿದ್ದಾರೆ. ಜನರ ಕಲ್ಯಾಣಕ್ಕಾಗಿ ಕೈಗೊಂಡಿರುವ ಯೋಜನೆಯಿಂದ ಮುರುಗೇಶ ನಿರಾಣಿಯವರು ತಮಗರಿವಿಲ್ಲದೆ ಆಕಾಶ ದೆತ್ತರಕ್ಕೆ ಬೆಳೆದು ನಿಂತಿದ್ದಾರೆ. ಗಾಲ್ಫ್ ಕಾಟ್ ನಡೆಸುವುದರಲ್ಲಿ ಕೇವಲ 3 ವರ್ಷದಲ್ಲಿ ಯಶಸ್ವಿಗೊಳಿಸಿರುವ ಸಮರ್ಥನಿಗೆ ಶುಭ ಹಾರೈಸಿದರು.ಏಷಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ವಿಶೇಷ ಸಾಧನೆಗೈದ ಸಮರ್ಥ ನಿರಾಣಿಗೆ ನಿರಾಣಿ ಸಮೂಹದ ಕಾರ್ಮಿಕರು ಅಭಿನಂದಿಸಿ ಸನ್ಮಾಸಿದರು. ನಿಡಸೋಸಿಯ ಶ್ರೀಗಳು, ರೂಗಿಯ ನಿತ್ಯಾನಂದಶ್ರೀಗಳು, ಶಿರೋಳ ಗಣಾಚಾರಿ ಶ್ರೀಗಳು, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಕಮಲಾ ಮು.ನಿರಾಣಿ ಸೇರಿದಂತೆ ಇತರೆ ಮಠಾಧೀಶರು, ರೈತರು, ಕಾರ್ಖಾನೆಯ ಸಿಬ್ಬಂದಿ ಇದ್ದರು.

ನಿರಾಣಿ ಕುಟುಂಬದ ಹೊಸ ತಲೆಮಾರಿನ ಕುಡಿ ಸಮರ್ಥ ತನ್ನ 3ನೇ ವಯಸ್ಸಿಗೆ ಗಾಲ್ಫ್ ಕಾರ್ಟ್ ಓಡಿಸುವ ಮೂಲಕ ಅಂತಾರಾಷ್ಟ್ರೀಯ ಯುವ ಡ್ರೈವರ್ ಪ್ರಶಸ್ತಿಗೆ ಭಾಜನನಾಗಿದ್ದಾನೆ. ಅವನ ಮೇಲೆ ನಿಮ್ಮಲ್ಲರ ಆಶೀರ್ವಾದವಿರಲಿ.

-ಮುರುಗೇಶ ನಿರಾಣಿ,

ಮಾಜಿ ಸಚಿವ.

ರೈತರ ಬೆಳವಣಿಗೆಗೆ ನೆರವಾಗುವ ದೃಷ್ಟಿಯಿಂದ ಮುರುಗೇಶ ನಿರಾಣಿಯವರು ಸಕ್ಕರೆ ಕಾರ್ಖಾನೆ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶದ 5 ದೊಡ್ಡ ಕಾರ್ಖಾನೆಗಳು ನಮ್ಮ ತಾಲೂಕಿನಲ್ಲಿವೆ ಎಂದು ಹೇಳಲು ಹೆಮ್ಮೆಯೆನಿಸುತ್ತದೆ. ಗುಣಮಟ್ಟದ ಸಕ್ಕರೆ ತಯಾರಿಯಲ್ಲಿ ನಮ್ಮ ಸಂಸ್ಥೆ ಮುಂಚೂಣಿಯಲ್ಲಿದೆ. ಇದಕ್ಕೆ ಕಾರಣರಾಗಿರುವ ರೈತರಿಗೆ ಅವು ಸದಾಕಾಲ ಚಿರ ಋಣಿಯಾಗಿರುತ್ತೇವೆ. ತಾತನಂತೆ ಮೊಮ್ಮಗನಾದ ಸಮರ್ಥನೂ ಸಹ ದೇಶ‌ಮೆಚ್ಚುವಂತಹ ಕಾರ್ಯ ಮಾಡಿದ್ದಾನೆ. ಅವನಿಗೆ ನಿಮ್ಮೆಲ್ಲರ ಆಶೀರ್ವಾದ ಇರಲಿ.

-ಸಂಗಮೇಶ ನಿರಾಣಿ,

ನಿರಾಣಿ ಸಮೂಹ ಸಂಸ್ಥೆಯ ಕಾರ್ಯನಿರ್ವಾಹಕ ವ್ಯವಸ್ಥಾಪಕರು.

ಮುರುಗೇಶ ನಿರಾಣಿಯವರು ಉದ್ಯಮಿಯಾಗುವುದರ ಜೊತೆ ಮುಂದಿನ ದಿನಮಾನದಲ್ಲಿ ಈ ರಾಜ್ಯದ ಚುಕ್ಕಾಣಿ ಹಿಡಿಯುವಂತಹ ಅವಕಾಶ ದೊರೆಯಲಿ. ಉದ್ಯಮದ ಜೊತೆ ಜತೆಗೆ ದೇಶ ಹಾಗೂ ರಾಜ್ಯದ ಜನರ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಿ. ತಾವು ಕಾರ್ಯ ನಿರ್ವಹಿಸಿರುವ ಪ್ರತಿಯೊಂದು ಕ್ಷೇತ್ರದಲ್ಲೂ ದೊಡ್ಡ ಯಶಸ್ಸು ಗಳಿಸಿದ್ದಾರೆ. ನರೇಂದ್ರ ಮೋದಿಯವರು ಕಳೆದ 10 ವರ್ಷದಲ್ಲಿ ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿದ್ದಾರೆ‌. ಜಾಗತಿಕ ಮಟ್ಟದಲ್ಲಿ ಭಾರತದ ಗೌರವವನ್ನು ಆಕಾಶದೆತ್ತರಕ್ಕೆ ಕೊಂಡ್ಯೊಯುತ್ತಿದ್ದಾರೆ.

-ಕಟ್ಟಾಸುಬ್ರಹ್ಮಣ್ಯ ನಾಯ್ಡು,

ಮಾಜಿ ಸಚಿವರು.