ನಿರಂಜನ ಪ್ರಶಸ್ತಿ, ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ

| Published : May 11 2024, 12:02 AM IST

ಸಾರಾಂಶ

ನಿರಂಜನ ಪ್ರಶಸ್ತಿಯನ್ನು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ವಿ.ಬಿ. ಅರ್ತಿಕಜೆ ಹಾಗೂ ಶಂಕರ ಸಾಹಿತ್ಯ ಪ್ರಶಸ್ತಿಯನ್ನು ಬ್ರಹ್ಮ ಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ ಸಂಸ್ಥೆಯ ಅಧ್ಯಕ್ಷ ರಮೇಶ್ ಭಟ್ ಬೈಪದವು ಅವರಿಗೆ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ನಿರಂಜನರು ತಮ್ಮ ಕಾದಂಬರಿ, ಅಂಕಣಗಳಿಂದ ಅಂದು ಮಾತ್ರವಲ್ಲ ಇಂದಿಗೂ ಜನ ಮನದಲ್ಲಿ ಜೀವಂತವಾಗಿದ್ದಾರೆ. ಪ್ರಗತಿಶೀಲರಾಗಿ ಉಚ್ಚ ಮಟ್ಟದಲ್ಲಿ ಸಾಧನೆ ಮಾಡಿದವರು. ಹಾಗೆಯೇ ಇಂದು ನಿರಂಜನ ಪ್ರಶಸ್ತಿಗೆ ಭಾಜನರಾದ ಪ್ರೊ.ವಿ.ಬಿ. ಅರ್ತಿಕಜೆ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗುವಂಥದ್ದು. ಬಾಲ್ಯದಲ್ಲಿ ಅವರು ಪಟ್ಟ ಶ್ರಮ, ಅವರಲ್ಲಿದ್ದ ಛಲ ಇಂದು ಅವರನ್ನು ಈ ಮಟ್ಟಕ್ಕೆ ಬೆಳೆಯುವಂತೆ ಮಾಡಿದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ ವಾನಳ್ಳಿ ಹೇಳಿದರು.

ಅವರು ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ), ವಿವೇಕಾನಂದ ಸಂಶೋಧನ ಕೇಂದ್ರ, ಡಾ.ಶಿವರಾಮ ಕಾರಂತ ಅಧ್ಯಯನ ಕೇಂದ್ರ, ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ಗುರುವಾರ ಕಾಲೇಜಿನಲ್ಲಿ ನಡೆದ ನಿರಂಜನ ಪ್ರಶಸ್ತಿ ಹಾಗೂ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ನಿರಂಜನ ಪ್ರಶಸ್ತಿಯನ್ನು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ವಿ.ಬಿ. ಅರ್ತಿಕಜೆ ಹಾಗೂ ಶಂಕರ ಸಾಹಿತ್ಯ ಪ್ರಶಸ್ತಿಯನ್ನು ಬ್ರಹ್ಮ ಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ ಸಂಸ್ಥೆಯ ಅಧ್ಯಕ್ಷ ರಮೇಶ್ ಭಟ್ ಬೈಪದವು ಅವರಿಗೆ ಪ್ರದಾನ ಮಾಡಲಾಯಿತು. ಅಧ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ. ಕೃಷ್ಣ ಭಟ್ ಮಾತನಾಡಿ, ಹಿಂದಿನ ಕಾಲದ ಸಾಹಿತಿಗಳು ಎಲೆ ಮರೆಯ ಕಾಯಿಯ ಹಾಗೆ ಉಳಿಯುವುದನ್ನು ಕಾಣಬಹುದು. ಫೇಸ್‌ಬುಕ್‌ ಕಾಲಘಟ್ಟದಲ್ಲಿ

ಪುಸ್ತಕಗಳು ವನಸುಮದಂತೆ ಹಿಂದೆ ಉಳಿದು ಬಿಡುತ್ತಿದೆ. ಇಂದು ಮುದ್ರಣಕ್ಕಿಂತ ಡಿಜಿಟಲ್ ಮಾಧ್ಯಮದಲ್ಲಿ ಬರಹಗಗಳನ್ನು ಹೆಚ್ಚು ಕಾಣಬಹುದು. ಆದರೆ ಪುಸ್ತಕಗಳಿಗೆ ಅದರದೇ ಆದ ಮಹತ್ವವಿದೆ ಎಂದು ಹೇಳಿದರು.

ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಪಕ ಡಾ. ವರದರಾಜ ಚಂದ್ರಗಿರಿ ಮಾತನಾಡಿ ವಿದ್ವಾಂಸರನ್ನು ಸೃಷ್ಟಿ ಮಾಡುವ ಹಾಗೂ ಗೌರವಿಸುವ ಉದ್ದೇಶದಿಂದ ಮಿತ್ತೂರು ಪ್ರತಿಷ್ಠಾನಕ್ಕೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದರು.

ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳಿಕೃಷ್ಣ ಕೆ.ಎನ್. ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ವಿಷ್ಣು ಗಣಪತಿ ಭಟ್ ಸ್ವಾಗತಿಸಿದರು. ಸ್ನಾತಕೋತ್ತರ ವಿಭಾಗದ

ಡೀನ್ ಡಾ. ವಿಜಯಸರಸ್ವತಿ ವಂದಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಮೈತ್ರಿ ಭಟ್ ಕಾರ್ಯಕ್ರಮ ನಿರೂಪಿಸಿದರು.