ಒಪ್ಪತ್ತೇಶ್ವರ ಮಠಕ್ಕೆ ನಿರಂಜನಪ್ರಭು ಶ್ರೀ ಯುಗಾರಂಭ

| Published : Mar 19 2024, 12:48 AM IST

ಸಾರಾಂಶ

ಒಪ್ಪತ್ತೇಶ್ವರಸ್ವಾಮಿ ಮಠಕ್ಕೆ ಮರಿಮಹಾಂತಸ್ವಾಮೀಜಿ 13ನೇ ಪೀಠಾಧಿಪತಿಯಾಗಿ ಮೂರು ದಶಕಗಳ ಕಾಲ ಮಠ ಮುನ್ನಡೆಸಿ ಲಿಂಗೈಕ್ಯರಾದರು.

ಸಿ.ಕೆ. ನಾಗರಾಜ

ಮರಿಯಮ್ಮನಹಳ್ಳಿ: ಸಮೀಪದ ಗರಗ ನಾಗಲಾಪುರದ ಒಪ್ಪತ್ತೇಶ್ವರಸ್ವಾಮಿ ರಥೋತ್ಸವದ ಜಾತ್ರಾ ಮಹೋತ್ಸವ ಮಂಗಳವಾರ (ಮಾ.19ರಂದು) ಸಂಜೆ 5 ಗಂಟೆಗೆ ವಿಜೃಂಭನೆಯಿಂದ ನಡೆಯಲಿದೆ.ರಾಜ್ಯದಲ್ಲಿ ಅನೇಕ ತಪಸ್ವಿಗಳು, ಬಸವಾದಿ ಶರಣರು, ಮಹಾಶಿವಯೋಗಿಗಳು, ವಿರಕ್ತರು, ಸಂತರು ನಡೆದಾಡಿದ ಸಾಲಿನಲ್ಲಿ ಬರುವ ಗರಗ ನಾಗಲಾಪುರದ ಒಪ್ಪತ್ತೇಶ್ವರ ಸ್ವಾಮೀಜಿ ಒಬ್ಬರಾಗಿದ್ದಾರೆ.ಒಪ್ಪತ್ತೇಶ್ವರಸ್ವಾಮಿ ಮಠಕ್ಕೆ ಮರಿಮಹಾಂತಸ್ವಾಮೀಜಿ 13ನೇ ಪೀಠಾಧಿಪತಿಯಾಗಿ ಮೂರು ದಶಕಗಳ ಕಾಲ ಮಠ ಮುನ್ನಡೆಸಿ ಲಿಂಗೈಕ್ಯರಾದರು. ನಂತರ ಮಠ ಮುನ್ನಡೆಸಲು ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಕೊಟ್ಟೂರು ಬಸವಲಿಂಗ ಶ್ರೀ ಅವರು ನಿರಂಜನಪ್ರಭು ಶ್ರೀಗಳನ್ನು 14ನೇ ಪೀಠಾಧಿಪತಿಗಳಾಗಿ ನೇಮಿಸಿದ್ದರು.ಆಗ ಪೂಜ್ಯರು ನೇಮಿಸಿದ ನಂತರ ನಿರಂಜನಪ್ರಭು ಶ್ರೀಗಳು ಮೊದಲು ಗರಗ ನಾಗಲಾಪುರಕ್ಕೆ ಪುರಪ್ರವೇಶ ಮಾಡುವಾಗ ಗ್ರಾಮದ ದಲಿತರ ಕೇರಿ ಮೂಲಕ ಪುರಪ್ರವೇಶಿಸಿ ಹೊಸ ಪರಂಪರೆಗೆ ನಾಂದಿ ಹಾಡಿದರು.ಶ್ರೀಮಠದ ಹಿನ್ನೆಲೆ: ಕ್ರಿ.ಶ. 15ನೇ ಶತಮಾನದಲ್ಲಿ ಶ್ರೀಗುರು ಒಪ್ಪತ್ತೇಶ್ವರ ಮಹಾಶಿವಯೋಗಿಗಳವರಿಂದ ಆರಂಭವಾಗುವ ಶ್ರೀಮಠದ ಇತಿಹಾಸವು ಇಂದಿನವರೆಗೆ ನಿರಂತರವಾಗಿ ಧಾರ್ಮಿಕ, ಸಾಮಾಜಿಕ ವಿಷಯಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿದೆ. ಪೂಜ್ಯರ ತಪೋನುಷ್ಠಾನಕ್ಕೆ ಮಾರುಹೋದ ವಿಜಯನಗರ ಸಾಮ್ರಾಜ್ಯದ ಅರಸರು ಒಪ್ಪತ್ತೇಶ್ವರರ ಪರಮಭಕ್ತರಾಗಿದ್ದು ವಿಶೇಷ.ಮೊದಲು ಮ್ಯಾಸರಹಟ್ಟಿ ಎಂಬ ಹೆಸರಿನಿಂದ ಕರೆಯುತ್ತಿದ್ದ ಈ ಗ್ರಾಮಕ್ಕೆ ಒಪ್ಪತ್ತೇಶ್ವರರ ದರ್ಶನಾರ್ಥಿಯಾಗಿ ಬಂದ ವಿಜಯನಗರ ಸಾಮ್ರಾಜ್ಯದ ರಾಣಿ ನಾಗಲಾದೇವಿ ಪೂಜ್ಯರಿಗೆ ತಮ್ಮ ಭಕ್ತಿ-ಶ್ರದ್ಧೆ ಅರ್ಪಿಸಿದ ಕಾರಣಕ್ಕಾಗಿ ಈ ಗ್ರಾಮಕ್ಕೆ ನಾಗಲಾಪುರ ಎಂಬ ಹೆಸರು ಬಂದಿತೆಂಬ ಸಂಗತಿ ಚರಿತ್ರೆಯಿಂದ ತಿಳಿದು ಬರುತ್ತದೆ.ನಿರಂಜಪ್ರಭು ಶ್ರೀ ಪೂರ್ವಾಶ್ರಮದ ಹೆಸರು ಪರ್ವತಯ್ಯಶಾಸ್ತ್ರಿ ಶೀಲವಂತಮಠ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಂದಗಲ್ಲು ಗ್ರಾಮದಲ್ಲಿ 1995ರ ಮೇ 24ರಂದು ವೇದಮೂರ್ತಿಶಾಸ್ತ್ರಿ ಶೀಲವಂತಮಠ ಮತ್ತು ಗಿರಿಜಾದೇವಿ ಅವರ ಪುತ್ರರಾಗಿ ಜನಿಸಿದರು.ಹಾನಗಲ್ಲಕುಮಾರ ಶ್ರೀಗಳ ಸಮಕಾಲೀನರೂ, ಸಂಸ್ಕೃತ ವಿದ್ವಾಂಸರೂ, ಪಂಡಿತೋತ್ತಮರೂ, ಸಕಲಶಾಸ್ತ್ರಪಾರಂಗತರೂ ಆದ ಇವರಜ್ಜ ಪರ್ವತಯ್ಯಶಾಸ್ತ್ರಿ ಹಾಕಿಕೊಟ್ಟ ಸನ್ಮಾರ್ಗದಲ್ಲಿ ಬೆಳೆದು ಬಂದ ಆಚಾರವಂತ ಧರ್ಮನಿಷ್ಠ ಮನೆತನ ಇವರದ್ದು. ಈ ದಂಪತಿಯ ಎರಡು ಗಂಡು ಮಕ್ಕಳಲ್ಲಿ ಕಿರಿಯವರಾದ ಇವರನ್ನು ಹಿರಿಯರೆಲ್ಲರೂ ಶಿವಯೋಗ ಸಾಧನೆಗಾಗಿ ಶಿವಯೋಗಮಂದಿರ ಸಂಸ್ಥೆಗೆ 2010ರ ಜೂನ್ 8ರಂದು ಸೇರಿಸುತ್ತಾರೆ.ಅಲ್ಲಿ ಶಿವಯೋಗ, ಸಂಸ್ಕೃತ, ಯೋಗಶಾಸ್ತ್ರ, ವಚನಶಾಸ್ತ್ರ, ತತ್ವಶಾಸ್ತ್ರ, ಸಂಗೀತ ಮತ್ತು ಆಧ್ಯಾತ್ಮಿಕ ವಿಷಯಗಳಿಗೆ ತಮ್ಮನ್ನು ಒಡ್ಡಿಕೊಂಡರು. ನಂತರ ‘ಶಿವಯೋಗ ಪ್ರಥಮ’, ‘ಶಿವಯೋಗ ದ್ವಿತೀಯ’ ಶಿಕ್ಷಣ ಪೂರೈಸಿಕೊಂಡಿದ್ದಾರೆ. ಧರ್ಮತತ್ವ, ದರ್ಶನಶಾಸ್ತ್ರ, ವಿವಿಧ ಸಿದ್ಧಾಂತಗಳಂತಹ ಗೂಢ ವಿಷಯಗಳ ತಲಸ್ಪರ್ಶಿ ಅಧ್ಯಯನದ ಬಗೆಗೆ ತೀವ್ರ ಬಯಕೆ ಹೊಂದಿದ ಪೂಜ್ಯರು ಸಂಸ್ಕೃತದಲ್ಲಿ ಶಕ್ತಿ ವಿಶಿಷ್ಟಾದ್ವೈತ ಶಾಸ್ತ್ರದಲ್ಲಿ ಪದವಿ ಪಡೆದುಕೊಂಡಿದ್ದಾರೆ. ತಮ್ಮ ಆಸಕ್ತಿಯ ವಿಷಯಗಳಾದ ಜ್ಯೋತಿಷ್ಯಶಾಸ್ತ್ರ, ಪ್ರವಚನಶಾಸ್ತ್ರ, ಆಯುರ್ವೇದ ಜ್ಞಾನವನ್ನು ಆಳವಾಗಿ ಅಭ್ಯಸಿಸಿ ಅಪರೂಪದ ಯುವಯತಿಗಳಾಗಿದ್ದಾರೆ. ಇವರಲ್ಲಿನ ಆದರ್ಶ ಸ್ವಾಮಿತ್ವದ ಶಕ್ತಿಯನ್ನು ಗುರುತಿಸಿದ ಶಿವಯೋಗಮಂದಿರ ಸಂಸ್ಥೆಯ ಅಧ್ಯಕ್ಷರೂ ಹೊಸಪೇಟೆ-ಬಳ್ಳಾರಿ-ಹಾಲಕೆರೆ ಮಠಾಧಿಪತಿಯೂ ಆಗಿದ್ದ ಜ.ಡಾ.ಸಂಗನಬಸವ ಶ್ರೀ ತಮ್ಮ ಕುರುಗೋಡು ಶಾಖಾ ವಿರಕ್ತಮಠಕ್ಕೆ 2019ರಲ್ಲಿ ಉತ್ತರಾಧಿಕಾರಿಯನ್ನಾಗಿ ನಿಯೋಜಿಸಿದ್ದರು. ಗುರುಗಳು ಲಿಂಗೈಕ್ಯರಾದ ತರುವಾಯ ಅವರ ಉತ್ತರಾಧಿಕಾರಿ ಜ.ಕೊಟ್ಟೂರು ಬಸವಲಿಂಗ ಶ್ರೀ ಇವರನ್ನು ಗರಗ ನಾಗಲಾಪುರದ ಒಪ್ಪತ್ತೇಶ್ವಸ್ವಾಮಿ ಶ್ರೀಮಠಕ್ಕೆ 2022ರ ಜನೇವರಿ 24ರಲ್ಲಿ ದಯಪಾಲಿಸಿದರು.ಜ.ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆಯಲ್ಲಿ 2023ರ ನವೆಂಬರ್ 19ರಂದು ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಶ್ರೀಗಳಿಂದ ‘ಚಿನ್ಮಯಾನುಗ್ರಹ ದೀಕ್ಷೆ’ ಕೊಡಿಸಿ ದೇಶಿಕರನ್ನಾಗಿ ಅನುಗ್ರಹಿಸಿದ್ದರು.ಇದೀಗ ಕೊಟ್ಟೂರು ಬಸವಲಿಂಗ ಶ್ರೀ ಅಪ್ಪಣೆ ಮತ್ತು ಪಾವನ ಸನ್ನಿಧಾನದಲ್ಲಿ ನಿರಂಜನಪ್ರಭು ಶ್ರೀ ನಿರಂಜನ ಚರಪಟ್ಟಾಧಿಕಾರ ಮಹೋತ್ಸವವು 2024ರ ಮಾರ್ಚ್ 15ರಂದು ವಿಜೃಂಭಣೆಯಿಂದ ಆಚರಿಸಲಾಯಿತು.