ಸಾರಾಂಶ
ತೀರ್ಥಹಳ್ಳಿ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ನಿಧನದ ವಾರ್ತೆ ತಿಳಿಯುತ್ತಿದ್ದಂತೆ ಅವರ ಪತ್ನಿಯ ತವರಾದ ತಾಲೂಕಿನ ಕುಡುಮಲ್ಲಿಗೆಯಲ್ಲಿರುವ ದಿವಂಗತ ಚಿನ್ನಯ್ಯಗೌಡರ ಮನೆಯಲ್ಲಿ ನೀರವ ಮೌನ ಆವರಿಸಿತ್ತು.
ತೀರ್ಥಹಳ್ಳಿ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ನಿಧನದ ವಾರ್ತೆ ತಿಳಿಯುತ್ತಿದ್ದಂತೆ ಅವರ ಪತ್ನಿಯ ತವರಾದ ತಾಲೂಕಿನ ಕುಡುಮಲ್ಲಿಗೆಯಲ್ಲಿರುವ ದಿವಂಗತ ಚಿನ್ನಯ್ಯಗೌಡರ ಮನೆಯಲ್ಲಿ ನೀರವ ಮೌನ ಆವರಿಸಿತ್ತು.
ಮನೆಯಲ್ಲಿದ್ದವರೆಲ್ಲರೂ ಎಸ್.ಎಂ.ಕೃಷ್ಣ ಅವರ ಅಂತಿಮ ದರ್ಶನಕ್ಕೆ ಬೆಂಗಳೂರಿಗೆ ತೆರಳಿದ್ದಾರೆ ಎಂದು ಸ್ಥಳೀಯರು ತಿಳಿಸಿದರು.ಸುಮಾರು ಆರು ದಶಕಗಳ ಹಿಂದೆ ಮಲೆನಾಡಿನ ಸಂಬಂಧವನ್ನು ಬಯಸಿ ಕೃಷ್ಣರವರು ಚಿನ್ನಯ್ಯಗೌಡರ ಐವರು ಮಕ್ಕಳಲ್ಲಿ ನಾಲ್ಕನೆಯವರಾಗಿದ್ದ ಪ್ರೇಮಾರವರನ್ನು ವರಿಸಿದ್ದರು. ಈ ಸಂಬಂಧದ ಮೂಲಕ ಕೃಷ್ಣರವರು ತಾಲೂಕಿನ ಬಗ್ಗೆ ವಿಶೇಷ ಅಭಿಮಾನವನ್ನು ಹೊಂದಿದ್ದರು, ರಾಜಕೀಯವಾಗಿ ಹಲವರ ಬೆಳವಣಿಗೆಗೆ ಕಾರಣರಾಗಿದ್ದು, ಮಾತ್ರವಲ್ಲದೆ ಈ ಕ್ಷೇತ್ರದಲ್ಲಿ ಸಾಕಷ್ಟು ಹಿಡಿತವನ್ನು ಕೂಡಾ ಸಾಧಿಸಿದ್ದರು. ತಾಲೂಕಿನ ಹಲವಾರು ಪ್ರಮುಖ ಅಭಿವೃದ್ಧಿ ಕಾರ್ಯಗಳಿಗೆ ನೆರವಾಗಿದ್ದರು.
ಅದರಲ್ಲಿ ಪ್ರಮುಖವಾಗಿ ತೀರ್ಥಹಳ್ಳಿ-ಶಿವಮೊಗ್ಗ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಅನುದಾನ, ರೈತರ ನೀರಾವರಿ ಪಂಪ್‍ಸೆಟ್‍ಗಳಿಗೆ ದರ ರಿಯಾಯ್ತಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಬೆಂಬಲ ನೀಡಿದ್ದರು. ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡುವ ಸಲುವಾಗಿ ಈ ಭಾಗದ ನದಿಯ ನೀರನ್ನು ಬಳಸಿ ಕಿರು ವಿದ್ಯುತ್ ಯೋಜನೆ ಸ್ಥಾಪನೆಗೆ ಆಸಕ್ತಿ ವಹಿಸಿದ್ದರು. ಆದರೆ ಈ ಬಗ್ಗೆ ಸಾರ್ವಜನಿಕವಾಗಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಕೈಬಿಡಲಾಗಿತ್ತು. ಗ್ರಾಮದಲ್ಲಿ ಮಿಡಿದ ಕಂಬನಿ:ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನಕ್ಕೆ ಎಸ್.ಎಂ.ಕೃಷ್ಣ ಪತ್ನಿ ಪ್ರೇಮಾ ಅವರ ತವರು ಮನೆ ಕುಡುಮಲ್ಲಿಗೆ ಗ್ರಾಮದಲ್ಲಿ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಕುಡುಮಲ್ಲಿಗೆಯಲ್ಲಿ ಎಸ್.ಎಂ.ಕೃಷ್ಣ ಅವರ ಬೃಹತ್ ಫ್ಲೆಕ್ಸ್ ಅಳವಡಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಎಸ್.ಎಂ.ಕೃಷ್ಣ ಅವರು ರಾಜ್ಯದ ಅತ್ಯುತ್ತಮ ಆಡಳಿತಗಾರರಾಗಿದ್ದರು ಎಂದು ಬಿಜೆಪಿ ಮುಖಂಡ ಬೇಗುವಳ್ಳಿ ಸತೀಶ್ ಸ್ಮರಿಸಿಕೊಂಡರು. ಗ್ರಾಮಸ್ಥರಾದ ರಮೇಶ್ ಶೆಟ್ಟಿ, ಅಂಜೂರ್ ಕುಡುಮಲ್ಲಿಗೆ, ಅತಿಥಿ ಮನೋಹರ್, ಕಿರಣ್ ಸೇರಿದಂತೆ ಹಲವರು ಇದ್ದರು.