ನದಿ ಶುದ್ಧೀಕರಣಕ್ಕಾಗಿ ನಿರ್ಮಲ ತುಂಗಭದ್ರಾ ಅಭಿಯಾನ: ಮಹಿಮಾ ಪಟೇಲ್‌

| Published : Jan 08 2025, 12:15 AM IST

ನದಿ ಶುದ್ಧೀಕರಣಕ್ಕಾಗಿ ನಿರ್ಮಲ ತುಂಗಭದ್ರಾ ಅಭಿಯಾನ: ಮಹಿಮಾ ಪಟೇಲ್‌
Share this Article
  • FB
  • TW
  • Linkdin
  • Email

ಸಾರಾಂಶ

ತುಂಗಭದ್ರಾ ನದಿ ಶುದ್ಧೀಕರಣಕ್ಕಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಮಹಿಮಾ ಪಟೇಲ್‌ ಹೇಳಿದರು.

ಹೊಸಪೇಟೆ: ತುಂಗಭದ್ರಾ ನದಿ ಶುದ್ಧೀಕರಣಕ್ಕಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ನದಿ ಜನರ ಜೀವನಾಡಿಯಾಗಿದೆ. ಮುಂದಿನ ಪೀಳಿಗೆಗಾಗಿ ತುಂಗಭದ್ರಾ ನದಿಯನ್ನು ಉಳಿಸಿಕೊಳ್ಳಬೇಕಿದೆ ಎಂದು ಮಾಜಿ ಶಾಸಕ ಮಹಿಮಾ ಪಟೇಲ್‌ ಹೇಳಿದರು.

ದಿಲ್ಲಿಯ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಹಾಗೂ ಪರ್ಯಾವರಣ ಟ್ರಸ್ಟ್​​ ಸಹಯೋಗದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ ನಿಮಿತ್ತ ಶೃಂಗೇರಿಯಿಂದ ಕಿಷ್ಕಿಂದೆಯವರೆಗೆ ಹಮ್ಮಿಕೊಂಡಿರುವ 400 ಕಿ.ಮೀ. ಪಾದಯಾತ್ರೆ ದ್ಯೋತಕ ನಗರದ ವಿಜಯನಗರ ಕಾಲೇಜ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು. ನದಿಗಳ ಸಂರಕ್ಷಣೆಗೆ ಒತ್ತು ನೀಡಬೇಕಿದೆ. ತುಂಗಭದ್ರಾ ನದಿ ಎಲ್ಲರ ಬಾಳು ಹಸನುಗೊಳಿಸುತ್ತಿದೆ. ನಾವೆಲ್ಲರೂ ಈ ನದಿಯನ್ನು ಸಂರಕ್ಷಿಸುವ ಕಾರ್ಯ ಮಾಡಬೇಕಿದೆ ಎಂದರು.

ಈಗಿನ ಶಿಕ್ಷಣ ಬದುಕಿಗಾಗಿ ನೀಡುವ ಶಿಕ್ಷಣ ಆಗಿದೆ. ಶಿಕ್ಷಣದಲ್ಲೂ ಆಮೂಲಾಗ್ರ ಬದಲಾವಣೆ ಆಗಬೇಕಿದೆ. ಶಿಕ್ಷಣ ಎಂಬುದು ಕೊಡುಗೆ ನೀಡುವುದಕ್ಕಾಗಿ ಪಡೆಯಬೇಕಿದೆ. ಯುವಕರು ರಾಜಕಾರಣಕ್ಕೆ ಬರಬೇಕು. ಆಗ ಹೊಣೆ ಅರಿತು ಕೆಲಸ ಮಾಡಲಿದ್ದಾರೆ ಎಂದರು.

ವಿದ್ಯಾರ್ಥಿ ಜೀವನದಲ್ಲಿ ಕನಸು ಕಾಣಬೇಕು. ಕನಸು ಕಾಣದಿದ್ದರೆ ಸಾಧನೆ ಮಾಡಲು ಸಾಧ್ಯವಿಲ್ಲ. ನಾವು ಏನು ಕನಸು ಕಾಣುತ್ತೇವೆಯೋ ಅದು ಖಂಡಿತ ಸಾಕಾರಗೊಳ್ಳುತ್ತದೆ. ಸರ್ವೋದಯಕ್ಕಾಗಿ ಜನವರಿ 26ರಿಂದ 29ರ ವರೆಗೆ ಸಾಣೇಹಳ್ಳಿಯಿಂದ ಸಂತೆಬೆನ್ನೂರು ವರೆಗೆ ಪಾದಯಾತ್ರೆ ನಡೆಸಲಾಗುವುದು. ಉತ್ತಮ ಕಾರ್ಯಕ್ಕಾಗಿ 2 ಲಕ್ಷ ಜನ ಪಾದಯಾತ್ರೆ ನಡೆಸಬೇಕು. ಆಗ ಮಾತ್ರ ಬದಲಾವಣೆ ಮಾಡಲು ಸಾಧ್ಯ ಎಂದರು.

ಸ್ವಾಭಿಮಾನ ಆಂದೋಲನದ ಬಸವರಾಜ ಪಾಟೀಲ್‌ ಮಾತನಾಡಿ, ದೇಶದಲ್ಲಿ 71 ನದಿಗಳು ಅಪಾಯದಲ್ಲಿವೆ. ಈ ಪೈಕಿ ತುಂಗಭದ್ರಾ ನದಿ ಕೂಡ ಅಪಾಯದಲ್ಲಿದೆ. ಹಾಗಾಗಿ ಈ ನದಿಯಲ್ಲಿ ತ್ಯಾಜ್ಯ ಸೇರದಂತೆ ಎಚ್ಚರಿಕೆ ವಹಿಸಬೇಕಿದೆ. ಈ ಜಾಗ್ರತೆ ವಹಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು.

ನಂದಿಪುರದ ಶ್ರೀ ಮಹೇಶ್ವರ ಸ್ವಾಮೀಜಿ, ವಿಜಯನಗರ ಕಾಲೇಜ್‌ನ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ತಜ್ಞರಾದ ಶ್ರೀಪತಿ, ಕುಮಾರಸ್ವಾಮಿ, ಮುಖಂಡರಾದ ಕೆ.ಬಿ. ಶ್ರೀನಿವಾಸ್‌ ರೆಡ್ಡಿ, ಸಾಲಿ ಸಿದ್ದಯ್ಯಸ್ವಾಮಿ, ಪಿ. ವೆಂಕಟೇಶ್‌, ಗುಜ್ಜಲ ಗಣೇಶ, ಗಂಟೆ ಸೋಮು, ವೈ. ಯಮುನೇಶ್‌, ಅಯ್ಯಾಳಿ ತಿಮ್ಮಪ್ಪ, ಎಲ್. ಬಸವರಾಜ ಮತ್ತಿತರರಿದ್ದರು. ನಗರದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ ನಿಮಿತ್ತ ಪಾದಯಾತ್ರೆ ನಡೆಯಿತು. ರೈತರು, ಕಾಲೇಜ್‌ ವಿದ್ಯಾರ್ಥಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.